ಬಿಜೆಪಿ ಅಕ್ರಮ ಗಣಿ ಪ್ರಕರಣ ಎಸ್‌ಐಟಿಗೆ : ಸಿಬಿಐ ಮುಗಿಸಿದ್ದ ಕೇಸು ಮರುತನಿಖೆಗೆ ರಾಜ್ಯ ಸರ್ಕಾರ ನಿರ್ಧಾರ

By Suvarna Web DeskFirst Published Jan 18, 2018, 8:33 AM IST
Highlights

ಅಕ್ರಮ ಗಣಿಗಾರಿಕೆ ಕುರಿತು ತನಿಖೆ ಮಾಡಿದ್ದ ಸಿಬಿಐ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು 20 ಪ್ರಕರಣವನ್ನು ಇತ್ಯರ್ಥ ಮಾಡಿತ್ತು

ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಮರುಜೀವ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕರ್ನಾಟಕ ಮತ್ತು ಗೋವಾ ರಾಜ್ಯದ ಬಂದರಿನಿಂದ ಅಕ್ರಮ ಅದಿರು ಸಾಗಾಟ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡುವ ತೀರ್ಮಾನವನ್ನು ತೆಗೆದುಕೊಂಡಿದೆ. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ಮಾಡಿದ್ದ ಸಿಬಿಐ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು 20 ಪ್ರಕರಣವನ್ನು ಇತ್ಯರ್ಥ ಮಾಡಿತ್ತು. ಈ ಬಗ್ಗೆ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಸಂಪುಟ ಉಪ ಸಮಿತಿ ಸಿಬಿಐ ನೀಡಿದ ತನಿಖಾ ವರದಿ ಪರಿಶೀಲಿಸಿ ಎಸ್‌ಐಟಿಯಿಂದ ತನಿಖೆ ಸೂಕ್ತ ಎಂದು ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಬುಧವಾರ ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿ ಮರು ತನಿಖೆ ನಡೆಸಲು ತೀರ್ಮಾನಿಸಿತು.

ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಕಾರವಾರದ ಬೇಲೆಕೇರಿ ಬಂದರು ಹಾಗೂ ಗೋವಾದ ಪಣಜಿ ಮತ್ತು ಮರ್ಮಗೋವಾ ಬಂದರಿನಿಂದ ರಾಜ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಿರುವ ಬಗ್ಗೆ ತನಿಖೆ ಮಾಡಿದ್ದ ಸಿಬಿಐ, ವರದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಹೇಳಿ ಪ್ರಕರಣವನ್ನು ಕೊನೆ ಮಾಡಿತ್ತು. ಆದರೆ ಆಗಿನ ಲೋಕಾಯುಕ್ತರು ನೀಡಿದ್ದ ವರದಿಯಲ್ಲಿ ಸಾಕಷ್ಟು ದಾಖಲೆಗಳ ಆಧಾರದ ಮೇಲೆ ಅಕ್ರಮ ನಡೆದಿದೆ ಎಂದು ತಿಳಿಸಿದ್ದರು. ಹೀಗಿರುವಾಗ ಸಿಬಿಐ ಅಕ್ರಮ ನಡೆದಿರುವ ಬಗ್ಗೆ ಸಾಕ್ಷ್ಯಾಧಾರ ಇಲ್ಲ ಎಂದು ಹೇಳಿರುವುದು ಸೋಜಿಗವಾಗಿದೆ. ಹೀಗಾಗಿ ಪ್ರಕರಣವನ್ನು ಮತ್ತೆ ಹೊಸದಾಗಿ ಎಸ್ ಐಟಿಯಿಂದ ತನಿಖೆ ಮಾಡಿ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಚರ, ಸ್ಥಿರ ಆಸ್ತಿ ಜಪ್ತಿಗೆ ಕ್ರಮ: ಇದೇ ವೇಳೆ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಗಣಿ ಗುತ್ತಿಗೆದಾರರು, ಸಾಗಾಣೆದಾರರು, ವ್ಯಾಪಾರಿಗಳು, ರಫ್ತುಗಾರರ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲು ಕಾನೂನಿನ ಬಲ ನೀಡುವ ನಿಯಮ ಸೇರ್ಪಡೆಗೆ ಸಂಪುಟ ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದರು.

ಗೋವಾದ ಪಣಜಿ ಮತ್ತು ಮರ್ಮಗೋವಾ ಬಂದರಿನಿಂದ ನಮ್ಮ ರಾಜ್ಯದ ಕಬ್ಬಿಣದ ಅದಿರು ರಫ್ತಾಗಿರುವುದರಿಂದ ಗೋವಾದಲ್ಲಿಯೂ ಸಹ ತನಿಖೆ ಮಾಡಲು ಅವಕಾಶವಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯದ ಅದಿರು ಪಕ್ಕದ ತಮಿಳುನಾಡು, ಆಂಧ್ರಪ್ರದೇಶ ರಾಜ್ಯದ ಬಂದರಿನಿಂದ ಅಕ್ರಮ ಸಾಗಣೆ ಆಗಿದ್ದರೂ, ಈ ಎರಡು ರಾಜ್ಯಗಳಲ್ಲಿ ಸಿಬಿಐ ತನಿಖೆ ಮಾಡುತ್ತಿದೆ. ಗೋವಾ ಮತ್ತು ಕರ್ನಾಟಕದ ಪ್ರಕರಣಗಳ ತನಿಖೆಯನ್ನು ಅಂತ್ಯಗೊಳಿಸಿದ ಕಾರಣ ಎಸ್‌ಐಟಿಗೆ ಒಪ್ಪಿಸಲು ಸರ್ಕಾರ ನಿರ್ಧರಿಸಿದೆ. ಸಿಬಿಐ ನೀಡಿದ್ದ ವರದಿಯಲ್ಲಿ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಿತ್ತು. ಹಾಗಾಗಿ ಪ್ರಕರಣದ ಮರು ವಿಚಾರಣೆಗೆ ಸಿಬಿಐ ಅಥವಾ ಸುಪ್ರೀಂಕೋರ್ಟ್ ಅನುಮತಿ ಬೇಕಿಲ್ಲ ಎಂದು ಹೇಳಿದರು.

click me!