ಇಂದು ಸಿದ್ದು ಸರ್ಕಾರದ ಅಂತಿಮ ಬಜೆಟ್ : 12ನೇ ಆಯವ್ಯಯದಲ್ಲಿ ಮಹತ್ವದ ಘೋಷಣೆ ಏನಿರುತ್ತೆ ?

By Suvarna Web deskFirst Published Mar 15, 2017, 2:31 AM IST
Highlights

ಚುನಾವಣಾ ವರ್ಷ'ವಾಗಿರೋದರಿಂದ ಸಾಕಷ್ಟು ಜನಪ್ರಿಯ ಘೋಷಣೆ ಮಾಡುವ ಸಾಧ್ಯತೆ ಇದೆ. ಜೊತೆಗೆ ಪಂಚ ರಾಜ್ಯಗಳ ಚುನಾವಣೆ ನಂತರ ಬಿಜೆಪಿಯ ನಾಗಲೋಟ ಕಂಡಿರೋ ಸಿದ್ದರಾಮಯ್ಯನವರು ಇನ್ನೊಂದಿಷ್ಟು ಜನಪ್ರಿಯ ಬಜೆಟ್​​  ಮಂಡಿಸೋ  ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಬೆಂಗಳೂರು(ಮಾ.15): ಇಂದು  ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಕೊನೆಯ ಬಜೆಟ್ ಮಂಡಿಸಲಿದ್ದಾರೆ. ರಾಜಕೀಯ ಜೀವನದ 12ನೇ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿಗಳು ಏನೆಲ್ಲ ನೂತನ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂಬ ನಿರೀಕ್ಷೆ  ರಾಜ್ಯದ ಜನತೆಗೆ ಇದ್ದೆ ಇರುತ್ತದೆ.

ಚುನಾವಣಾ ವರ್ಷ'ವಾಗಿರೋದರಿಂದ ಸಾಕಷ್ಟು ಜನಪ್ರಿಯ ಘೋಷಣೆ ಮಾಡುವ ಸಾಧ್ಯತೆ ಇದೆ. ಜೊತೆಗೆ ಪಂಚ ರಾಜ್ಯಗಳ ಚುನಾವಣೆ ನಂತರ ಬಿಜೆಪಿಯ ನಾಗಲೋಟ ಕಂಡಿರೋ ಸಿದ್ದರಾಮಯ್ಯನವರು ಇನ್ನೊಂದಿಷ್ಟು ಜನಪ್ರಿಯ ಬಜೆಟ್​​  ಮಂಡಿಸೋ  ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಪಂಚ ರಾಜ್ಯಗಳಲ್ಲಿ ಚುನಾವಣೆ ಫಲಿತಾಂಶದಿಂದ ಬಿಜೆಪಿ ಬೀಗುತ್ತಿದೆ. 5 ರಾಜ್ಯಗಳಲ್ಲಿ 4 ರಾಜ್ಯಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಬಿಜೆಪಿ ಮುಂದಡಿ ಇಟ್ಟಿದೆ. ಬಿಜೆಪಿ ಮುಂದಿನ ಟಾರ್ಗೆಟ್​ ಲಿಸ್ಟ್​​ನಲ್ಲಿ ಕರ್ನಾಟಕವೂ ಇದೆ ಅಂತಾ ಹೇಳಲಾಗ್ತಿದೆ. ಹೀಗಾಗಿ ಈ ಬಾರಿ ಮಂಡಿಸೋ ಬಜೆಟ್​​ ಮೇಲೂ ನಿರೀಕ್ಷೆಗಳು ಗರಿಗೆದರಿವೆ. ವಿಶೇಷ ಅಂದರೆ ಈ ಬಾರಿಯ ಬಜೆಟ್ ಗಾತ್ರ​ 2 ಲಕ್ಷ ಕೋಟಿ ರೂಪಾಯಿಗೆ ಮುಟ್ಟುವ ಅಂದಾಜಿದೆ.

ರಾಜ್ಯ ಬಜೆಟ್ ನಿರೀಕ್ಷೆಗಳು

ರೈತರ ಸಾಲ ಮನ್ನಾಗೆ ಚಿಂತನೆ : 25 ಸಾವಿರ ರೂ ವರೆಗೂ ಸಾಲ ಮನ್ನಾ ಸಾಧ್ಯತೆ

ರಾಜ್ಯದ ರೈತರನ್ನು ಸತತ ಬರಗಾಲ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರು ಪಡೆದ ಬೆಳೆಸಾಲವನ್ನು ಮನ್ನಾ ಮಾಡಲು ಭಾರಿ ಒತ್ತಡವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಚಿಂತನೆ ನಡೆಸಿದ್ದು, ಬಜೆಟ್‌ನಲ್ಲಿ ಬೆಳೆಸಾಲ 25 ಸಾವಿರ ರೂ.ಗಳವರೆಗೆ ಮನ್ನಾ ಮಾಡುವ ಸಾಧ್ಯತೆ ಹೆಚ್ಚಿದೆ.

ರಾಜ್ಯದಲ್ಲಿದ್ದಾರೆ 23.79 ಲಕ್ಷ ಕೃಷಿಕರು

10,551 ಕೋಟಿ ರೂ. ಬೆಳೆಸಾಲ

ಪ್ರತಿಯೊಬ್ಬ ರೈತರ  25 ಸಾವಿರವರೆಗೆ ಸಾಲದ ಅಸಲು ಮನ್ನಾ

ಸುಮಾರು 10 ಲಕ್ಷ ರೈತರ ಸಂಪೂರ್ಣ ಸಾಲ ಮನ್ನಾ

ರಾಜ್ಯದ 23.79 ಲಕ್ಷ ಕೃಷಿಕರು 10,551.99 ಕೋಟಿ ರು.ಗಳ ಬೆಳೆಸಾಲವನ್ನು ಸಹಕಾರ ಬ್ಯಾಂಕ್‌ಗಳಿಂದ ಪಡೆದುಕೊಂಡಿದ್ದಾರೆ. ಈ ಪೈಕಿ ಪ್ರತಿಯೊಬ್ಬ ರೈತರ . 25 ಸಾವಿರವರೆಗೆ ಸಾಲದ ಅಸಲು ಮನ್ನಾ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಿಂದ ಸುಮಾರು 10 ಲಕ್ಷ ರೈತರ ಸಂಪೂರ್ಣ ಸಾಲ ಮನ್ನಾ ಆಗಲಿದ್ದು, ಉಳಿದ ರೈತರು ತಮ್ಮ ಸಾಲದ ಬಾಬತ್ತಿನಲ್ಲಿ  25 ಸಾವಿರ ರೂ ಮನ್ನಾ ಆಗುವ ಲಾಭ ಪಡೆಯಲಿದ್ದಾರೆ. ಈ ಮೂಲಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೆಲಮಟ್ಟಿನ ಅನುಕೂಲ ಆಗಲಿದೆ ಎಂಬುದು ಸರ್ಕಾರದ ಉದ್ದೇಶ.

ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ ೧೨ನೇ ಬಜೆಟ್ ನಲ್ಲಿ ಹಲವು ಜನಪ್ರಿಯ ಯೋಜನೆಗಳ ಘೋಷಣೆಗೆ ಸಿದ್ದತೆ ನಡೆಸಿದ್ದು, ತಮಿಳುನಾಡಿನ ಅಮ್ಮ ಕ್ಯಾಂಟೀನ್ ‌ಮಾದರಿಯಲ್ಲಿ "ನಮ್ಮ ಕ್ಯಾಂಟೀನ್" ಯೋಜನೆಯೂ ಇದೆ ಅಂತಾ ಹೇಳಲಾಗ್ತಿದೆ.

ನಮ್ಮ ಕ್ಯಾಂಟೀನ್

ಅಲ್ಲಿ  ‘ಅಮ್ಮ ಕ್ಯಾಂಟೀನ್’ ಇಲ್ಲಿ  ‘ನಮ್ಮ ಕ್ಯಾಂಟೀನ್’  : ಐದು ರೂಪಾಯಿಗೆ ಸಿಗಲಿದೆ ಜನರಿಗೆ ಊಟ-ಉಪಹಾರ

ನಮ್ಮ ಕ್ಯಾಂಟೀನ್​  ಉಪಹಾರ ಹಾಗೂ ಊಟವನ್ನು ತಯಾರಿಸಿ ಕ್ಯಾಂಟೀನ್ ಗಳಿಗೆ ತಲುಪಿಸುವ ಹೊಣೆ ಅಕ್ಷಯ ಪಾತ್ರ ಸಂಸ್ಥೆಗೆ ವಹಿಸಲಾಗಿದೆ.  ಕ್ಯಾಂಟೀನ್ ಗಳಲ್ಲಿ ವಿತರಿಸಲಾಗುವ ಪ್ರತಿ ಊಟ‌ ಅಥವಾ ಉಪಹಾರವನ್ನು ಐದು ರೂಪಾಯಿಗೆ ಸಾರ್ವಜನಿಕರಿಗೆ‌ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. 

ಉಚಿತ ವಿದ್ಯುತ್

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉಚಿತ ವಿದ್ಯುತ್

ಪ.ಜಾತಿಯ 4.30 ಲಕ್ಷ, ಪ.ಪಂಗಡದ 2.70 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್‌

ಸುಮಾರು 7 ಲಕ್ಷ ದಲಿತ ಕುಟುಂಬಗಳಿಗೆ ಉಚಿತ ವಿದ್ಯುತ್‌

35 ಲಕ್ಷ ಫಲಾನುಭವಿಗಳಿಗೆ ದೊರೆಯಲಿದೆ ಲಾಭ

ರಾಜ್ಯದ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗಾಗಿ ವಿಶೇಷ ಯೋಜನೆ ಘೋಷಣೆಯಾಗಲಿದೆ. ಬಡತನ ರೇಖೆಗಿಂತ ಕೆಳಗಿನ ಪರಿಶಿಷ್ಟಜಾತಿಯ 4.30 ಲಕ್ಷ ಹಾಗೂ ಪರಿಶಿಷ್ಟ ಪಂಗಡದ 2.70 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್‌ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ. ಅಂದರೆ ಸುಮಾರು 7 ಲಕ್ಷ ದಲಿತ ಕುಟುಂಬಗಳಿಗೆ ಉಚಿತ ವಿದ್ಯುತ್‌ ಸಿಗಲಿದ್ದು, ಇದರಿಂದ 35 ಲಕ್ಷ ಫಲಾನುಭವಿಗಳು ಲಾಭ ಪಡೆಯಲಿದ್ದಾರೆ.

ರಾಜ್ಯ ಬಜೆಟ್ ನಿರೀಕ್ಷೆ

ನಗರ ಪ್ರದೇಶಗಳಲ್ಲಿ 7 ಲಕ್ಷ ಮನೆಗಳ ನಿರ್ಮಾಣ

ಬೆಂಗಳೂರು ಸಮೀಪ ಎರಡು ಉಪ ನಗರ ನಿರ್ಮಾಣ

ರಾಜ್ಯದ ನಗರ ಪ್ರದೇಶಗಳಲ್ಲಿ 7 ಲಕ್ಷ ಮನೆಗಳ ನಿರ್ಮಾಣ ಮತ್ತು ಬೆಂಗಳೂರು ನಗರದ ಸಮೀಪ ಎರಡು ಉಪ ನಗರಗಳನ್ನು ನಿರ್ಮಿಸುವ ಮೂಲಕ ತಮ್ಮ ನೆಚ್ಚಿನ ಅಹಿಂದ ವರ್ಗ ಹಾಗೂ ನಗರ ಪ್ರದೇಶದ ಮತದಾರರ ನಡುವೆ ಸಮತೋಲನ ಸಾಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಒಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸಮಾನ ಆದ್ಯತೆ ಕೊಡುವುದು ಮತ್ತು ಅಹಿಂದ ಮತಗಳನ್ನು ಗಟ್ಟಿಗೊಳಿಸುವುದು ಮುಖ್ಯ ಉದ್ದೇಶ ಎನ್ನಲಾಗ್ತಿದೆ. ಜೊತೆಗೆ ಚುನಾವಣೆ ವರ್ಷ ಕೂಡಾ ಆಗಿರೋದರಿಂದ ಒಂದಷ್ಟು ಜನಪ್ರಿಯ ಘೋಷಣೆಗಳನ್ನು ಘೋಷಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಬ್ಯೂರೋ ರಿಪೋರ್ಟ್, ಸುವರ್ಣನ್ಯೂಸ್

click me!