
ಚಾಮರಾಜನಗರ: ‘ಯಾವತ್ತೂ ನಗದ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕಂತೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕಾಲೆಳೆದಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹರವೆಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಪರ ಚುನಾವಣಾ ಪ್ರಚಾರ ಸಭೆ ಯನ್ನು ಉದ್ಘಾಟಿಸಿ ಮಾತನಾ ಡಿದ ಅವರು ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮುಖ ನೋಡ್ಕೊಂಡು ಮತ ಕೊಡ ಬೇಕಾ? ಜಿಲ್ಲೆಯ ಅಭಿವೃದ್ಧಿಗೆ ಇವರು ಬದನೇಕಾಯಿ ಕೂಡಾ ಕೊಟ್ಟಿಲ್ಲ. ಯಡಿಯೂರಪ್ಪ ಯಾವತ್ತೂ ನಗೋದೇ ಇಲ್ಲ, ಮುಖ ಗಂಟು ಹಾಕೊಂಡೇ ಇರ್ತಾನೆ ಆಸಾಮಿ, ಇಂತವರು ರಾಜ್ಯದ ಮುಖ್ಯಮಂತ್ರಿ ಆಗಬೇಕಂತೆ ಎಂದು ವ್ಯಂಗ್ಯವಾಡಿದರು.
ನೋಟ್ ಮಷಿನ್ ಇಲ್ಲ ಅಂದಿದ್ರು:
ಯಡಿಯೂರಪ್ಪ ಅಧಿಕಾರಕ್ಕೆ ಬಂದ ತಕ್ಷಣ ಸಾಲ ಮನ್ನಾ ಮಾಡ್ತೀನಿ ಅಂತ ಹೇಳ್ತಾ ಇದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಸಾಲ ಮನ್ನಾ ಮಾಡಿ ಅಂದ್ರೆ ನನ್ನ ಹತ್ರ ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲ ಅಂದಿದ್ರು. ಯಡಿಯೂರಪ್ಪಗೆ ಅಧಿಕಾರದಲ್ಲಿದ್ದಾಗ ಒಂದು ನಾಲಿಗೆ, ಇಲ್ಲದಿದ್ದಾಗ ಒಂದು ನಾಲಿಗೆ. ಈಗ ಸಾಲ ಮನ್ನಾ ಮಾಡಲಿಲ್ಲ ಅಂತಾರೆ. ಮೋದಿ ಅರ್ಧ ಹಣ ನೀಡಿದರೆ ನಾವು ಸಾಲ ಮನ್ನಾ ಮಾಡಲು ಸಿದ್ದವಾಗಿದ್ದೇವೆ ಎಂದರು. ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲೂಕಿಗೆ 500 ಕೋಟಿ ವೆಚ್ಚದಲ್ಲಿ 297 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಸಂಪೂರ್ಣವಾಗಿದ್ದು, ಮುಂದಿನ ತಿಂಗಳು ಗೀತಾ ಮಹದೇಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೂಡಿ ಚಾಲನೆ ನೀಡಲಾಗುವುದು ಎಂದರು. ಕ್ಷೇತ್ರದಲ್ಲಿ ಕೆರೆ ತುಂಬಿಸಿ ನೀರು ಕೊಡುತ್ತೇವೆ. ಬಿಜೆಪಿಯವರು ಸೀರೆ ಕೊಡುತ್ತೇವೆ ಅಂತಾ ಸುಳ್ಳು ಹೇಳ್ತಾರೆ. ನೀವು ಯಾವತ್ತಾದರೂ ಅವರು ಕೊಟ್ಟಸೀರೆ ಉಟ್ಟುಕೊಂಡಿದ್ದೀರಾ ಎಂದು ನೆರೆದಿದ್ದ ಮಹಿಳೆಯರನ್ನು ಪ್ರಶ್ನಿಸಿದರು.
ಇದು ಕರ್ನಾಟಕ, ಉತ್ತರ ಪ್ರದೇಶವಲ್ಲ:
ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಆ ಪಕ್ಷದ ನಾಯಕರು ಇಲ್ಲಿ ಬೀಗುತ್ತಿದ್ದಾರೆ, ಕರ್ನಾಟಕದಲ್ಲಿ ಆ ಪಕ್ಷದ ಆಟ ನಡೆ ಯುವುದಿಲ್ಲ ಎಂದು ಸಿಎಂ ಸಿದ್ದ ರಾಮಯ್ಯ ಅಭಿಪ್ರಾಯಪಟ್ಟರು. ಕರ್ನಾಟಕ ಸಾಧು, ಸಂತರು, ಶರಣರು ನೆಲೆಸಿದ್ದ ನಾಡು. ಬಸವಣ್ಣ, ಕನಕದಾಸ, ಕುವೆಂಪು, ಭಗೀರಥರನ್ನು ಕಂಡ ರಾಜ್ಯವಿದು. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸಿನ ನಾಡು ಇದು. ನಾವು ಅದಕ್ಕೆ ಭದ್ರ ಬುನಾದಿ ಹಾಕಿದ್ದೇವೆ. ಜಾತಿ, ಧರ್ಮದ ಹೆಸರಲ್ಲಿ ಗೆಲುವು ಸಾಧಿಸಲು ಬಿಜೆಪಿಯವರಿಂದ ಸಾಧ್ಯವಿಲ್ಲ. ಇದು ಕರ್ನಾಟಕ, ಉತ್ತರ ಪ್ರದೇಶವಲ್ಲ ಎಂದರು.
ಯಾರ ಮುಖ ಒಣಗಿದೆ ಅಂತ 13ಕ್ಕೆ ಗೊತ್ತಾಗುತ್ತೆ: ಬಿಎಸ್'ವೈ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜನರ ತೆರಿಗೆ ಹಣ ಲೂಟಿ ಯಾಗುತ್ತಿದ್ದು, ದೋಚಿದ ಹಣವನ್ನು ತಂದು ಉಪಚುನಾವಣೆಯಲ್ಲಿ ಸುರಿಯುತ್ತಿ ದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಪಟ್ಟಣದ ಅಶೋಕಪುರಂನಲ್ಲಿ ಬುಧ ವಾರ ಚುನಾವಣಾ ಪ್ರಚಾರ ಕೈಗೊಂಡಿದ್ದ ಅವರು ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸೋಲಿನ ಭೀತಿಗೆ ಯಡಿಯೂರಪ್ಪ ಅವರ ಮುಖ ಕಂಗೆಟ್ಟಿದೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ರಸ್ತೆಗಳಲ್ಲಿ, ಬಿಸಿಲಲ್ಲಿ ಓಡಾಡುತ್ತಿದ್ದಾರೆ. ಆದರೆ ಜನ ಸೇರುತ್ತಿಲ್ಲ. ಇದರಿಂದಾಗಿ ಕಂಗೆಟ್ಟಅವರ ಮುಖ ಬಾಡಿದೆಯೇ ಹೊರತು ನನ್ನ ಮುಖವಲ್ಲ. ಒಣಗಿದ ಮುಖ ಯಾರದ್ದು ಎಂಬುದು ಏ.13 ರಂದು ಗೊತ್ತಾಗುತ್ತದೆ ಎಂದು ತಿಳಿಸಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೊಡನೆ ರೈತರ ಸಾಲ ಮನ್ನಾ ಮಾಡಿತು. ಅದೇನೂ ಕೇಂದ್ರ ಸರ್ಕಾರದ ನೆರವು ಕೇಳಲಿಲ್ಲ. ಆದರೆ ಸಿದ್ದರಾಮಯ್ಯ ಅವರು ಕೇಂದ್ರದ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.