
ಗುಡಗಾಂವ್(ಅ.14]: ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆ ಮಾತಿಗೆ ಸರಿ ಹೊಂದುವಂತೆ, ಆತ್ಮರಕ್ಷಣೆ ಒದಗಿಸಬೇಕಿದ್ದ ಅಂಗರಕ್ಷಕನೇ ನ್ಯಾಯಾಧೀಶರೊಬ್ಬರ ಪತ್ನಿ ಹಾಗೂ ಮಗನ ಮೇಲೆ ಗುಂಡಿನ ದಾಳಿ ನಡೆಸಿದ ಆಘಾತಕಾರಿ ಘಟನೆ ಶನಿವಾರ ಮಧ್ಯಾಹ್ನ ದಿಲ್ಲಿ ಹೊರವಲಯದ ಗುಡಗಾಂವ್‌ನಲ್ಲಿ ನಡೆದಿದೆ. ಗುಂಡೇಟು ತಿಂದ ತಾಯಿ-ಮಗನ ಸ್ಥಿತಿ ಗಂಭೀರವಾಗಿದೆ.
ಗುಡಗಾಂವ್‌ನ ಹೆಚ್ಚುವರರಿ ಸತ್ರ ನ್ಯಾಯಾಧೀಶ ಕೃಷ್ಣಕಾಂತ್ ಅವರ ಪತ್ನಿ ರೀತು ಹಾಗೂ ಮಗ ಧ್ರುವ ದಾಳಿಗೆ ಒಳಗಾದವರು. ಘಟನೆಗೆ ಕಾರಣನಾದ ನ್ಯಾಯಾಧೀಶರ ಅಂಗರಕ್ಷಕ ಮಹಿಪಾಲ್‌ನನ್ನು ಬಂಧಿಸಲಾಗಿದೆ. ಮಹಿಪಾಲ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಹಾಗೂ ನ್ಯಾಯಾಧೀಶರ ಕುಟುಂಬವು ತನಗೆ ಕಿರುಕುಳ ನೀಡುತ್ತದೆ ಎಂಬ ಭಾವನೆ ಹೊಂದಿದ್ದ. ಇದೇ ದಾಳಿಗೆ ಕಾರಣವಾಗಿರಬಹುದು ಎಂದು ಮೂಲಗಳು ಹೇಳಿವೆ.
ಆಗಿದ್ದೇನು?:
ನ್ಯಾಯಾಧೀಶರ ಪತ್ನಿ ರೀತು ಹಾಗೂ ಮಗ ಧ್ರುವ ಶನಿವಾರ ಮಧ್ಯಾಹ್ನ ಅರ್ಕಾಡಿಯಾ ಮಾರುಕಟ್ಟೆಗೆ ಶಾಪಿಂಗ್‌ಗೆ ಬಂದಿದ್ದರು. ಇವರ ರಕ್ಷಣೆಗೆಂದು ಅಂಗರಕ್ಷಕ ಮಹಿಪಾಲ್ ಕೂಡ ಬಂದಿದ್ದ.
ಆದರೆ ಏಕಾಏಕಿ ಮಹಿಪಾಲ್ ತನ್ನ ಗನ್ ತೆಗೆದು ರೀತು ಹಾಗೂ ಧ್ರುವನ ಮೇಲೆ ಗುಂಡು ಹಾರಿಸಿದ್ದಾನೆ. ಆಗ ಇಬ್ಬರೂ ಕುಸಿದು ಬಿದ್ದಿದ್ದಾರೆ. ಇದೇ ವೇಳೆ, ಗುಂಡೇಟು ತಿಂದ ಧ್ರುವನನ್ನು ಎಳೆದು ತನ್ನ ಕಾರಿನಲ್ಲಿ ಹಾಕಿಕೊಂಡು ಹೋಗಲು ಮಹಿಪಾಲ್ ಯತ್ನಿಸಿದ್ದಾನೆ. ಆದರೆ ಸುತ್ತಲಿನ ಜನ ಬೊಬ್ಬೆ ಹಾಕತೊಡಗಿದಾಗ ಧ್ರುವನನ್ನು ಹಾಗೇ ಬಿಟ್ಟು ಪರಾರಿಯಾಗಿದ್ದಾನೆ. ಇಡೀ ಘಟನೆಯು ಪ್ರತ್ಯಕ್ಷದರ್ಶಿಗಳ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಬಳಿಕ ಪೊಲೀಸ್ ಠಾಣೆಗೆ ಬಂದು ಪೊಲೀಸರ ಮೇಲೂ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಪ್ರತಿದಾಳಿ ಆರಂಭಿಸಿದಾಗ ಅಲ್ಲಿಂದ ಪರಾರಿಯಾಗಿದ್ದಾನೆ. ಕೊನೆಗೆ ಆತನನ್ನು ಬೆನ್ನಟ್ಟಿಫರೀದಾಬಾದ್‌ನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧ್ರುವನಿಗೆ ತಲೆಗೆ ಹಾಗೂ ರೀತುಗೆ ಎದೆಗೆ ಗುಂಡು ಬಿದ್ದಿದ್ದು, ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. ಅಂಗರಕ್ಷಕನ ಮಾನಸಿಕ ಅಸಮತೋಲನವೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.