
ಜಗತ್ತಿನಾದ್ಯಂತ ವಿಜ್ಞಾನಿಗಳಿಗೆ ಈಗ ಹಬ್ಬದ ಸಂಭ್ರಮ. ಧರ್ಮಾತೀತರಾದ ವಿಜ್ಞಾನಿಗಳಿಗೆ ಅದೆಲ್ಲಿಯ ಹಬ್ಬ ಎಂದಿರಾ? ವಿಜ್ಞಾನಿಗಳು ಸಂಭ್ರಮ ಪಡಲು ಬಲವಾದ ಕಾರಣವಿದೆ. ಬ್ರಹ್ಮಾಂಡದ ರಹಸ್ಯ ಅರಿತ ಮನುಷ್ಯನಿಗೆ ಆಗುವ ಖುಷಿ ಈಗ ವಿಜ್ಞಾನಿಗಳಿಗೆ ಆಗುತ್ತಿದೆ. ಬ್ರಹ್ಮಾಂಡದಲ್ಲಿ ಎರಡು ದೈತ್ಯ ವಸ್ತುಗಳು ಢಿಕ್ಕಿ ಹೊಡೆದರೆ ಏನಾಗುತ್ತದೆ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ಕಣ್ಣಾರೆ ಉತ್ತರ ಕಂಡುಕೊಳ್ಳುತ್ತಿದ್ದಾರೆ. ಎರಡು ನ್ಯೂಟ್ರಾನ್ ಸ್ಟಾರ್'ಗಳು ಢಿಕ್ಕಿ ಹೊಡೆದ ಆನಂತರದ ಪರಿಣಾಮಗಳನ್ನು ವಿಜ್ಞಾನಿಗಳು ಅವಲೋಕಿಸುತ್ತಿದ್ದಾರೆ. ವಿಜ್ಞಾನಿಗಳು ಬಯಸಿದ ರೀತಿಯಲ್ಲೇ ಎಲ್ಲವೂ ನಡೆದಿರುವುದು ಅವರ ಅಪರಿಮಿತ ಸಂಭ್ರಮಕ್ಕೆ ಕಾರಣವಾಗಿದೆ.
ಏನಾಯಿತು..?
ಆಗಸ್ಟ್ 17ರಂದು ಭೂಮಿಯಲ್ಲಿದ್ದ ವಿಜ್ಞಾನಿಗಳಿಗೆ ಸಣ್ಣದೊಂದು ಸಿಗ್ನಲ್ ಸಿಕ್ಕಿತು. ಅದು ಬ್ರಹ್ಮಾಂಡದ ಯಾವುದೋ ಪ್ರಮುಖ ಘಟನೆಯ ಸಿಗ್ನಲ್ ಎಂಬ ಸುಳಿವು ವಿಜ್ಞಾನಿಗಳಿಗೆ ಸಿಕ್ಕಿತು. ಜೀವಮಾನದಲ್ಲಿ ಇಂಥ ಅಪೂರ್ವ ಅವಕಾಶ ಕೈಚೆಲ್ಲಲು ಸಾಧ್ಯವೇ..! ಜಗತ್ತಿನಾದ್ಯಂತ 4 ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು ಟೆಲಿಸ್ಕೋಪ್ ಇಟ್ಟುಕೊಂಡು ರಾತ್ರಿ ಹಗಲು ಎನ್ನದೇ ಪ್ರತೀ ಕ್ಷಣವೂ ಆಗಸವನ್ನು ವೀಕ್ಷಿಸಲು ಆರಂಭಿಸಿದರು. ಭೂಮಿಯಲ್ಲಷ್ಟೇ ಅಲ್ಲ, ಆಗಸದ ಮೇಲೂ ನಿಂತ ಸಿಗ್ನಲ್'ಗಳನ್ನು ಅವಲೋಕಿಸಿದರು...
ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತೆ:
ನ್ಯೂಟ್ರಾನ್ ಸ್ಟಾರ್'ನ ಸಿಗ್ನಲ್ ಏನೋ ಸಿಕ್ಕಿತು. ಆದರೆ, ಅದರ ಮೂಲ ಯಾವುದು ಎಂಬುದನ್ನು ಪತ್ತೆಹಚ್ಚುವಷ್ಟರಲ್ಲಿ ವಿಜ್ಞಾನಿಗಳು ಹೈರಾಣವಾಗಿಹೋಗಿದ್ದರು. ಹುಡುಕುವ ಆ ಕೆಲಸ ಅಷ್ಟು ಸುಲಭದ್ದಾಗಿರಲಿಲ್ಲ. ಬ್ರಹ್ಮಾಂಡದಲ್ಲಿ ಕೋಟ್ಯಂತರ ಗೆಲಾಕ್ಸಿಗಳಿರುತ್ತವೆ. ಅಂಥ ಯಾವ ಗೆಲಾಕ್ಸಿಯಿಂದ ಈ ಸಿಗ್ನಲ್ ಬಂತು ಎಂದು ಪತ್ತೆ ಹಚ್ಚುವುದು ಹೇಗೆ? ವಿಜ್ಞಾನಿಗಳು ಹಾಗೂ ಹೀಗೂ ಮಾಡಿ 100 ಗೆಲಾಕ್ಸಿ ಶಾರ್ಟ್'ಲಿಸ್ಟ್ ಮಾಡಿದರು. ಒಂದೊಂದೇ ಗೆಲಾಕ್ಸಿಯನ್ನು ಪರಿಶೀಲಿಸಿದಾಗ ಎನ್'ಜಿಸಿ4993 ಎಂದು ಗುರುತಿಸಲಾದ ಗೆಲಾಕ್ಸಿಯಲ್ಲಿ ಈ ವಿಸ್ಮಯಕಾರಿ ಘಟನೆ ನಡೆದಿತ್ತು. ಚೆಲ್ಲಾಪಿಲ್ಲಿಯಾಗುತ್ತಿರುವ ಹುಲ್ಲಿನ ಬಣವೆಯಲ್ಲಿ ನಶಿಸಿಹೋಗುತ್ತಿರುವ ಸೂಜಿಯನ್ನು ಹುಡುಕಿದಂತೆ ಆಗಿತ್ತು ಎಂದು ವಿಜ್ಞಾನಿಗಳು ತಮ್ಮ ಪ್ರಯತ್ನದ ಕುರಿತು ಹೇಳುತ್ತಾರೆ.
ಅಂದಹಾಗೆ, ಈ ಮೊದಲೇ ಹೇಳಿದಂತೆ ಆಗಸ್ಟ್ 17ರಂದು ಸಿಕ್ಕ ಸಿಗ್ನಲ್ ಬ್ರಹ್ಮಾಂಡದ ಪ್ರಮುಖ ಘಟನೆಯದ್ದಾಗಿದೆ. ಆದರೆ, 13 ಕೋಟಿ ವರ್ಷದ ಹಿಂದೆ ಎರಡು ನ್ಯೂಟ್ರಾನ್ ನಕ್ಷತ್ರಗಳು ಢಿಕ್ಕಿ ಹೊಡೆದ ಘಟನೆಯ ಸಿಗ್ನಲ್ ಅದಾಗಿತ್ತು. ಅಂದರೆ 13 ಕೋಟಿ ಜ್ಯೋತಿರ್ವರ್ಷ ಪ್ರಯಾಣ ಮಾಡಿ ಭೂಮಿಗೆ ಬಂದಿದೆ. ಆ ವಿಸ್ಮಯಕಾರಿ ಘಟನೆ ನಡೆದಾಗ ಭೂಮಿಯ ಮೇಲೆ ಡೈನಾಸರ್'ಗಳು ಇನ್ನೂ ಬದುಕಿದ್ದವು. ಈಗ ಆ ಘಟನೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ.
ಯಾಕಿಷ್ಟು ತಡ?
ಸೂರ್ಯನ ಬೆಳಕು ಒಂದು ಸೆಕೆಂಡ್'ಗೆ 3 ಲಕ್ಷ ಕಿ.ಮೀ. ವೇಗದಲ್ಲಿ ಹೋಗುತ್ತದೆ. ಹೀಗೆ ಬೆಳಕು ಒಂದು ವರ್ಷ ಹೋದರೆ ಅಷ್ಟು ದೂರವನ್ನು ಜ್ಯೋತಿರ್ವರ್ಷ ಎಂದು ಕರೆಯುತ್ತಾರೆ. ಒಂದು ಜ್ಯೋತಿರ್ವರ್ಷವು 9.46 ಶತಕೋಟಿ ಕಿಮೀ ದೂರ ಇರುತ್ತದೆ. ಎರಡು ನ್ಯೂಟ್ರಾನ್ ನಕ್ಷತ್ರಗಳು ಢಿಕ್ಕಿ ಹೊಡೆದ ಘಟನೆ ನಡೆದದ್ದು ಎನ್'ಜಿಸಿ4993 ಗೆಲಾಕ್ಸಿಯಲ್ಲಿ. ಇದು ಭೂಮಿಯಿಂದ 13 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ.
ನ್ಯೂಟ್ರಾನ್ ಸ್ಟಾರ್'ಗಳೆಂದರೇನು?
ಮನುಷ್ಯರಂತೆ ನಕ್ಷತ್ರಗಳಿಗೂ ಸಾವು ಎಂಬುದಿರುತ್ತದೆ. ಸೂರ್ಯನಿಗಿಂತ ಎಷ್ಟೋ ಪಟ್ಟು ದೊಡ್ಡದಾದ ಬೃಹತ್ ನಕ್ಷತ್ರಗಳ ಕಾಲ ಅಂತ್ಯವಾದಾಗ ಅವು ಡೆಡ್ ಸ್ಟಾರ್ ಆಗುತ್ತವೆ. ಈ ನಕ್ಷತ್ರಗಳ ಹೊರಪದರವು ಕಳಚಿ ಹೊರಹಾರಿರುತ್ತವೆ. ಒಳಗಿನ ಮುಖ್ಯಭಾಗ ನಾಶವಾಗುತ್ತದೆ. ಅಂದರೆ, ನಕ್ಷತ್ರ ಸ್ಫೋಟಗೊಳ್ಳುತ್ತದೆ. ಆಗ ಇನ್ನುಳಿಯುವ ಭಾಗವೇ ನ್ಯೂಟ್ರಾನ್ ಸ್ಟಾರ್. ಬ್ರಹ್ಮಾಂಡದಲ್ಲೇ ಅತ್ಯಂತ ಭೀಕರ ವಾತಾವರಣ ಇದೆ ಎಂದಾದರೆ ಅದು ನ್ಯೂಟ್ರಾನ್ ಸ್ಟಾರ್'ನಲ್ಲೇ. 10 ಲಕ್ಷ ಡಿಗ್ರಿಯಷ್ಟು ಉಷ್ಣಾಂಶ, ವಿಪರೀತ ವಿಕಿರಣಗಳು, ಭಾರೀ ಶಕ್ತಿಶಾಲಿ ಮ್ಯಾಗ್ನೆಟಿಕ್ ಫೀಲ್ಡ್.. ಅಬ್ಬಬ್ಬಾ ನಮ್ಮ ಊಹೆಗೂ ನಿಲುಕದ ಭೀಕರತೆ. ಇದರ ವಿಸ್ತೀರ್ಣ ಕೇವಲ 20 ಕಿಮೀ ಇದೆಯಾದರೂ ಇದರ ತೂಕ ಭೂಮಿಗಿಂತ 5 ಲಕ್ಷ ಪಟ್ಟು ಹೆಚ್ಚು ಭಾರವಿರುತ್ತದೆ. ಇದರಿಂದ ಒಂದು ಹಿಡಿಯಷ್ಟು ವಸ್ತು ಕಿತ್ತುಕೊಂಡು ಬಂದರೆ ಅದರ ತೂಕ ಹಿಮಾಲಯಕ್ಕಿಂತ ಹೆಚ್ಚೇ ಇರುತ್ತದೆ.
ಮಿಲನ ಹೇಗೆ?
ನ್ಯೂಟ್ರಾನ್ ನಕ್ಷತ್ರಗಳು ಪರಸ್ಪರ ಸುತ್ತುಹಾಕುತ್ತಿರುತ್ತವೆ. ಹೀಗೆ ಆಗುವಾಗ ಅವುಗಳಿಂದ ಗುರುತ್ವಾಕರ್ಷಣ ಅಲೆಗಳು ಹೊರಹೊಮ್ಮುತ್ತವೆ. ಈ ಅಲೆಗಳ ಶಕ್ತಿಯಿಂದಾಗಿ ಆ ನಕ್ಷತ್ರಗಳು ಇನ್ನಷ್ಟು ಸಮೀಪಕ್ಕೆ ಸೆಳೆಯಲ್ಪಡುತ್ತವೆ. ಹೀಗಾದಾಗ ಗುರುತ್ವಾಕರ್ಷಣ ಅಲೆ ಹೊರಸೂಸುವ ವೇಗ ಹೆಚ್ಚಾಗುತ್ತಾ ಹೋಗಿ ಕೊನೆಗೆ ಆ ನಕ್ಷತ್ರಗಳು ಒಗ್ಗೂಡುತ್ತವೆ. ಹೀಗೆ ಮಿಲನವಾದ ನಕ್ಷತ್ರಗಳಲ್ಲಿ ಏನು ಪ್ರಕ್ರಿಯೆ ನಡೆಯುತ್ತದೆ ಎಂಬುದು ವಿಜ್ಞಾನಿಗಳಿಗೂ ಗೊತ್ತಿಲ್ಲ. ಅವರು ಅಂದಾಜು ಮಾಡಿರುವ ಪ್ರಕಾರ, ಭಾರೀ ತೂಕದ ನಕ್ಷತ್ರಗಳ ಮಿಲನದಿಂದ ಬ್ಲ್ಯಾಕ್ ಹೋಲ್ (ಕಪ್ಪು ರಂಧ್ರ) ನಿರ್ಮಾಣವಾಗಬಹುದು. ಇನ್ನು, ಹಗುರ ನಕ್ಷತ್ರಗಳಾದರೆ ಅವು ನ್ಯೂಟ್ರಾನ್ ಸ್ಟಾರ್'ಗಳಾಗಿಯೇ ಉಳಿದುಕೊಳ್ಳುವ ಸಾಧ್ಯತೆ ಇದೆ.
ಭಸ್ಮಾಸ್ಮುರ ಅಲೆಗಳು:
ನಕ್ಷತ್ರಗಳ ಘರ್ಷಣೆಯಿಂದ ಬೃಹತ್ ಗುರುತ್ವಾಕರ್ಷಣ ಅಲೆಗಳ ಸೃಷ್ಟಿಯಾಯಿತು. ಗ್ಯಾಮಾ ಕಿರಣದಿಂದ ಹಿಡಿದು ರೇಡಿಯೋ ವಿಕಿರಣದವರೆಗೆ ಇಡೀ ಎಲೆಕ್ಟ್ರೋಮ್ಯಾಗ್ನೆಟಿಕ್ ಬಣವೇ ಹೊತ್ತಿಕೊಂಡಿತು. ಸಣ್ಣ ಗ್ಯಾಮಾ ಕಿರಣಗಳು ಬಹಳ ಡೇಂಜರ್. ಇವೊಂದು ರೀತಿ ಭಸ್ಮಾಸುರವಿದ್ದಂತೆ. ಇವು ಸಾಗುವ ಹಾದಿಯಲ್ಲಿ ಯಾವ ಗ್ರಹ ಅಡ್ಡಬಂದರೂ ಅಲ್ಲಿಯ ಜೀವಸಂಕುಲವನ್ನು ನಾಶ ಮಾಡಿಬಿಡುತ್ತದೆ. ನ್ಯೂಟ್ರಾನ್ ಸ್ಟಾರ್ ಮಿಲನದ ಸ್ಥಳದಿಂದ ಎರಡು ದಿಕ್ಕುಗಳಲ್ಲಿ ಈ ಗ್ಯಾಮಾ ಕಿರಣಗಳು ಸಾಗಿವೆ. ಅದೃಷ್ಟಕ್ಕೆ, ಗ್ಯಾಮಾ ಕಿರಣಗಳು ಸಾಗುವ ದಿಕ್ಕಿನಲ್ಲಿ ಭೂಮಿ ಇರಲಿಲ್ಲ. ಒಂದು ವೇಳೆ, ಇದ್ದಿದ್ದರೆ ಇಲ್ಲಿರುವ ಜೀವ ಸಂಕುಲಗಳೆಲ್ಲವೂ ನಾಶವಾಗಿಬಿಡುತ್ತಿದ್ದವು. ಈ ದೃಶ್ಯದ ಮೆಲುಕು ಹಾಕಲು ನಾವು ನೀವು ಇರುತ್ತಲೇ ಇರಲಿಲ್ಲ.
ಚಿನ್ನದ ಸೃಷ್ಟಿ ಕಂಡ ವಿಜ್ಞಾನಿಗಳು:
ನ್ಯೂಟ್ರಾನ್ ಸ್ಟಾರ್'ಗಳ ಮಿಲನದ ದೃಶ್ಯವನ್ನು ವಿಜ್ಞಾನಿಗಳು ಕಣ್ಣಾರೆ ಕಂಡು ದಂಗಾಗಿದ್ದಾರೆ. ನಕ್ಷತ್ರಗಳ ಮಿಲನದಿಂದ ದಟ್ಟ ನೀಲಿ ಬಣ್ಣದ ಅತೀವ ಬಿಸಿ ಇರುವ ಅವಶೇಷಗಳು ಚಿಮ್ಮಿದವು. ಈ ಕಸಗಳು ಬೆರೆತುಕೊಂಡು ಚಿನ್ನ, ಪ್ಲಾಟಿನಂ, ಯುರೇನಿಯಮ್ ಮೊದಲಾದ ಭಾರತದ ವಸ್ತುಗಳಾಗಿ ಮಾರ್ಪಟ್ಟವು. ನ್ಯೂಟ್ರಾನ್ ಸ್ಟಾರ್ ಮಿಲನದಿಂದ ಚಿಮ್ಮಿದ ಆ ವಸ್ತುಗಳು ಬ್ರಹ್ಮಾಂಡದ ಎಲ್ಲಾ ದಿಕ್ಕುಗಳಲ್ಲೂ ಸಂಚರಿಸುತ್ತಿವೆ. ಕಾಲಾನುಕ್ರಮದಲ್ಲಿ ಈ ವಸ್ತುಗಳು ಪರಸ್ಪರ ಬೆರೆತು ಗ್ರಹಗಳಾಗುವ ಸಾಧ್ಯತೆ ಇರುತ್ತದೆ. ನಮ್ಮ ಭೂಮಿ ಕೂಡ ಇಂಥದ್ದೇ ಪ್ರಕ್ರಿಯೆಯಿಂದ ಹುಟ್ಟಿದ ಗ್ರಹವಾಗಿದೆ. ಇಲ್ಲಿ ಇರುವ ಚಿನ್ನ, ಯುರೇನಿಯಂ ಇತ್ಯಾದಿ ವಸ್ತುಗಳು ಆ ಮಿಲನದಿಂದಾದ ಸೃಷ್ಟಿಯೇ. ನಮ್ಮ ದೇಹದ ಮೂಳೆಯಲ್ಲಿರುವ ಕ್ಯಾಷ್ಷಿಯಮ್ ಇತ್ಯಾದಿಯೂ ಆ ಮೂಲದಿಂದಲೇ ಬಂದವು. ಕುತೂಹಲದ ವಿಚಾರವೆಂದರೆ, ಚಿನ್ನವೇ ಹೆಚ್ಚಾಗಿ ತುಂಬಿರುವ ಗ್ರಹ ಸಾಕಷ್ಟು ಇರಬಹುದು.
ಮಾಹಿತಿ: ಎಪಿ/ಎಎಫ್'ಪಿ ಸುದ್ದಿ ಸಂಸ್ಥೆಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.