ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತಸ್ಲೀಮಾ ನಸ್ರೀನ್ ಒತ್ತಾಯ

By Suvarna Web DeskFirst Published Jan 23, 2017, 11:20 AM IST
Highlights

ಇಸ್ಲಾಂ ಧರ್ಮವನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಿ ಎಂಬ ಪ್ರಶ್ನೆಗೆ ತಸ್ಲೀಮಾ, "ಇಸ್ಲಾಂ ದೇಶಗಳಲ್ಲಿ ಜಾತ್ಯತೀತ ವ್ಯವಸ್ಥೆ ಜಾರಿಗೆ ಬರಬೇಕೆಂದರೆ ಇಸ್ಲಾಂ ಧರ್ಮದ ವಿರುದ್ಧ ಟೀಕೆ ಮಾಡುವುದು ಅನಿವಾರ್ಯ" ಎಂದು ಉತ್ತರಿಸಿದ್ದಾರೆ.

ಜೈಪುರ(ಜ. 23): ಭಾರತದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ತುರ್ತಾಗಿ ಜಾರಿಗೆ ತರುವ ಅಗತ್ಯವಿದೆ ಎಂದು ಖ್ಯಾತ ಸಾಹಿತಿ ತಸ್ಲೀಮಾ ನಸ್ರೀನ್ ಅಭಿಪ್ರಾಯಪಟ್ಟಿದ್ದಾರೆ. ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಬಾಂಗ್ಲಾ ಮೂಲದ ತಸ್ಲೀಮಾ ನಸ್ರೀನ್, ಮಹಿಳೆಯರನ್ನು ಸಶಕ್ತಗೊಳಿಸಲು ಸಮಾನ ನಾಗರಿಕ ಸಂಹಿತೆಯಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

"ಹಿಂದೂಗಳ ಕಾನೂನಿನಲ್ಲಿ ಅವರ ಮಹಿಳೆಯರು ತಮ್ಮ ಗಂಡನಿಗೆ ವಿಚ್ಛೇದನ ನೀಡಬಹುದು, ಅವರ ಆಸ್ತಿಯಲ್ಲಿ ಪಾಲು ಕೇಳಬಹುದು. ಹಿಂದೂ ಮಹಿಳೆಯರು ಎಷ್ಟೊಂದು ಪ್ರಗತಿ ಸಾಧಿಸಿದ್ದಾರೆ. ಆದರೆ, ಇಸ್ಲಾಂ ಮೂಲಭೂತವಾದಿಗಳು ಯಾಕೆ ಸಮಾನ ಕಾನೂನುಗಳನ್ನು ವಿರೋಧಿಸುತ್ತಾರೆ. ಸಮಾನ ಕಾನೂನು ಇರುವುದು ಪ್ರಜಾತಂತ್ರವಲ್ಲವೇ? ಮಹಿಳೆಯರ ರಕ್ಷಣೆಗೆ ಭಾರತದಲ್ಲಿ ಈಗ ತುರ್ತು ಅಗತ್ಯವಿದೆ. ಮೂಲಭೂತವಾದಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು, ಟೀಕೆಗಳನ್ನು ಸ್ವೀಕರಿಸುವುದನ್ನು ಕಲಿತುಕೊಳ್ಳಬೇಕು" ಎಂದು ತಸ್ಲೀಮಾ ಕಿವಿಮಾತು ಹೇಳಿದ್ದಾರೆ.

ಇಸ್ಲಾಂ ಮೂಲಭೂತವಾದದ ವಿರುದ್ಧ ತೀವ್ರ ಟೀಕೆ ಮಾಡಿದ ತಸ್ಲೀಮಾ, "ನಾನಾಗಲೀ ಅಥವಾ ಯಾರಾದರೂ ಆಗಲೀ ಹಿಂದು, ಬೌದ್ಧ ಅಥವಾ ಬೇರೆ ಧರ್ಮಗಳ ವಿರುದ್ಧ ಟೀಕೆ ಮಾಡಿದರೆ ಏನೂ ಆಗುವುದಿಲ್ಲ. ಆದರೆ, ಇಸ್ಲಾಮನ್ನು ನೀವು ಟೀಕಿಸಿ ಬಿಟ್ಟರೆ ಜನರು ಪ್ರಾಣ ತೆಗೆಯಲು ಓಡಿ ಬರುತ್ತಾರೆ... ನಿಮ್ಮ ವಿರುದ್ಧ ಫತ್ವಾ ಹೊರಡಿಸುತ್ತಾರೆ. ಅವರು ಯಾಕೆ ಹಾಗೆ ಮಾಡಬೇಕು? ನನ್ನ ಅಭಿಪ್ರಾಯ ಒಪ್ಪಿಗೆಯಾಗದಿದ್ದರೆ ನನ್ನ ವಿರುದ್ಧ ಬರೆಯಬಹುದು, ಟೀಕೆ ಮಾಡಬಹುದು. ಫತ್ವಾ ಹೊರಡಿಸುವ ಬದಲು ಸಂವಾದ ನಡೆಸಬಹುದು" ಎಂದು ತಿಳಿಸಿದ್ದಾರೆ.

ಇಸ್ಲಾಂ ಧರ್ಮವನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಿ ಎಂಬ ಪ್ರಶ್ನೆಗೆ ತಸ್ಲೀಮಾ, "ಇಸ್ಲಾಂ ದೇಶಗಳಲ್ಲಿ ಜಾತ್ಯತೀತ ವ್ಯವಸ್ಥೆ ಜಾರಿಗೆ ಬರಬೇಕೆಂದರೆ ಇಸ್ಲಾಂ ಧರ್ಮದ ವಿರುದ್ಧ ಟೀಕೆ ಮಾಡುವುದು ಅನಿವಾರ್ಯ" ಎಂದು ಉತ್ತರಿಸಿದ್ದಾರೆ.

ಬಾಂಗ್ಲಾದೇಶದ ತಸ್ಲೀಮಾ ನಸ್ರೀನ್ 1993ರಲ್ಲಿ "ಲಜ್ಜಾ" ಎಂಬ ಪುಸ್ತಕ ಬರೆದು ವಿಶ್ವಾದ್ಯಂತ ಸುದ್ದಿಯಾದರು. ಬಾಂಗ್ಲಾದೇಶದ ಇಸ್ಲಾಂ ಮೂಲಭೂತವಾದಿಗಳು ತಸ್ಲೀಮಾ ವಿರುದ್ಧ ಫತ್ವಾ ಹೊರಡಿಸಿದರು. ಬಾಂಗ್ಲಾದಿಂದ ಹೊರಬಿದ್ದ ತಸ್ಲೀಮಾ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

(ಮಾಹಿತಿ: ಐಎಎನ್'ಎಸ್ ಸುದ್ದಿ ಸಂಸ್ಥೆ)

click me!