ಡಿಐಜಿ ರೂಪಾ ವರ್ಗಾವಣೆ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ, ಬಿಎಸ್'ವೈ ರಿಯಾಕ್ಷನ್?

By Suvarna Web DeskFirst Published Jul 17, 2017, 3:36 PM IST
Highlights

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೂಡ ರೂಪಾ ವರ್ಗಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ರೂಪಾರನ್ನು ವರ್ಗಾವಣೆ ಮಾಡಿದ್ದು ಅವರಿಗೆ ನೀಡಿದ್ದ ಶಿಕ್ಷೆಯಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. "ನಮಗೆ ಕೆಲ ನಿಯಮಗಳಿವೆ. ಈಗ ತನಿಖೆ ನಡೆಯುತ್ತಿದೆ. ಯಾವುದೇ ಅಧಿಕಾರಿಯು ಮಾಧ್ಯಮಗಳಿಗೆ ಹೋಗಲು ಅವಕಾಶವಿಲ್ಲ. ನಿಷ್ಪಕ್ಷಪಾತ ತನಿಖೆಯನ್ನು ನಡೆಸಲಾಗುತ್ತಿದೆ." ಎಂದು ಡಿಕೆಶಿ ಹೇಳಿದ್ದಾರೆ.

ಬೆಂಗಳೂರು(ಜುಲೈ 17): ಬಂದೀಖಾನೆ ಡಿಐಜಿ ಡಿ.ರೂಪಾ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳನ್ನು ಸರಕಾರ ವರ್ಗಾವಣೆ ಮಾಡಿದೆ. ಆದರೆ, ಕೆಲ ದಿನಗಳ ಹಿಂದಷ್ಟೇ ಪೊಲೀಸ್ ವಲಯವನ್ನು  ತಮ್ಮ ವರದಿ ಮೂಲಕ ತಲ್ಲಣಗೊಳಿಸಿದ್ದ ರೂಪಾ ಅವರನ್ನು ಟ್ರಾಫಿಕ್ ವಿಭಾಗಕ್ಕೆ ಟ್ರಾನ್ಸ್'ಫರ್ ಮಾಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರನ್ನು ಕೇಳಿದಾಗ ಅವರು, ವರ್ಗಾವಣೆ ಯಾಕಾಗಬಾರದು ಎಂದು ಪತ್ರಕರ್ತರಿಗೇ ಮರುಪ್ರಶ್ನೆ ಎಸೆದಿದ್ದಾರೆ.

"ಆಕೆಯನ್ನು ಯಾಕೆ ವರ್ಗಾವಣೆ ಮಾಡಬಾರದು? ಇದು ಆಡಳಿತಾತ್ಮಕ ದೃಷ್ಟಿಯಿಂದ ಮಾಡಿರುವ ವರ್ಗಾವಣೆ. ಯಾಕೆ, ಏನು ಎಂದು ಎಲ್ಲವನ್ನೂ ಮಾಧ್ಯಮಗಳ ಎದುರು ಹೇಳಲು ಸಾಧ್ಯವಿಲ್ಲ," ಎಂದು ಮುಖ್ಯಮಂತ್ರಿಗಳು ಇಂದು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಎಚ್ಚರಿಕೆ ಸಂದೇಶ:
"ಈ ವರ್ಗಾವಣೆ ಮೂಲಕ ಅಧಿಕಾರಿ ವರ್ಗಕ್ಕೆ ಒಂದು ಸಂದೇಶ ಕೊಟ್ಟಿದ್ದೇನೆ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಸಹಿಸಲು ಸಾಧ್ಯವಿಲ್ಲ. ವರ್ಗಾವಣೆ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದೇನೆ... ಏನೇ ಪರಿಸ್ಥಿತಿ ಇದ್ದರೂ ನಮ್ಮ ಬಳಿ ಬಂದು ಹೇಳಬಹುದಿತ್ತು. ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು ಸರಿಯಿಲ್ಲ. ಬೇರೆ ಅಧಿಕಾರಿಗಳೂ ಇದನ್ನೇ ಮಾಡುತ್ತಿದ್ದರಾ, ಹೇಗೆ?" ಎಂದು ತಮ್ಮ ಆಪ್ತ ಶಾಸಕರ ಬಳಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೂಡ ರೂಪಾ ವರ್ಗಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ರೂಪಾರನ್ನು ವರ್ಗಾವಣೆ ಮಾಡಿದ್ದು ಅವರಿಗೆ ನೀಡಿದ್ದ ಶಿಕ್ಷೆಯಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. "ನಮಗೆ ಕೆಲ ನಿಯಮಗಳಿವೆ. ಈಗ ತನಿಖೆ ನಡೆಯುತ್ತಿದೆ. ಯಾವುದೇ ಅಧಿಕಾರಿಯು ಮಾಧ್ಯಮಗಳಿಗೆ ಹೋಗಲು ಅವಕಾಶವಿಲ್ಲ. ನಿಷ್ಪಕ್ಷಪಾತ ತನಿಖೆಯನ್ನು ನಡೆಸಲಾಗುತ್ತಿದೆ." ಎಂದು ಡಿಕೆಶಿ ಹೇಳಿದ್ದಾರೆ.

ಯಡಿಯೂರಪ್ಪ ಕಿಡಿ:
ಇದೇ ವೇಳೆ, ಬಂದೀಖಾನೆ ಡಿಐಜಿ ರೂಪಾ ಅವರನ್ನು ವರ್ಗಾವಣೆ ಮಾಡುವ ಸರಕಾರದ ನಿರ್ಧಾರವನ್ನು ಮಾಜಿ ಸಿಎಂ ಯಡಿಯೂರಪ್ಪ ಖಂಡಿಸಿದ್ದಾರೆ. ಸಿದ್ದರಾಮಯ್ಯ ಸರಕಾರ ತಪ್ಪುಗಳಿಂದ ಪಾಠ ಕಲಿಯುತ್ತಿಲ್ಲ. ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಸತ್ಯ ಹೇಳುವ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಮುಂದೆ ಯಾವ ಅಧಿಕಾರಿಯೂ ನ್ಯಾಯಯುತವಾಗಿ ನಡೆದುಕೊಳ್ಳುವುದಿಲ್ಲ. ಈ ಸರಕಾರದ ನಿಲುವುಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ದೆಹಲಿಯಲ್ಲಿ ಬಿಜೆಪಿ ಮುಖಂಡ ಬಿಎಸ್'ವೈ ಕಿಡಿಕಾರಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿನ ಕೇಂದ್ರ ಕಾರಾಗೃಹದ ದುರವಸ್ಥೆ ಕುರಿತು ತನಿಖೆ ನಡೆಸಿದ ಡಿಐಜಿ ರೂಪಾ 4 ಪುಟಗಳ ವರದಿಯನ್ನು ಸಲ್ಲಿಕೆ ಮಾಡಿದ್ದರು. ಈ ವರದಿಯನ್ನು ಅವರು ಮಾಧ್ಯಮಗಳಿಗೂ ನೀಡಿದ್ದು ಹಿರಿಯ ಸಹೋದ್ಯೋಗಿಗಳು ಹಾಗೂ ಸರಕಾರದ ಕೆಂಗಣ್ಣಿಗೆ ಕಾರಣವಾಗಿದೆ. ಮಾಧ್ಯಮಗಳಿಗೆ ಲೀಕ್ ಮಾಡಿದ್ದು ಕಾನೂನು ಉಲ್ಲಂಘನೆಯಾದಂತಾಗಿದೆ ಎಂದು ಸರಕಾರವು ರೂಪಾ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಈಗ ಡಿಐಜಿ ರೂಪಾ ಅವರನ್ನು ಟ್ರಾಫಿಕ್ ವಿಭಾಗಕ್ಕೆ ಟ್ರಾನ್ಸ್'ಫರ್ ಮಾಡಲಾಗಿದೆ. ಡಿಜಿಪಿ ಸತ್ಯನಾರಾಯಣ್ ರಾವ್ ಅವರನ್ನೂ ವರ್ಗಾವಣೆ ಮಾಡಲಾಗಿದೆಯಾದರೂ ಅವರಿಗೆ ಯಾವುದೇ ಇಲಾಖೆಯನ್ನು ಇನ್ನೂ ನಿರ್ದಿಷ್ಟಪಡಿಸಿಲ್ಲ. ಇನ್ನು, ಶಶಿಕಲಾ ಅವರಿಂದ 2 ಕೋಟಿ ಲಂಚ ಪಡೆದು ವಿಶೇಷ ಸವಲತ್ತು ಒದಗಿಸಿದ್ದಾರೆಂದು ಡಿಐಜಿ ರೂಪಾ ತಮ್ಮ ವರದಿಯಲ್ಲಿ ನೇರವಾಗಿ ಆರೋಪ ಮಾಡಿದ್ದ ಜೈಲು ಅಧೀಕ್ಷಕ ಕೃಷ್ಣ ಕುಮಾರ್ ಅವರನ್ನು ವರ್ಗಾವಣೆ ಮಾಡದೇ ಉಳಿಸಿರುವುದು ಆಶ್ಚರ್ಯ.

click me!