ಲೋಕಸಭೆಗೂ ಕಾಂಗ್ರೆಸ್ -ಜೆಡಿಎಸ್ ಮೈತ್ರಿ?

By Web DeskFirst Published Sep 4, 2018, 7:34 AM IST
Highlights

ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾಂಗ್ರೆಸ್ -ಜಡಿಎಸ್ ನಾಯಕರಿಗೆ ಮೈತ್ರಿ ಮುಂದುವರೆಸುವ ಹುಮ್ಮಸ್ಸು ನೀಡಿದೆ | ಇನ್ನಷ್ಟು ಶ್ರಮ ಹಾಕಲು ಉಭಯ ಪಕ್ಷಗಳು ನಿರ್ಧಾರ | ಬಿಜೆಪಿಗೆ ಕಠಿಣ ಸಿದ್ಧತೆಯ ಅನಿವಾರ್ಯ 

ಬೆಂಗಳೂರು (ಸೆ. 04):  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಲೆಕ್ಕಾಚಾರಕ್ಕೆ ವೇಗದ ಚಾಲನೆ ಸಿಕ್ಕಿದ್ದು, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ಚುನಾವಣೆ ಎದುರಿಸುವುದಕ್ಕೆ ಉತ್ತೇಜನ ಸಿಕ್ಕಂತಾಗಿದೆ.

ಈ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ತರುವ ವೇಳೆಯೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಒಟ್ಟಾಗಿ ಹೋರಾಟ ನಡೆಸಬೇಕು ಎಂಬ ನಿರ್ಣಯಕ್ಕೆ ಬರಲಾಗಿತ್ತು. ಈಗ ಹೊರಬಿದ್ದಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತಂತ್ರಗೊಂಡಿರುವ ಅನೇಕ ಕಡೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ಅಧಿಕಾರ ಹಿಡಿಯಲು ನಿರ್ಧರಿಸಿವೆ. ಎರಡೂ ಪಕ್ಷಗಳು ಒಟ್ಟಾದರೆ ಬಿಜೆಪಿಗೆ ಕಷ್ಟವಾಗಬಹುದು ಎಂಬ ಸಂದೇಶವನ್ನೂ ರವಾನಿಸಿದಂತಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಕುರಿತು ಸಾಕಷ್ಟುಗೊಂದಲ ಇದ್ದರೂ ಈ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಆಧರಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗ ಳ ನಾಯಕರು ಒಟ್ಟಾಗಿ ಒಮ್ಮತದ ತೀರ್ಮಾನಕ್ಕೆ ಬರಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಹೀಗಾಗಿ ಪ್ರಸಕ್ತ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶದ ನಂತರ ಲೋಕಸಭಾ ಚುನಾವಣೆಗೆ ತಮ್ಮ ಸಾಮರ್ಥ್ಯ ಒರೆಗೆ ಹಚ್ಚಲು ಈಗಿನಿಂದಲೇ ಸಿದ್ಧತೆ ಆರಂಭಿಸಲು ಅನುಕೂಲ ಮಾಡಿಕೊಟ್ಟಂತಾಗಿದೆ. ಎಲ್ಲೆಲ್ಲಿ ತಮ್ಮ ಬಲ ಕಡಮೆಯಿದೆ ಎಂಬುದನ್ನು ಅರಿತುಕೊಂಡು ಸರಿಪಡಿಸಿಕೊಳ್ಳಲೂ ಅವಕಾಶವನ್ನೂ ಸೃಷ್ಟಿಸಿದಂತಾಗಿದೆ.

ಹಾಗೆ ನೋಡಿದರೆ ಈ ಚುನಾವಣೆಯನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರತ್ಯೇಕವಾಗಿಯೇ ಎದುರಿಸಿದ್ದವು. ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಕಷ್ಟಎಂಬ ಕಾರಣಕ್ಕಾಗಿ ‘ಫ್ರೆಂಡ್ಲಿ ಫೈಟ್‌’ ನಡೆಸುವ ಬಗ್ಗೆ ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದರು. ಅದರಂತೆ ಎರಡೂ ಪಕ್ಷಗಳ ಅಭ್ಯರ್ಥಿಗಳು ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದರು. ಜೊತೆಗೆ ಫಲಿತಾಂಶ ಹೊರಬೀಳುವ ಮೊದಲೇ ಅಧಿಕಾರದ ಗದ್ದುಗೆ ಏರಲು ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರವನ್ನೂ ಕೈಗೊಂಡಿದ್ದರು.

ಇದೀಗ 105 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 31 ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದರಲ್ಲಿ ಹೆಚ್ಚಿನ ಕಡೆಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ಅಧಿಕಾರ ನಡೆಸುವ ಅವಕಾಶ ಬಂದೊದಗಿದೆ. ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಪಕ್ಷೇತರರು ನಿರ್ಣಾಯಕರಾಗಿದ್ದಾರೆ. ಅಂಥ ಕಡೆಗಳಲ್ಲಿ ಸರ್ಕಾರದ ಅಧಿಕಾರದ ಬಲದಿಂದ ತಮ್ಮತ್ತ ಸೆಳೆಯುವುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಕಷ್ಟವಾಗಲಾರದು. ಇಲ್ಲಿ ಬಿಜೆಪಿಗೆ ಅಂಥ ಬೆಂಬಲ ಸಿಗುವುದು ದುಸ್ತರ.

ಈ ಫಲಿತಾಂಶದ ಬೆನ್ನಲ್ಲೇ ಬಿಜೆಪಿಯಲ್ಲಿ ಬೇಸರವಲ್ಲದಿದ್ದರೂ ತುಸು ನಿರಾಸೆಯಾಗಿದೆ. ಇನ್ನಷ್ಟುಹೆಚ್ಚು ಸ್ಥಾನ ಗಳಿಸಬಹುದಿತ್ತು ಎಂಬ ಮಾತು ಕೇಳಿಬಂದಿದೆ. ಆಡಳಿತಾರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಇನ್ನಷ್ಟುಕ್ರಿಯಾಶೀಲವಾಗಿ ಕೆಲಸ ಮಾಡಬಹುದು ಎಂಬ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗಿದೆ. ಇದನ್ನೇ ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಗೆ ಹೆಚ್ಚಿನ ಶ್ರಮ ಹಾಕಲು ಬಿಜೆಪಿ ತೀರ್ಮಾನಿಸಿದೆ.

click me!