
ನವದೆಹಲಿ[ಆ,11]: ಎರಡು ತಿಂಗಳು ನಾಯಕರಿಲ್ಲದೆ ತ್ರಿಶಂಕುವಿನಂತಿದ್ದ ಕಾಂಗ್ರೆಸ್ ಪಕ್ಷಕ್ಕೆ ಕೊನೆಗೂ ರಾಷ್ಟ್ರೀಯ ಅಧ್ಯಕ್ಷೆ ಸಿಕ್ಕಿದ್ದಾರೆ. ಶನಿವಾರದಂದು ಸುಮಾರು 12 ಗಂಟೆ ನಡೆದಿದ್ದ CWC ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನೇ ಹಂಗಾಮಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ರಾಹುಲ್ ಗಾಂಧಿ ರಾಜೀನಾಮೆ ಬಳಿಕ ಈ ಸ್ಥಾನ ಖಾಲಿಯಾಗಿತ್ತು ಎಂಬುವುದು ಉಲ್ಲೇಖನೀಯ.
2017ರ ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋಲನ್ನು ಎದುರಿಸಿದ ಬಳಿಕ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 2017ರಲ್ಲಿ ಪಕ್ಷದ ಮೇಲುಸ್ತುವಾರಿ ವಹಿಸಿಕೊಂಡಿದ್ದ ರಾಹುಲ್ 2019ರ ಮೇ 25ರಂದು ನಡೆದಿದ್ದ CWC ಮೀಟಿಂಗ್‌ನಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಈ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿದ್ದ ಸೋಲಿನ ಹೊಣೆ ಹೊತ್ತಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪಕ್ಷದ ನೂತನ ಅಧ್ಯಕ್ಷರ ಆಯ್ಕೆಗಾಗಿ CWC ಸಭೆ ಕರೆದಿದ್ದರು. ನಾಯಕರನ್ನು 5 ಉಪ ಸಮಿತಿಗಳನ್ನು ರಚಿಸಿ ಎಲ್ಲಾ ನಾಯಕರ ಸಲಹೆಯನ್ನು ಕೇಳಿದ್ದರು. ಸಭೆಯಲ್ಲಿ ಪಕ್ಷದ ಪ್ರಾದೇಶಿಕ ಅಧ್ಯಕ್ಷ, ಸಚಿವರು, ಸಂಸದರು ಹಾಗೂ ಶಾಸಕರ ಅಭಿಪ್ರಾಯವನ್ನು ಪಡೆಯಲಾಗಿತ್ತು. ಈ ವೇಳೆ ರಾಹುಲ್ ಗಾಂಧಿಯನ್ನು ಅಧ್ಯಕ್ಷರನ್ನಾಗಿ ಮುಂದುವರೆಸುವುದೇ ಒಳ್ಳೆಯದು. ಅವರ ಬಳಿ ರಾಜೀನಾಮೆ ಹಿಂಪಡೆಯಲು ತಿಳಿಸುವಂತೆ ಎಲ್ಲಾ ನಾಯಕರು ಸೂಚಿಸಿದ್ದರು.
ರಾಹುಲ್ ಗುಡ್‌ಬೈ: ಮಧ್ಯಂತರ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಆಯ್ಕೆ
ಆದರೆ ರಾಹುಲ್ ಗಾಂಧಿ ಈ ಮನವಿಯನ್ನು ತಳ್ಳಿ ಹಾಕಿದರು. ಏನೇ ಆದರೂ ತಾನು ಅಧ್ಯಕ್ಷನಾಗುವದಿಲ್ಲ, ರಾಜೀನಾಮೆ ಹಿಂಪಡೆಯಲ್ಲ ಎಂದರು. ಹೀಗಿರುವಾಗ ಕಾಂಗ್ರೆಸ್‌ನ ಇತರ ಕೆಲ ಹೆಸರುಗಳನ್ನು ಪ್ರಸ್ತಾಪಿಸಿದರು. ಕೆಲವರು ಗಾಂಧೀಯೇತರ ಹೆಸರುಗಳನ್ನು ಸೂಚಿಸಿದ್ದರು. ಅಂತಿಮವಾಗಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸೋನಿಯಾ ಗಾಂಧಿಯನ್ನೇ ಪಕ್ಷದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸೋಣ ಎಂದು ಅಲಹೆ ನೀಡಿದರು.
ಈ ಸಲಹೆ ಆಲಿಸಿದ ಸೋನಿಯಾ ಸಾಧ್ಯವಿಲ್ಲ ಎಂದು ನಿರಾಕರಿಸಿದರು. ಅತ್ತ ಪ್ರಿಯಾಂಕಾ ಗಾಂಧಿ ಕೂಡಾ ಈ ಸಲಹೆಗೆ ಆತಂಕ ವ್ಯಕ್ತಪಡಿಸಿದ್ದರು. ಹೀಗಿರುವಾಗ ಸೋನಿಯಾ ಗಾಂಧಿ ಇದಕ್ಕೆ ಒಪ್ಪಿದರೆ ಯಾರೂ ಈ ಕುರಿತಾಗಿ ಮಾತನಾಡುವುದು ಬೇಡ ಎಂದು ಚಿದಂಬರಂ ತಿಳಿಸಿದರು. ಇದರ ಬೆನ್ನಲ್ಲೇ ಮಾಜಿ ರಕ್ಷಣಾ ಸಚಿವ ಎ. ಕೆ. ಆ್ಯಂಟನಿ ಈ ಪ್ರಸ್ತಾಪವನ್ನು ವಿರೋಧಿಸಲು ಎದ್ದು ನಿಂತರು. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ತಡೆದರು. 'ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದಾರೆ, ಅಧ್ಯಕ್ಷ ಸ್ಥಾನ ಬೇಡ ಎಂದಿದ್ದಾರೆ. ಹೀಗಿರುವಾಗ ಸೋನಿಯಾ ಮೇಡಂ ಈ ಕರ್ತವ್ಯ ವಹಿಸಿಕೊಳ್ಳುವುದೇ ಉತ್ತಮ' ಎಂಬುವುದು ಜ್ಯೋತಿರಾದಿತ್ಯ ಮಾತಾಗಿತ್ತು.
ಇವೆಲ್ಲದರ ನಡುವೆ ಅಂಬಿಕಾ ಸೋನಿ, ಆಶಾ ಕುಮಾರಿ ಹಾಗೂ ಕುಮಾರಿ ಶೈಲಜಾ ಸೇರಿದಂತೆ ಹಲವು ನಾಯಕರು ಪಕ್ಷ ಗಾಂಧೀ ಕುಟುಂಬದ ನಾಯಕರಿಲ್ಲದೇ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಮನವೊಲಿಸುವಂತೆ ಸೋನಿಯಾ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಸೋನಿಯಾ ತನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ.
ಹೀಗಿರುವಾಗ ನೀವೇ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಸೋನಿಯಾರಲ್ಲಿ ಕೇಳಿಕೊಂಡಿದ್ದಾರೆ. CWC ಎಲ್ಲಾ ಸದಸ್ಯರೂ ಈ ಅಭಿಪ್ರಾಯವನ್ನು ಪುನರುಚ್ಛರಿಸಿದ್ದಾರೆ. ಅಂತಿಮವಾಗಿ 72 ವರ್ಷದ ಸೋನಿಯಾ ಈ ಮನವಿಗೆ ಸೈ ಎಂದಿದ್ದಾರೆ. ಸೋನಿಯಾ ಗಾಂಧಿ[1998 ರಿಂದ 2017]ರವರೆಗೆ, 19 ವರ್ಷಗಳವರೆಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಸೋನಿಯಾ ಹೊಸದೊಂದು ತಂಡ ರಚಿಸುವವರೆಗೂ AICC ಪದಾಧಿಕಾರಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಮದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.