ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ 75ರ ಸಂಭ್ರಮ

By Suvarna Web DeskFirst Published Nov 21, 2017, 9:02 AM IST
Highlights

75 ವರ್ಷಗಳ ಸಂಭ್ರಮದಲ್ಲಿರುವ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆದಿದೆ. ಹಿರಿಯ ವಿದ್ಯಾರ್ಥಿಗಳ ಸಂಘ ಮೊದಲ ಹಂತವಾಗಿ ಡಿ.10ರಂದು ಕಾಲೇಜು ಆವರಣದಲ್ಲಿ ‘ಹಿರಿಯ ವಿದ್ಯಾರ್ಥಿಗಳ ಸಂಭ್ರಮ’ ಹಮ್ಮಿಕೊಂಡಿದೆ.

ಶಿವಮೊಗ್ಗ(ನ.21): 75 ವರ್ಷಗಳ ಸಂಭ್ರಮದಲ್ಲಿರುವ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆದಿದೆ. ಹಿರಿಯ ವಿದ್ಯಾರ್ಥಿಗಳ ಸಂಘ ಮೊದಲ ಹಂತವಾಗಿ ಡಿ.10ರಂದು ಕಾಲೇಜು ಆವರಣದಲ್ಲಿ ‘ಹಿರಿಯ ವಿದ್ಯಾರ್ಥಿಗಳ ಸಂಭ್ರಮ’ ಹಮ್ಮಿಕೊಂಡಿದೆ.

ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರಾಗಿ ಸಹ್ಯಾದ್ರಿ ಕಾಲೇಜಿನ ಯಾವುದೇ ವಿಭಾಗದಲ್ಲಿ ಪ್ರವೇಶ ಪಡೆದು ಕನಿಷ್ಠ 1 ವರ್ಷ ಅಭ್ಯಸಿಸಿದ್ದರೆ ಸಾಕು, ಅವರು ಪದವಿ ಪೂರ್ಣಗೊಳಿಸದಿದ್ದರೂ ಪರವಾಗಿಲ್ಲ, ಸದಸ್ಯರಾಗಬಹುದು ಎಂದು ಸಂಘದ ಅಧ್ಯಕ್ಷ ಎಂ. ಗುರುಮೂರ್ತಿ ಹೇಳಿದ್ದು, ದೇಶವಿದೇಶಗಳಲ್ಲಿ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಸ್ಪರ್ಧೆಗಳು: ಮೊದಲ ಪ್ರಯತ್ನವಾಗಿ ಡಿ.10 ರಂದು ವಿದ್ಯಾರ್ಥಿಗಳಿಗಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 8ಕ್ಕೆ ಸ್ಪರ್ಧೆಗಳು ಆರಂಭವಾಗಲಿವೆ. ಸಾಂಕೇತಿಕವಾಗಿ ಪ್ರತಿ ಪ್ರವೇಶಕ್ಕೆ ರು. 100 ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತರು ನ.30ರೊಳಗೆ ಹೆಸರು ನೊಂದಾಯಿಸಬಹುದು. ಹೊರ ಊರಿನ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿ,ಸ್ಪರ್ಧೆಗೆ ಆಗಮಿಸಿದಾಗ ಶುಲ್ಕ ನೀಡಬಹುದು. ಚಿತ್ರಗೀತೆ, ಭಾವಗೀತೆ, ಜಾನಪದ ಗೀತೆ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳು, ಕ್ರೀಡಾ ವಿಭಾಗದಲ್ಲಿ ಮನೋರಂಜನೆಯ ಆಟಗಳ ಸ್ಪರ್ಧೆ ಇರುತ್ತದೆ. ಕ್ರೀಡಾ ವಿಭಾಗದಲ್ಲಿ ಮಾತ್ರ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯುತ್ತವೆ.

ಹೆಸರನ್ನು ನೊಂದಾಯಿಸಲು ಪ್ರಸನ್ನ ಮೊಬೈಲ್ 9449830333, ಶೃತಿ ಕೀರ್ತಿ 9448091817 ಡಾ.ಅವಿನಾಶ್ 9448682851, ಕೃಷ್ಣಮೂರ್ತಿ 9886033922, ಗುರುಮೂರ್ತಿ 9448154365, ಮಂಜುನಾಥ್ 9741783999 ಸಂಪರ್ಕಿಸಬಹುದು. 20ರಿಂದ 35 ವರ್ಷ, 36ರಿಂದ 50 ವರ್ಷ ಹಾಗೂ 51 ವರ್ಷದ ನಂತರದ ವಿಭಾಗದಲ್ಲಿ ಈ ಸ್ಪರ್ಧೆಗಳು ನಡೆಯಲಿವೆ. ಅಂದು ಬೆಳಗ್ಗೆ 8ಕ್ಕೆ ಆರಂಭಗೊಳ್ಳುವ ಕಾರ್ಯಕ್ರಮದ ಸಮಾರೋಪ ಸಂಜೆ ನಡೆಯುವುದು.

ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಉದ್ಘಾಟಿಸಲಿದ್ದಾರೆ. ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಕೊಣಂದೂರು ಲಿಂಗಪ್ಪ, ಶಾಸಕ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಮಂಜುನಾಥ್ ಬಂಡಾರಿ, ಎಂ.ಬಿ. ಭಾನುಪ್ರಕಾಶ್, ಕೆ.ಟಿ. ಗಂಗಾಧರ್, ಬಿ.ಕೆ. ಸುಮಿತ್ರಾ ಶಿವಮೊಗ್ಗ ಸುಬ್ಬಣ್ಣ, ಕಡಿದಾಳು ಶಾಮಣ್ಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು.

ಸ್ಮರಣ ಸಂಚಿಕೆ: ಕಾರ್ಯಕ್ರಮದ ಪ್ರಯುಕ್ತ  ಸ್ಮರಣ ಸಂಚಿಕೆಯನ್ನೂ ಸಹ ಹೊರತರಲು ಸಿದ್ಧತೆ ನಡೆದಿದೆ. ಈ ಸಂಚಿಕೆಯಲ್ಲಿ ಹಿರಿಯ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ಅನುಭವವನ್ನು ಬರೆಯಬಹುದು. ಅಥವಾ ಲೇಖನ ಕಳುಹಿಸಬಹುದು. ಜತೆಗೆ, 75 ವರ್ಷ ಮೇಲ್ಪಟ್ಟ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನೂ ಸಹ ಆಯೋಜಿಸಲಾಗಿದೆ. ಇಂತಹ ಹಿರಿಯ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಘವು ಕೋರಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಗುರುಮೂರ್ತಿ, ಕಾರ್ಯದರ್ಶಿ ಜೇಸುದಾಸ್, ಕೆ. ರಂಗನಾಥ್, ಪ್ರಚಾರ ಸಮಿತಿಯ ಸಂಚಾಲಕ ಎನ್. ಮಂಜುನಾಥ್, ಮೂರು ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿ ಸಂಘದ ಪ್ರಮುಖರು ಮಾಹಿತಿ ನೀಡಿದರು. ಪ್ರಾಂಶುಪಾಲರಾದ ವಾಗ್ದೇವಿ, ಪಾಂಡುರಂಗನ್, ಶಶಿರೇಖಾ ಉಪಸ್ಥಿತರಿದ್ದರು.

click me!