
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಪರೀತ ಟೆನ್ಷನ್‌ನಲ್ಲಿದ್ದಾರಂತೆ. ಗುಜರಾತ್ ಚುನಾವಣೆಯ ಬಿಸಿ ಹತ್ತಿಸಿಕೊಂಡಿರುವ ಇಬ್ಬರೂ ನಾಯಕರಿಗೆ ತಳಮಟ್ಟದಲ್ಲಿ ಸ್ವಲ್ಪ ಪರಿಸ್ಥಿತಿ ಉಲ್ಟಾ ಹೊಡೆಯುತ್ತಿದೆ ಎಂದು ಅರಿವಿಗೆ ಬಂದಂತಿದೆ. ಹೀಗಾಗಿ ಸಂಘ, ಸ್ಥಳೀಯ ನಾಯಕರು, ಕೇಂದ್ರದ ಮಂತ್ರಿಗಳೆಲ್ಲರನ್ನೂ ಗುಜರಾತ್‌ನಲ್ಲಿ ಕೆಲಸಕ್ಕೆ ಇಳಿಸುತ್ತಿದ್ದಾರೆ. ತಮ್ಮ ಬಗೆಗಿನ ಒಂದು ಸಣ್ಣ ಜಾಹಿರಾತು ಕೂಡ ತಮ್ಮ ಅನುಮತಿಯಿಲ್ಲದೆ ಹೋಗಕೂಡದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಸಚಿವ ಭೂಪೇಂದ್ರ ಯಾದವ್‌ಗೆ ಸೂಚನೆ ನೀಡಿದ್ದಾರೆ. ಕಳೆದ ವಾರ ಬಿಡುಗಡೆಯಾಗಿರುವ, ಜಾಹಿರಾತನ್ನು ಕೂಡ ಮೋದಿ ಸಾಹೇಬರು ನೋಡಿದ ಮೇಲೆಯೇ ಬಿಡುಗಡೆ ಮಾಡಲಾಗಿದೆಯಂತೆ. ಬಿಜೆಪಿ ಕಾರ್ಯಾಲಯದ ಮೂಲಗಳು ಹೇಳುತ್ತಿರುವ ಪ್ರಕಾರ ಗುಜರಾತ್ ಚುನಾವಣೆ ಪ್ರಚಾರದ ಕೊನೆಯ 10 ದಿನ ಮೋದಿ ಅವರೇ ರೋಡಿಗಿಳಿದು ಮತ ಕೇಳಲಿದ್ದಾರಂತೆ. ಉತ್ತರಪ್ರದೇಶ ಚುನಾವಣೆಯಲ್ಲಿ ಕೊನೆಯ 3 ದಿನ ವಾರಾಣಸಿಯಲ್ಲಿ ಹೋಗಿ ಕುಳಿತಂತೆ, ಮೋದಿ ಡಿಸೆಂಬರ್ ತಿಂಗಳಲ್ಲಿ ಪಟೇಲ್ ಬಾಹುಳ್ಯದ ಕ್ಷೇತ್ರಗಳಲ್ಲಿ ಠಿಕಾಣಿ ಹೂಡಲು ನಿರ್ಧರಿಸಿದ್ದಾರಂತೆ. ‘ದೆಹಲಿಯಲ್ಲಿ
ಗುಜರಾತಿ ಒಬ್ಬ ಪ್ರಧಾನಿಯಾಗಿ ಮುಂದುವರಿಯಬೇಕಾದರೆ ಬೇಸರ ಪಕ್ಕಕ್ಕಿಡಿ. ಗುಜರಾತ್‌ನಲ್ಲಿ ಇನ್ನೊಂದು ಅವಕಾಶ ಕೊಡಿ’ ಎನ್ನುವುದೇ ಮೋದಿ ಪ್ರಚಾರದ ಲೈನ್ ಆಗಿರಲಿದೆಯಂತೆ. ಭಾರತವನ್ನೆಲ್ಲ ಸುಲಭವಾಗಿ ರಭಸದಲ್ಲಿ ಗೆದ್ದ ಮೋದಿ ಮತ್ತು ಅಮಿತ್ ಶಾರಿಗೆ ತವರು ರಾಜ್ಯದಲ್ಲಿಯೇ ಚಳಿಗಾಲದಲ್ಲಿ ಬೆವರು ಇಳಿಯುತ್ತಿರುವುದು ರಾಜಕಾರಣದ ವಿಪರ್ಯಾಸಗಳಲ್ಲಿ ಒಂದು.
(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.