
ಅಗರ್ತಲಾ: ತ್ರಿಪುರದಲ್ಲಿ 25 ವರ್ಷಗಳ ಸಿಪಿಎಂ ಆಡಳಿತ ಕಿತ್ತೊಗೆದು ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ, ಸರ್ಕಾರ, ರಚನೆಗೂ ಮುನ್ನವೇ ಮಿತ್ರಪಕ್ಷ ಶಾಕ್ ನೀಡಿದೆ. ಸರ್ಕಾರದಲ್ಲಿ ನಮ್ಮ ಪಕ್ಷಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗದೇ ಹೋದಲ್ಲಿ, ಸರ್ಕಾರದಿಂದ ಹೊರನಡೆಯುವ ಬೆದರಿಕೆಯನ್ನು ಮಿತ್ರಪಕ್ಷ ಐಪಿಎಫ್‌ಟಿ ಹಾಕಿದೆ.
ಮಂಗಳವಾರ ನೂತನ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಇಲ್ಲಿ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಿತ್ರ ಪಕ್ಷ ಬಿಜೆಪಿ ಮೇಲೆ ಒತ್ತಡ ತಂತ್ರ ಆರಂಭಿಸಿರುವ ಇಂಡೀಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ), ಒಂದು ವೇಳೆ ಸಚಿವ ಸಂಪುಟದಲ್ಲಿ ಗೌರವಯುತ ಸ್ಥಾನಮಾನ ನೀಡದೇ ಇದ್ದರೆ ಸರ್ಕಾರವನ್ನು ಬಾಹ್ಯವಾಗಿ ಮಾತ್ರ ಬೆಂಬಲಿಸುವುದಾಗಿ ತಿಳಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಐಪಿಎಫ್‌ಟಿ ಅಧ್ಯಕ್ಷ ಎನ್.ಸಿ.ದೇಬ್‌ಬರ್ಮಾ, ತಮ್ಮ ಪಕ್ಷದ ಶಾಸಕರ ಪ್ರಮಾಣಕ್ಕೆ ಅನುಗುಣವಾಗಿ ಸಂಪುಟದಲ್ಲಿ ಸಚಿವ ಸ್ಥಾನ ಹಾಗೂ ಪ್ರಮುಖ ಇಲಾಖೆಗಳ ಜವಾಬ್ದಾರಿ ನೀಡಬೇಕು. ವಿಧಾನಸಭೆಯಲ್ಲಿ ತನ್ನ ಶಾಸಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಐಪಿಎಫ್‌ಟಿ ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಐಪಿಎಫ್‌ಟಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. 60 ಸ್ಥಾನಗಳ ಪೈಕಿ ಚುನಾವಣೆ ನಡೆದ 59 ಕ್ಷೇತ್ರಗಳಲ್ಲಿ ಬಿಜೆಪಿ ಏಕಾಂಗಿಯಾಗಿ 35 ಸ್ಥಾನ ಗೆದ್ದಿದೆ. ಐಪಿಎಫ್‌ಟಿ 8 ಸ್ಥಾನಗಳನ್ನು ಪಡೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.