
ನವದೆಹಲಿ: ಸೇನಾ ಶಕ್ತಿಯಲ್ಲಿ ಭಾರತವು ಜಗತ್ತಿನಲ್ಲಿ ನಾಲ್ಕನೇ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಎರಡು ಹಾಗೂ ಮೂರನೇ ಸ್ಥಾನದಲ್ಲಿ ಕ್ರಮವಾಗಿ ರಷ್ಯಾ ಹಾಗೂ ಚೀನಾ ಇವೆ.
ಜಗತ್ತಿನ ವಿವಿಧ ರಾಷ್ಟ್ರಗಳ ಮಿಲಿಟರಿ ಶಕ್ತಿಯ ಬಗ್ಗೆ ಸಮೀಕ್ಷೆ ನಡೆಸುವ ಗ್ಲೋಬಲ್ ಫೈರ್‌ಪವರ್ ಎಂಬ ಸಂಸ್ಥೆ 133 ದೇಶಗಳ ಸೇನಾಶಕ್ತಿಯನ್ನು ತುಲನೆ ಮಾಡಿ 2017ನೇ ಸಾಲಿಗೆ ಈ ಪಟ್ಟಿಯನ್ನು ಪ್ರಕಟಿಸಿದೆ. ಇದೇ ಸಂಸ್ಥೆಯ ಸಮೀಕ್ಷೆಯಲ್ಲಿ 2016ರಲ್ಲೂ ಭಾರತದ ಮಿಲಿಟರಿ ಶಕ್ತಿ ನಾಲ್ಕನೇ ಸ್ಥಾನದಲ್ಲಿತ್ತು. ಕುತೂಹಲದ ಸಂಗತಿಯೆಂದರೆ ಪಾಕಿಸ್ತಾನದ ಸೇನಾಪಡೆ ಕೂಡ ಟಾಪ್ 15 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಜಗತ್ತಿನಲ್ಲೇ 13ನೇ ಬಲಶಾಲಿ ಸೇನಾಪಡೆ ಎನ್ನಿಸಿಕೊಂಡಿದೆ.
ಅತಿ ಹೆಚ್ಚು ಮಿಲಿಟರಿ ಶಕ್ತಿ ಹೊಂದಿರುವ ಟಾಪ್ 10 ದೇಶಗಳ ಪಟ್ಟಿಯಲ್ಲಿ ಫ್ರಾನ್ಸ್, ಬ್ರಿಟನ್, ಜಪಾನ್, ಟರ್ಕಿ ಮತ್ತು ಜರ್ಮನಿ ಸ್ಥಾನ ಪಡೆದಿವೆ. ಸೇನಾಪಡೆಗಳಲ್ಲಿ ಲಭ್ಯವಿರುವ ಸಂಪನ್ಮೂಲ (ಯುದ್ಧ ಸಾಮಗ್ರಿಗಳು), ಔದ್ಯೋಗಿಕ ಹಾಗೂ ಭೌಗೋಳಿಕ ಲಕ್ಷಣಗಳು ಮತ್ತು ಯೋಧರ ಸಂಖ್ಯೆಯನ್ನು ಆಧರಿಸಿ ಗ್ಲೋಬಲ್ ಫೈರ್‌ಪವರ್ ಸಂಸ್ಥೆ ರಾರಯಂಕಿಂಗ್ ನೀಡುತ್ತದೆ.
ಸಶಸ್ತ್ರ ಯೋಧರ ಸಂಖ್ಯೆಯಲ್ಲಿ ನಾವೇ ಮುಂದೆ: ಸಮೀಕ್ಷೆಯ ಪ್ರಕಾರ ಸಶಸ್ತ್ರ ಯೋಧರ ಸಂಖ್ಯೆಯಲ್ಲಿ ಭಾರತದ ಸೇನೆ ಚೀನಾಕ್ಕಿಂತ ಮುಂದಿದೆ. ಭಾರತದಲ್ಲಿ 42,07,250 ಸಶಸ್ತ್ರ ಯೋಧರಿದ್ದರೆ ಚೀನಾದಲ್ಲಿ 37,12,500 ಸಶಸ್ತ್ರ ಯೋಧರಿದ್ದಾರೆ. ಆದರೆ, ಪೂರ್ಣಾವಧಿ ಸಶಸ್ತ್ರ ಯೋಧರ ಸಂಖ್ಯೆಯಲ್ಲಿ ಚೀನಾ ಸೇನಾಪಡೆಯೇ ಮುಂದಿದ್ದು, ಅಲ್ಲಿ 22,60,000 ಯೋಧರಿದ್ದರೆ ಭಾರತದಲ್ಲಿ 13,62,500 ಯೋಧರಿದ್ದಾರೆ. ಮೀಸಲು ಸೈನಿಕರ ಸಂಖ್ಯೆಯಲ್ಲೂ ಭಾರತವೇ ಮುಂದಿದ್ದು, ಇಲ್ಲಿ 28,44,750 ಯೋಧರಿದ್ದರೆ ಚೀನಾದಲ್ಲಿ 14,52,500 ಯೋಧರಿದ್ದಾರೆ. ಆದರೆ, ಚೀನಾದ ಒಟ್ಟಾರೆ ಮಿಲಿಟರಿ ಸಾಮರ್ಥ್ಯ ರಷ್ಯಾಕ್ಕಿಂತ ಸ್ವಲ್ಪವೇ ಕಡಿಮೆಯಿದೆ. ಶೀಘ್ರದಲ್ಲೇ ರಷ್ಯಾವನ್ನು ಹಿಂದಿಕ್ಕಿ ಚೀನಾ ನಂ.2 ಆಗಲಿದೆ ಎಂದು ಸಮೀಕ್ಷೆ ಹೇಳಿದೆ.
ಅಣ್ವಸ್ತ್ರ ಶಕ್ತಿ ಪರಿಗಣಿಸಿಲ್ಲ: ಮಿಲಿಟರಿ ಶಕ್ತಿಯ ಸಮೀಕ್ಷೆಗೆ ಅಣ್ವಸ್ತ್ರಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಆದರೆ, ಅಣ್ವಸ್ತ್ರ ಸಾಮರ್ಥ್ಯಕ್ಕೆ ಬೇರೆ ವಿಭಾಗದಲ್ಲಿ ಅಂಕಗಳನ್ನು ನೀಡಲಾಗಿದೆ. ಇನ್ನು, ಮಿಲಿಟರಿಗೆ ಮಾಡುವ ವೆಚ್ಚದಲ್ಲಿ ಭಾರತಕ್ಕಿಂತ ಚೀನಾದ ವೆಚ್ಚ ಮೂರು ಪಟ್ಟು ಹೆಚ್ಚಿದೆ.
ಪಾಕ್ ದುರ್ಬಲ: ಸಮೀಕ್ಷೆಯ ಪ್ರಕಾರ ಭಾರತದ ಸೇನಾಪಡೆಗಳು ಎಲ್ಲಾ ವಿಷಯದಲ್ಲೂ ಪಾಕಿಸ್ತಾನದ ಸೇನಾಪಡೆಗಳಿಗಿಂತ ಸಾಮರ್ಥ್ಯದಲ್ಲಿ ಮುಂದಿವೆ. ಆದರೆ, ದಾಳಿ ನಡೆಸುವ ಹೆಲಿಕಾಪ್ಟರ್‌ಗಳು, ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಹಾಗೂ ಜಲಸಾರಿಗೆ ವಿಷಯದಲ್ಲಿ ಪಾಕಿಸ್ತಾನವೇ ಭಾರತಕ್ಕಿಂತ ಮುಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.