
ಬೆಂಗಳೂರು (ಅ. 14): ಲೋಕಸಭೆ ಉಪ ಚುನಾವಣೆಗೆ ಮೈತ್ರಿ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವ ಪ್ರಹಸನ ಮುಂದುವರೆದಿದ್ದು, ಶಿವಮೊಗ್ಗ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬದಲಾಗಿ ಜೆಡಿಎಸ್‌ನಿಂದ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ವರಿಷ್ಠರು ಗಂಭೀರ ಪ್ರಯತ್ನ ನಡೆಸಿದ್ದಾರೆ.
ಎಚ್‌ಎಎಲ್ ಸಂವಾದಕ್ಕಾಗಿ ನಗರಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಶಿವಮೊಗ್ಗದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸಲು ಬಯಕೆ ಹೊಂದಿರುವ ವಿಚಾರವನ್ನು ಪ್ರಸ್ತಾಪಿಸಿದರು ಎನ್ನಲಾಗಿದೆ.
ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಉತ್ತಮ ಪೈಪೋಟಿ ನೀಡುವ ಅವಕಾಶವಿದೆ. ಆ ಕ್ಷೇತ್ರವನ್ನು ಬಿಜೆಪಿಯ ತೆಕ್ಕೆಯಿಂದ ಬಿಡಿಸಬಹುದು. ಹೀಗಾಗಿ ಶಿವಮೊಗ್ಗ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಅಲ್ಲಿ ನಮ್ಮ ಅಭ್ಯ
ರ್ಥಿಯನ್ನು ಕಣಕ್ಕೆ ಇಳಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಅವರು ರಾಜ್ಯ ನಾಯಕರೊಂದಿಗೆ ಚರ್ಚಿಸಿ ನಂತರ ಪಕ್ಷದ ನಿರ್ಧಾರ ತಿಳಿಸುವುದಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಚುರುಕಾಗಿರುವ ಜೆಡಿಎಸ್ ಪಡೆಯು ವಿದೇಶ ಪ್ರವಾಸದಲ್ಲಿರುವ ಮಧು ಬಂಗಾರಪ್ಪ ಅವರಿಗೆ ಪ್ರವಾಸ ಮೊಟಕುಗೊಳಿಸಿ ತಾಯ್ನಾಡಿಗೆ ಮರಳುವಂತೆ ಸಂದೇಶ ರವಾನಿಸಿದೆ ಎಂದು ತಿಳಿದುಬಂದಿದೆ.
ಮಂಗಳವಾರ (ಅ.16) ನಾಮಪತ್ರ ಸಲ್ಲಿಸಲು ಕೊನೆಯ ದಿನ. ಈ ಹಿನ್ನೆಲೆಯಲ್ಲಿ ಪ್ರವಾಸವನ್ನು ಮೊಟಕುಗೊಳಿಸಿ ಹಿಂತಿರುಗುವಂತೆ ತಿಳಿಸಿದ್ದಾರೆ. ಪಕ್ಷದ ಮುಖಂಡರ ಸೂಚನೆ ಮೇರೆಗೆ ಸೋಮವಾರದೊಳಗೆ ಮಧು ಬಂಗಾರಪ್ಪ ರಾಜ್ಯಕ್ಕೆ ಹಿಂತಿರುಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪೂರ್ವನಿಗದಿಯಂತೆ ಅ.16 ಕ್ಕೆ ಮಧು ಬಂಗಾರಪ್ಪ ಹಿಂತಿರುಗಬೇಕಾಗಿದ್ದು, ಯಾವಾಗ ಬರಲಿದ್ದಾರೆ ಎನ್ನುವುದು ಕೂತುಹಲ ಮೂಡಿಸಿದೆ. ಮಧು ಬಂಗಾರಪ್ಪ ಡೆನ್ಮಾರ್ಕ್ ಹಾಗೂ ಪ್ಯಾರಿಸ್ ಪ್ರವಾಸದಲ್ಲಿದ್ದಾರೆ. ನಾಮಪತ್ರ ಸಲ್ಲಿಕೆ ಸಂಬಂಧ ಮಾತುಕತೆ ನಡೆಸಬೇಕಾಗಿರುವುದರಿಂದ ವಾಪಸ್ ಬನ್ನಿ ಎಂದು ಅವರಿಗೆ ಮಾಹಿತಿ ನೀಡಲಾಗಿದೆ.
ಅಲ್ಲದೇ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ವರಿಷ್ಠರ ಸೂಚನೆ ಮೇರೆಗೆ ಪ್ರವಾಸ ಮೊಟಕುಗೊಳಿಸಿ ಹಿಂತಿರುಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳ ಲಾಬಿ ಹೆಚ್ಚಾಗುತ್ತಿದೆ. ಸ್ವಯಂ ನಿವೃತ್ತಿ ಪಡೆದಿರುವ ಐಆರ್‌ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಆದರೆ
ಸ್ಥಳೀಯ ನಾಯಕ ಅಶೋಕ್ ಜಯರಾಂ ಅವರು ತಮ್ಮ ತಾಯಿ ಪ್ರಭಾವತಿ ಜಯರಾಂ ಅವರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಪದ್ಮನಾಭ ನಗರ ನಿವಾಸದಲ್ಲಿ ಭೇಟಿ ಮಾಡಿದ ಅಶೋಕ್, ತಮ್ಮ ಕುಟುಂಬವು ಪಕ್ಷಕ್ಕಾಗಿ ಕಳೆದ ಮೂರು ದಶಕಗಳಿಂದ ದುಡಿದಿದೆ. ನಿಷ್ಠಾವಂತ ಕಾರ್ಯಕರ್ತರಂತೆ ಶ್ರಮವಹಿಸಿ ಪಕ್ಷವನ್ನು ಸಂಘಟನೆ ಮಾಡಿದ್ದೇವೆ.
ಸುಮಾರು 20 ವರ್ಷಗಳಿಂದ ನಮಗೆ ಯಾವುದೇ ಹುದ್ದೆ ನೀಡಿಲ್ಲ. ಆದರೂ ಪಕ್ಷಕ್ಕಾಗಿ ದುಡಿದಿದ್ದೇವೆ. ಈ ಬಾರಿ ತಮ್ಮ ತಾಯಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.