
ಶ್ರೀನಗರ(ಜುಲೈ 01): ಆರು ಪೊಲೀಸರನ್ನು ಬಲಿತೆಗೆದುಕೊಂಡಿದ್ದ ಉಗ್ರ ಬಷೀರ್ ಲಷ್ಕರಿಯನ್ನು ಭದ್ರತಾ ಪಡೆಗಳು ಕೊಂದುಹಾಕಿವೆ. ಅನಂತನಾಗ್ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರೆ ತೈಯಬಾ ಸಂಘಟನೆಯ ಬಷೀರ್ ಲಷ್ಕರೆ ಸೇರಿದಂತೆ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆಂದು ಜಮ್ಮು-ಕಾಶ್ಮೀರದ ಐಜಿಪಿ ಮುನೀರ್ ಖಾನ್ ತಿಳಿಸಿದ್ದಾರೆ. ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ಮಧ್ಯೆ ನಡೆದ ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ನಾಗರಿಕರೂ ಸಾವನ್ನಪ್ಪಿದ್ದು, ಇತರ ಇಬ್ಬರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಅನಂತನಾಗ್ ಜಿಲ್ಲೆಯ ದ್ಯಾಲ್ಗಮ್ ಗ್ರಾಮದಲ್ಲಿ ಲಷ್ಕರೆ ಉಗ್ರರು ಇರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿದೆ. ಕೂಡಲೇ ಆ ಗ್ರಾಮದ ಸುತ್ತ ಬಿಗಿ ಪಹರೆ ರಚಿಸಲಾಯಿತು. ಭದ್ರತಾ ಪಡೆಗಳು ಬಂದಿರುವ ಸುಳಿವು ಸಿಕ್ಕ ಉಗ್ರಗಾಮಿಗಳು ಊರಿನ ಗ್ರಾಮಸ್ಥರನ್ನೇ ಒತ್ತೆಯಾಗಿರಿಸಿಕೊಂಡು ಅವರನ್ನೇ ಮಾನವ ಕವಚವನ್ನಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಕೈಬಿಡದೇ ಮುನ್ನುಗ್ಗಿ 17 ಗ್ರಾಮಸ್ಥರನ್ನು ಆ ಸ್ಥಳದಿಂದ ಬಿಡಿಸುತ್ತಾರೆ. ಬಳಿಕ ಉಗ್ರರ ಮೇಲೆ ಪ್ರಹಾರ ನಡೆಸುತ್ತಾರೆ. ದುರದೃಷ್ಟವಶಾತ್, ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ನಾಗರಿಕರು ಬಲಿಯಾಗುತ್ತಾರೆ.
ಜನರ ಪ್ರಚೋದನೆಗೆ ಯತ್ನ:
ದ್ಯಾಲ್ಗಮ್ ಗ್ರಾಮದಲ್ಲಿ ಲಷ್ಕರೆ ಉಗ್ರರ ಸುತ್ತ ಭದ್ರತಾ ಪಡೆಗಳು ದಿಗ್ಬಂಧನ ಹಾಕಿದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಉಗ್ರರ ಪರವಾಗಿ ಜನರನ್ನು ಸೇರಿಸುವ ಪ್ರಯತ್ನಗಳು ನಡೆದಿದ್ದವು. ಬಷೀರ್ ಲಷ್ಕರಿಯನ್ನು ಉಳಿಸಲು ನೀವೆಲ್ಲಾ ಆ ಸ್ಥಳಕ್ಕೆ ಧಾವಿಸಿ ಎಂಬಂತಹ ಸಂದೇಶಗಳಿಂದ ಕಾಶ್ಮೀರಿ ಯುವಕರಿಗೆ ಪ್ರಚೋದನೆ ನೀಡಲಾಗುತ್ತಿತ್ತು ಎಂದು ಪೊಲೀಸರು ವಿಷಾದಿಸುತ್ತಾರೆ.
ಒಂದು ಅಂದಾಜಿನ ಪ್ರಕಾರ ದಕ್ಷಿಣ ಕಾಶ್ಮೀರದಲ್ಲಿ 90 ಭಯೋತ್ಪಾದಕರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಗ್ರರಿಗೆ ಸುರಕ್ಷಿತ ತಾಣಗಳೆನಿಸಿರುವ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತವಿವೆ. ಉಗ್ರ ಮುಖಂಡರನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಇಲ್ಲಿಯವರೆಗೆ ಯಶಸ್ಸು ಪಡೆದಿದೆ. ಕಳೆದ ಎರಡು ವಾರದಲ್ಲಿ ಎಂಟು ಲಷ್ಕರೆ ಉಗ್ರರು ಹತ್ಯೆಯಾಗಿದ್ದಾರೆ. ಇವತ್ತು ಹತ್ಯೆಯಾದ ಬಷೀರ್ ಲಷ್ಕರಿ ಒಬ್ಬ ಪ್ರಮುಖ ಲಷ್ಕರೆ ಉಗ್ರನೆಂದು ಪರಿಗಣಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.