
ಮುಂಬೈ: ‘ಪ್ಯಾರಡೈಸ್ ಪೇಪರ್ಸ್’ ದಾಖಲೆಗಳಲ್ಲಿ ನಟ ಅಮಿತಾಭ್ ಬಚ್ಚನ್ ಹೆಸರು ಕೇಳಿ ಬಂದಿದೆ. ಆದರೆ, ಇದಕ್ಕೆ ಕಾಕತಾಳೀಯ ಎಂಬಂತೆ ಅಮಿತಾಭ್ ಬಚ್ಚನ್ ಪನಾಮಾ ಪೇಪರ್ಸ್ ಮತ್ತು ಬೋಫೋರ್ಸ್ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದ ಬಗ್ಗೆ ಮಾತನಾಡಿದ್ದಾರೆ. ‘ನಾನು ಯಾವತ್ತೂ ವ್ಯವಸ್ಥೆಯೊಂದಿಗೆ ಸಹಕರಿಸುತ್ತಾ ಬಂದಿದ್ದೇನೆ. ಜೀವನದ ಸಂಧ್ಯಾಕಾಲದಲ್ಲಿ ನನ್ನನ್ನು ನೆಮ್ಮದಿಯಿಂದ ಇರಲು ಬಿಡಿ’ ಎಂದು ಕೇಳಿಕೊಂಡಿದ್ದಾರೆ.
ತಮ್ಮ ಆಸ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಮುಂಬೈ ಮಹಾನಗರ ಪಾಲಿಕೆ ನೀಡಿರುವ ನೋಟಿಸ್’ಗೆ ಉತ್ತರವಾಗಿ ತಮ್ಮ ಬ್ಲಾಗ್‌ನಲ್ಲಿ ವ್ಯಥೆ ವ್ಯಕ್ತಪಡಿಸಿ ಪೋಸ್ಟ್‌ವೊಂದನ್ನು ಅಮಿತಾಭ್ ಭಾನುವಾರ ಪ್ರಕಟಿಸಿದ್ದು, ‘ನಾಳೆ ಇನ್ನಷ್ಟು ಆರೋಪಗಳು ಕೇಳಿಬರಬಹುದು. ಸಹಕರಿಸುವ ಪ್ರಕ್ರಿಯೆ ಮುಂದುವರಿಯಲಿದೆ’ ಎಂದು ಬರೆದುಕೊಂಡಿದ್ದಾರೆ.
ಇದರ ಮರುದಿನವೇ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ‘ಪ್ಯಾರಡೈಸ್ ಪೇಪರ್ಸ್’ ಹೆಸರಿನಲ್ಲಿ ಸೋರಿಕೆಯಾದ ದಾಖಲೆಗಳಲ್ಲಿ ಅಮಿತಾಭ್ ಬಚ್ಚನ್ ಅವರ ಹೆಸರು ಉಲ್ಲೇಖವಾಗಿದೆ. ‘ನನ್ನ ಜೀವನದ ಈ ಸಮಯದಲ್ಲಿ ನಾನು ಶಾಂತಿ ಮತ್ತು ಸ್ವಾತಂತ್ರ್ಯವನ್ನು ಬಯಸಿದ್ದೇನೆ. ನನ್ನ ಜೀವನದಲ್ಲಿ ಇನ್ನುಳಿದ ಕೆಲವು ವರ್ಷಗಳನ್ನು ನನ್ನೊಂದಿಗೆ ಕಳೆಯಲು ಬಯಸುತ್ತೇನೆ. ನನಗೀಗ ವಿಶೇಷಣಗಳು ಬೇಕಾಗಿಲ್ಲ. ಶೀರ್ಷಿಕೆಗಳು ಬೇಕಾಗಿಲ್ಲ. ನಾನು ಅವುಗಳಿಗೆ ಅರ್ಹನಾಗಿಲ್ಲ ಎಂದು ಅಮಿತಾಭ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ, ಪನಾಮಾ ಪೇಪರ್ಸ್ ಹಗರಣದ ಬಗ್ಗೆಯೂ ಪ್ರಸ್ತಾಪಿಸಿರುವ ಅಮಿತಾಭ್, ಇತ್ತೀಚಿನ ತಿಂಗಳಿನಲ್ಲಿ ಪನಾಮಾ ಪೇಪರ್ಸ್ ಹಗರಣದಲ್ಲಿ ನನ್ನ ಹೆಸರು ಕೇಳಿಬಂದಿದೆ. ಈ ಬಗ್ಗೆ ನನ್ನ ಪ್ರತಿಕ್ರಿಯೆ ಕೇಳಲಾಯಿತು. ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಮತ್ತು ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಪ್ರತಿಕ್ರಿಯಿಸಿದ್ದೆ. ಆದರೆ, ಪ್ರಶ್ನೆಗಳು ಮುಂದುವರಿದವು. ಬೋಫೋರ್ಸ್ ಹಗರಣದಲ್ಲಿಯೂ ನನ್ನ ಮತ್ತು ನನ್ನ ಕುಟುಂಬದ ಹೆಸರು ಕೇಳಿಬಂದವು.
ವರ್ಷಾನುಗಟ್ಟಲೆ ವಿಚಾರಣೆಗಳು ನಡೆದವು. ನಮ್ಮನ್ನು ದ್ರೋಹಿಗಳು ಎಂದು ಘೋಷಿಸಲಾಯಿತು. ಇದರ ವಿರುದ್ಧ ಬ್ರಿಟನ್ ಕೋರ್ಟ್‌ನಲ್ಲಿ ಹೋರಾಡಬೇಕಾಯಿತು. ನಾನು ತೊಂದರೆ ಅನುಭವಿಸುತ್ತಿರಬೇಕಾದರೆ ನನ್ನ ವಿರುದ್ಧ ಆರೋಪ ಮಾಡಿದವರು ವಿಚಾರಣೆಯನ್ನೇ ಎದುರಿಸಲಿಲ್ಲ’ ಎಂದು ಅಮಿತಾಭ್ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.