ಶ್ರೀರಾಮ ಸೇನೆಗೆ ಕಾರ್ಯಕರ್ತರ ಸಾಮೂಹಿಕ ರಾಜಿನಾಮೆ

By Web DeskFirst Published Sep 4, 2018, 7:49 AM IST
Highlights

ಶ್ರೀರಾಮ ಸೇನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ನಡುವೆ ಮನಸ್ಥಾಪ | ಬೆಳಗಾವಿ ಕಾರ್ಯಕರ್ತರು ಸಾಮೂಹಿಕ ರಾಜಿನಾಮೆ | ಪರ್ಯಾಯವಾಗಿ ಶ್ರೀರಾಮ ಸೇನಾ ಹಿಂದೂಸ್ತಾನ್‌ ಎಂಬ ಹೊಸ ಸಂಘಟನೆ ಸ್ಥಾಪನೆ

ಬೆಳಗಾವಿ (ಸೆ. 04): ಶ್ರೀರಾಮ ಸೇನೆ ಪದಾಧಿಕಾರಿ ಹಾಗೂ ಕಾರ್ಯಕರ್ತರ ನಡುವೆ ಉಂಟಾದ ಮನಸ್ಥಾಪದಿಂದ ಶ್ರೀರಾಮ ಸೇನೆಯ ಬೆಳಗಾವಿ ಘಟಕದ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಿ ಪರ್ಯಾಯವಾಗಿ ಶ್ರೀರಾಮ ಸೇನಾ ಹಿಂದೂಸ್ತಾನ್‌ ಎಂಬ ಹೊಸ ಸಂಘಟನೆ ಸ್ಥಾಪಿಸಿಕೊಂಡಿದ್ದಾರೆ.

ನಗರದ ಖಾಸಭಾಗದಲ್ಲಿನ ಸಾಯಿಭವನದಲ್ಲಿ ಸೇರಿದ ಕಾರ್ಯಕರ್ತರು ಶ್ರೀರಾಮ ಸೇನೆಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅಲ್ಲದೆ, ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ರಮಾಕಾಂತ್‌ ಕೊಂಡುಸ್ಕರ್‌ ಅವರ ನೇತೃತ್ವದಲ್ಲಿ ರಚನೆಯಾದ ‘ಶ್ರೀರಾಮ ಸೇನಾ ಹಿಂದೂಸ್ತಾನ್‌’ ಎನ್ನುವ ಹೊಸ ಸಂಘದ ಮೊದಲ ಸಭೆಯನ್ನು ಭಾನುವಾರ ನಡೆಸಲಾಯಿತು. ಶ್ರೀರಾಮ ಸೇನೆಯಲ್ಲಿದ್ದ ಕಾರ್ಯಕರ್ತರೆಲ್ಲರೂ ನೂತನವಾಗಿ ಸ್ಥಾಪನೆಗೊಂಡ ಶ್ರೀರಾಮ ಸೇನಾ ಹಿಂದೂಸ್ತಾನ್‌ ಸಂಘಕ್ಕೆ ಸೇರ್ಪಡೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಮಾಕಾಂತ್‌ ಕೊಂಡುಸ್ಕರ, ಶ್ರೀರಾಮ ಸೇನೆ ಯಾವುದೇ ಪಕ್ಷದಡಿ ಕೆಲಸ ಮಾಡುತ್ತಿರಲಿಲ್ಲ. ಆದರೆ, ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೇಳಿದ್ದರು. ಸಿಗದೆ ಇದ್ದಾಗ ಬಿಜೆಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿಯೂ ಇದೇ ರೀತಿ ಮಾಡಿ ಸೇನೆಯ ಕಾರ್ಯಕರ್ತರನ್ನು ತಮಗೆ ಬೇಕಾದಂತೆ ಬಳಕೆ ಮಾಡಿಕೊಳ್ಳುತ್ತಿದ್ದರು. ಈ ಕಾರಣಕ್ಕೆ ಅವರ ಸಂಘ ತೊರೆದು ಪ್ರತ್ಯೇಕ ಸಂಘ ರಚಿಸಿಕೊಂಡಿದ್ದೇವೆ. ಶ್ರೀರಾಮ ಸೇನೆಯಲ್ಲಿ ಸದಸ್ಯತ್ವ ಬಾಯಿ ಮಾತಿನಲ್ಲೇ ಇರುವುದರಿಂದ ರಾಜೀನಾಮೆ ಪತ್ರ ಕೊಡುವ ಅಗತ್ಯ ಇಲ್ಲ. ಈ ವಿಷಯ ಮುತಾಲಿಕ್‌ ಅವರಿಗೆ ತಿಳಿಸುವ ಅಗತ್ಯವೂ ಇಲ್ಲ ಎಂದು ತಿಳಿಸಿದ್ದಾರೆ.

 

 

click me!