ಮಾನವ ಹಕ್ಕು ಆಯೋಗ: ಎರಡು ವರ್ಷಗಳಾದರೂ ಹುದ್ದೆಗಳು ಖಾಲಿ; ಕೇಂದ್ರದ ವಿರುದ್ಧ ಸುಪ್ರೀಂ ಗರಂ

By Suvarna Web DeskFirst Published Jan 23, 2017, 11:51 AM IST
Highlights

ಮಾರ್ಚ್ 2014ರಿಂದ ಆಯೋಗದಲ್ಲಿ ಓರ್ವ ಸದಸ್ಯ ಹಾಗೂ ನವಂಬರ್ 2014ರಿಂದ ಮಹಾ-ನಿರ್ದೇಶಕ (ತನಿಖೆ) ಹುದ್ದೆಯು ಖಾಲಿಯಿದೆ. ಇದನ್ನು ಒಪ್ಪಿಕೊಳ್ಳಲಾಗದು; ನಿಮ್ಮ ಸಮಸ್ಯೆಯಾದರೂ ಏನು? ಎಂದು ಮುಖ್ಯ ನ್ಯಾಯಾಧೀಶ ಜೆ.ಎಸ್. ಖೆಹರ್ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿ (ಜ.23): ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ  ಅಧಿಕಾರಿಗಳನ್ನು ನೇಮಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಆಯೋಗಕ್ಕೆ ಮಹಾ-ನಿರ್ದೇಶಕರನ್ನು ನೇಮಿಸುವ ವಿಚಾರದಲ್ಲಿ ವಿಳಂಬವೇಕೆ ಎಂದು ಪ್ರಶ್ನಿಸರುವ ಸುಪ್ರೀಂ ಕೋರ್ಟ್, ಒಂದು ವಾರದೊಳಗೆ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸೂಚಿಸಿದೆ.

ಮಾರ್ಚ್ 2014ರಿಂದ ಆಯೋಗದಲ್ಲಿ ಓರ್ವ ಸದಸ್ಯ ಹಾಗೂ ನವಂಬರ್ 2014ರಿಂದ ಮಹಾ-ನಿರ್ದೇಶಕ (ತನಿಖೆ) ಹುದ್ದೆಯು ಖಾಲಿಯಿದೆ. ಇದನ್ನು ಒಪ್ಪಿಕೊಳ್ಳಲಾಗದು; ನಿಮ್ಮ ಸಮಸ್ಯೆಯಾದರೂ ಏನು? ಎಂದು ಮುಖ್ಯ ನ್ಯಾಯಾಧೀಶ ಜೆ.ಎಸ್. ಖೆಹರ್ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರವು ಸದಸ್ಯರ ಹುದ್ದೆಗೆ ಒಬ್ಬರ ಹೆಸರನ್ನು ಅಂತಿಮಗೊಳಿಸಿತ್ತು, ಆದರೆ ಅವರು ಅದನ್ನು ಸ್ವೀಕರಿಸಲು ಒಪ್ಪಲಿಲ್ಲ. ಸರ್ಕಾರವು ಆದಷ್ಟು ಶೀಘ್ರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು ಎಂದು ಪಿಂಕಿ ಆನಂದ್ ಪ್ರತಿಕ್ರಿಯಿಸಿದ್ದಾರೆ.

ಪಿಂಕಿ ಆನಂದ್ ಸ್ಪಷ್ಟೀಕರಣದಿಂದ ಸಮಧಾನಗೊಳ್ಳದ  ನ್ಯಾ| ಖೆಹರ್, ಹಾಗಾದರೆ ಮಹಾನಿರ್ದೇಶಕರ ಹುದ್ದೆ ಏಕೆ ಭರ್ತಿಯಾಗಿಲ್ಲ? ಯಾರು ಸಮರ್ಥ ಐಪಿಎಸ್ ಅಧಿಕಾರಿಗಳು ಇಲ್ಲವೇ? ಎಂದು  ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕು ಆಯೋಗದಲ್ಲಿ ಪ್ರಮುಖ ಹುದ್ದೆಗಳು 2-3 ವರ್ಷಗಳಿಂದ ಖಾಲಿಯಿರುವ ಬಗ್ಗೆ ರಾಧಕಾಂತ ತ್ರಿಪಾಠಿ ಎಂಬ ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

click me!