
ಸತತ ಮೂರು ವರ್ಷಗಳ ಕಾಲ ಕೃಷಿ ಉತ್ಪಾದನೆಯಲ್ಲಿ ಹಿನ್ನಡೆ ಅನುಭವಿಸುತ್ತಲೇ ಬಂದಿರುವ ರಾಜ್ಯದ ಅನ್ನದಾತನಿಗೆ ಈ ವರ್ಷ ಸಮಾಧಾನಕರ ದಿನಗಳು ಎದುರಾಗಲಿವೆ. ರಾಜ್ಯದಲ್ಲಿ ಈ ವರ್ಷ ತಡವಾಗಿಯಾದರೂ ವರುಣದೇವ ದ್ವಿದಳ ಧಾನ್ಯ ಬೆಳೆಗಾರರ ಕೈ ಹಿಡಿದಿದ್ದಾನೆ. ಭತ್ತ ಮತ್ತು ಶೇಂಗಾ ಬೆಳೆಗಳು ಕೈ ಕೊಟ್ಟರೂ ರಾಗಿ ಮತ್ತು ತೊಗರಿ ಉತ್ತಮ ಇಳುವರಿ ಕಾಣುವ ನಿರೀಕ್ಷೆ ಮೂಡಿದೆ.
ಏಕದಳ ಧಾನ್ಯಗಳಾದ ಭತ್ತ, ಜೋಳ, ರಾಗಿ, ಮುಸುಕಿನ ಜೋಳ ಹಾಗೂ ಗೋಧಿಯನ್ನು 33.66 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಮಾಡಲಾಗುತ್ತಿದ್ದು, 83 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಅದೇ ರೀತಿ ದ್ವಿದಳ ಧಾನ್ಯಗಳಾದ ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದಿ ಮತ್ತಿತರ ಧಾನ್ಯಗಳನ್ನು 16.95 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗುತ್ತಿದ್ದು, 8 ಲಕ್ಷ ಟನ್ ಉತ್ಪಾದನೆಯಾಗಲಿದೆ.
ಎಣ್ಣೆಕಾಳುಗಳಾದ ಶೇಂಗಾ, ಎಳ್ಳು, ಸೂರ್ಯಕಾಂತಿ, ಸಾಸಿವೆ, ಸೋಯಾ ಅವರೆ, ಅಗಸೆ ಮತ್ತಿತರ ಪದಾರ್ಥಗಳನ್ನು 11.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, 9 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ನಿರಾಶಾದಾಯಕ ಸ್ವರೂಪದಲ್ಲಿ ರಾಜ್ಯವನ್ನು ಪ್ರವೇಶಿಸಿದ್ದರೂ ಆಗಸ್ಟ್ ಎರಡನೇ ವಾರದ ನಂತರ ಚುರುಕುಗೊಂಡಿತು. ಮುಂಗಾರು ಮಳೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸದ್ಯ ಆಶಾದಾಯಕವಾಗಿದೆ. ಹೀಗಾಗಿ ಮುಂದಿನ 12 ದಿನಗಳ ಪೈಕಿ ಸಾಮಾನ್ಯ ಮಳೆ ಬಂದರೂ ರಾಜ್ಯದ ವಾಡಿಕೆ ಪ್ರಮಾಣದ ಮಳೆಯನ್ನು ಪಡೆದಂತಾಗುತ್ತದೆ. ಸೆ.18ರ ಅಂತ್ಯಕ್ಕೆ ರಾಜ್ಯದಲ್ಲಿ 745 ಮಿಮೀ ಮಳೆ ಬಿದ್ದಿದ್ದು, ಇನ್ನೊಂದು ವಾರದಲ್ಲಿ ವಾಡಿಕೆಯ 836 ಮಿಮೀ ತಲುಪಲಿದೆ ಎಂದು ಕೃಷಿ ಇಲಾಖೆ ಉನ್ನತ ಮೂಲಗಳು ಹೇಳಿವೆ.
6 ಲಕ್ಷ ಹೆಕ್ಟೇರ್ ಬಿತ್ತನೆ ಖೋತಾ: ರಾಜ್ಯದಲ್ಲಿ ಈ ವರ್ಷ 73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ ಸೆಪ್ಟೆಂಬರ್ 17ರ ತನಕ ಕೃಷಿ ಇಲಾಖೆಗೆ ಜಿಲ್ಲಾವಾರು ಕಚೇರಿಗಳಿಂದ ಬಂದಿರುವ ಅಧಿಕೃತ ಬಿತ್ತನೆ ಮಾಹಿತಿ ಅನ್ವಯ ಕೇವಲ 60ಲಕ್ಷ ಹೆಕ್ಟೇರ್ ಬಿತ್ತನೆ ನಡೆದಿದೆ.
ಅದರಲ್ಲೂ ರಾಜ್ಯದಲ್ಲಿ ಬೆಳೆಯುವ ಪ್ರದೇಶಗಳಲ್ಲಿ ಮುಂಗಾರು ತಡವಾಗಿ ಚೇತರಿಸಿಕೊಂಡ ಪರಿಣಾಮ ರಾಗಿ ಬಿತ್ತನೆ ತಡವಾಗಿದೆ. ಹೀಗಾಗಿ ಉಳಿದಿರುವ 12 ದಿನಗಳನ್ನು ಪರಿಗಣಿಸಿದರೆ ಹೆಚ್ಚೆಂದರೆ ಸೆಪ್ಟೆಂಬರ್ ಅಂತ್ಯಕ್ಕೆ 65 ಲಕ್ಷ ಹೆ. ಬಿತ್ತನೆ ಪ್ರಮಾಣ ತಲುಪಬಹುದು. ಆದರೆ ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಕಡಿಮೆ ಮಳೆ ಬಿದ್ದರೂ 71.67 ಲಕ್ಷ ಹೆಕ್ಟೇರ್‌ನಷ್ಟು ಬಿತ್ತನೆ ಮಾಡಲಾಗಿತ್ತು. ಈ ಹಿನ್ನಡೆಗೆ ಹಲವಾರು ಕಾರಣಗಳನ್ನು ಕೃಷಿ ಇಲಾಖೆ ಪತ್ತೆ ಮಾಡಿದೆ. ವಿಶೇಷವಾಗಿ ಕಾವೇರಿ ಕಣಿವೆಯ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಮತ್ತಿತರ ಜಿಲ್ಲೆಗಳಲ್ಲಿ ಈ ಬಾರಿ ಭತ್ತ ನಿರೀಕ್ಷಿತ ಮಟ್ಟದಲ್ಲಿ ನಾಟಿ ಆಗಿಲ್ಲ. ಮಾತ್ರವಲ್ಲ, ಭತ್ತ ಬೆಳೆಯುವ ಇತರ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲೂ ಈ ವರ್ಷ ಭತ್ತದ ನಾಟಿ ಕಡಿಮೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಒಟ್ಟು ಭತ್ತದ ವಿಸ್ತೀರ್ಣ ಈವರೆಗೆ ಕೇವಲ 6 ಲಕ್ಷ ಹೆಕ್ಟೇರ್ ಮಾತ್ರ ಆಗಿದೆ. ಕೃಷಿ ಇಲಾಖೆ ಈ ವರ್ಷ 10.40 ಲಕ್ಷ ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಗುರಿ ಹೊಂದಿತ್ತು ಎಂಬುದು ಗಮನಾರ್ಹ. ಹೀಗಾಗಿ ಸರಾಸರಿ 4 ಲಕ್ಷ ಹೆಕ್ಟೇರ್‌ನಷ್ಟು ಭತ್ತದ ನಾಟಿ ಖೋತಾ ಆಗಿದೆ. ಇದಕ್ಕೆ ಕಾರಣವೆಂದರೆ, ಕಳೆದ ಜುಲೈನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬರಲೇ ಇಲ್ಲ. ಹೀಗಾಗಿ ಭತ್ತ ಮಾತ್ರವಲ್ಲದೇ ತುಮಕೂರು, ಚಿತ್ರದುರ್ಗ, ಗದಗ ಮತ್ತಿತರ ಪ್ರದೇಶಗಳಲ್ಲಿ ಪ್ರಮುಖವಾಗಿ ಬಿತ್ತನೆಯಾಗಬೇಕಿದ್ದ ಶೇಂಗಾ ಬಿತ್ತನೆ ಕೂಡ ಆಗಲಿಲ್ಲ.
ಇದರ ಪರಿಣಾಮವಾಗಿ ಈ ವರ್ಷ ಭತ್ತ ಮತ್ತು ಶೇಂಗಾದ ಇಳುವರಿಯಲ್ಲೂ ಸಾಕಷ್ಟು ಕುಂಠಿತ ಆಗಲಿದೆ. ಇದೇ ವೇಳೆ ಕಬ್ಬು ಬೆಳೆಯಲ್ಲೂ ಸಹ ಹಿನ್ನಡೆ ಆಗಲಿದೆ. ಏಕೆಂದರೆ ಕಳೆದ ವರ್ಷಕ್ಕಿಂತ ಒಂದೇ ಒಂದು ಎಕರೆ ಹೆಚ್ಚುವರಿ ಕಬ್ಬು ಬಿತ್ತನೆ ಈ ವರ್ಷ ಆಗಿಲ್ಲ. ಇದೆಲ್ಲದರ ಜತೆಗೆ ದ್ವಿದಳ ಧಾನ್ಯಗಳ ಪರಿಸ್ಥಿತಿ ಇದ್ದುದರಲ್ಲೇ ಆಶಾದಾಯಕವಾಗಿದೆ. ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದು, ಒಣ ಹವೆ ಇದ್ದುದರಿಂದ ಬಿತ್ತನೆ ಆಗಿರುವ ಬೆಳೆಗಳ ಇಳಿವರಿ ಸಾಕಷ್ಟು ಹಿನ್ನಡೆ ಆಗಲಿದೆ. ಆದರೆ ಜುಲೈ ಮತ್ತು ನಂತರ ಬಿತ್ತನೆ ಆಗಿರುವ ಬೆಳೆಗಳು ಇಳುವರಿ ಸಾಕಷ್ಟು ಉತ್ತಮವಾಗಿರಲಿದೆ. ಆದರೆ ಏಕದಳ ಧಾನ್ಯಗಳು ಈ ಬಾರಿ ಅಷ್ಟೇನೂ ಫಲ ಕೊಡುವುದಿಲ್ಲ. ವಿಶೇಷವಾಗಿ ಭತ್ತ ಮತ್ತು ಮುಸುಕಿನಜೋಳ ಬೆಳೆಗಳಲ್ಲಿ ಇಳುವರಿ ಈ ಬಾರಿ ಇಳುವರಿ ಶೇ. 25ರಷ್ಟು ಕಡಿಮೆ ಆಗಲಿದೆ. ಎಣ್ಣೆ ಕಾಳುಗಳ ಬೆಳೆ ಶೇಂಗಾ ಮತ್ತು ಸೂರ್ಯಕಾಂತಿ ಬಿತ್ತನೆ ಕಡಿಮೆ ಆಗಿರುವುದು ಮಾತ್ರವಲ್ಲದೇ ಇಳುವರಿಯಲ್ಲೂ ಶೇ.40ರಷ್ಟು ಹಿನ್ನಡೆ ಆಗಲಿದೆ ಎಂದು ಕೃಷಿ ಇಲಾಖೆ ಸಮೀಕ್ಷೆ ನಡೆಸಿದೆ.
ಮಳೆ ಸದ್ಯ ವಾಡಿಕೆ ಮಳೆಗಿಂತ ಶೇ.10ರಷ್ಟು ಕಡಿಮೆ ಇದೆ. ಕಳೆದ ವರ್ಷ ಜೂನ್ ಮತ್ತು ಜುಲೈನಲ್ಲಿ ಮಳೆ ಬಿದ್ದರೂ ನಂತರ ಮುಂಗಾರು ಕ್ಷೀಣಿಸುತ್ತಾ ಸಾಗಿತ್ತು. ಹಾಗಾಗಿ ಶೇ.30ರಷ್ಟು ಕಡಿಮೆ ಮಳೆ ಬಿದ್ದಿತ್ತು. ಈ ಸಲ ಜೂನ್‌ನಲ್ಲಿ ಸಾಮಾನ್ಯ, ಜುಲೈನಲ್ಲಿ ಶೇ.30ರಷ್ಟು ಕುಂಠಿತ ಆಗಸ್ಟ್‌ನಲ್ಲಿ ಶೇ.5ರಷ್ಟು ಸಾಮಾನ್ಯಕ್ಕಿಂತ ಹೆಚ್ಚು ಮಳೆ ಇತ್ತು. ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಶೇ.40ರಷ್ಟು ಅಧಿಕ ಮಳೆ ಬಿದ್ದಿದೆ. ಹೀಗಾಗಿ ರಾಜ್ಯದಲ್ಲಿ ಸಾಮಾನ್ಯ ಮಳೆ ಅಂದರೆ 836 ಮಿಲಿ ಮೀಟರ್ ಮಳೆ ಬೀಳುತ್ತದೆ. ಸೆಪ್ಟೆಂಬರ್ 18ರವರೆಗೆ 745 ಮಿಮೀ ಮಳೆ ಬಿದ್ದಿದೆ. ಇನ್ನುಳಿದ 12 ದಿನಗಳಲ್ಲಿ 830 ಮಿಮೀ ತಲುಪುವ ಇಲ್ಲವೇ ಅದಕಿಂತ ಹೆಚ್ಚು ಮಳೆ ಬೀಳಲಿದೆ ಎಂದು ಇಲಾಖೆ ಅಂದಾಜು ಮಾಡಿದೆ.
ಈ ಬಾರಿ ರಾಜ್ಯದ ಇತರೆ ಪ್ರದೇಶಕ್ಕಿಂತ ಉತ್ತರ ಕರ್ನಾಟಕದಲ್ಲಿ ಮಳೆ ಪ್ರಮಾಣ ಸಾಕಷ್ಟು ಚೇತರಿಕೆ ಕಂಡಿದೆ. ಮಳೆ ಆಶ್ರಿತ ಪ್ರದೇಶದಲ್ಲಿ ಶೇಂಗಾ ಹೊರತುಪಡಿಸಿ ಇತರೆ ಬೆಳೆಗಳ, ಅದರಲ್ಲೂ ಜುಲೈ ನಂತರ ಬಿತ್ತನೆ ಮಾಡಿದ ಬೆಳೆಗಳು ಉತ್ತಮ ಇಳುವರಿ ಕೊಡಲಿವೆ. ಇದೇ ವೇಳೆ ಈ ವರ್ಷ ಮುಂಗಾರಿನ ಕೊನೆಯ ಚರಣದಲ್ಲಿ ಉತ್ತಮ ಮಳೆ ಬಿದ್ದಿರುವುದರಿಂದ ಹಿಂಗಾರು ಬೆಳೆಗೆ ವಾತಾವರಣ ಅನುಕೂಲಕರವಾಗಿದೆ. ಮುಂಗಾರಿನಲ್ಲಿ ಉಂಟಾಗಿರುವ ಬಿತ್ತನೆ ಪ್ರಮಾಣದ ಹಿನ್ನಡೆಯನ್ನು ಹಿಂಗಾರಿನಲ್ಲಿ ಸರಿದೂಗಿಸಿಕೊಳ್ಳಲು ಅವಕಾಶವಿದೆ. ಈ ಕಾರಣಕ್ಕಾಗಿ ಮಳೆಯಾಶ್ರಿತ ಕೃಷಿ ಅವಲಂಬಿಸಿರುವ ರೈತರು ಈ ಬಾರಿ ಹೆಚ್ಚು ಆತಂಕಪಡಬೇಕಿಲ್ಲ. ಇನ್ನು ಕೃಷ್ಣಾ ಹಾಗೂ ಕಾವೇರಿ ಕಣಿವೆಯ ನೀರಾವರಿ ಆಶ್ರಿತ ರೈತರಿಗಂತೂ ಕಳೆದ 3 ವರ್ಷಗಳಿಗೆ ಹೋಲಿಸಿದರೆ ಹೆಚ್ಚು ಅವಕಾಶಗಳಿವೆ ಎನ್ನುತ್ತವೆ ಕೃಷಿ ಇಲಾಖೆ ಉನ್ನತ ಮೂಲಗಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.