
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) 2018-19ನೇ ಸಾಲಿನಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಜೂ.7ರಿಂದ ರಿಯಾಯಿತಿ ದರದ ಬಸ್ ಪಾಸ್ ವಿತರಿಸಲಿದೆ.
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸಿಗಲಿದೆ. ಈ ಸಮುದಾಯದ ವಿದ್ಯಾರ್ಥಿಗಳು ಸಂಸ್ಕರಣಾ ಶುಲ್ಕ ಹಾಗೂ ಅಪಘಾತ ಪರಿಹಾರ ನಿಧಿಗೆ 150 ರು. ಪಾವತಿಸಬೇಕು. ಉಚಿತ ಪಾಸ್ ಪಡೆಯಲು ಅರ್ಜಿ ಜತೆಗೆ ಜಾತಿ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು. ನಿಗಮದ ಎಲ್ಲಾ ಬಸ್ ನಿಲ್ದಾಣ ಹಾಗೂ ಜಾಲತಾಣದಲ್ಲಿ ಪಾಸ್ ಅರ್ಜಿಗಳು ಲಭ್ಯವಿದೆ. ವಿದ್ಯಾರ್ಥಿಗಳು ಭರ್ತಿಗೊಳಿಸಿದ ಅರ್ಜಿಗಳನ್ನು ಶಾಲೆಗಳಲ್ಲಿ ದೃಢೀಕರಿಸಬೇಕು. ಬಸ್ ಪಾಸ್ ಪಡೆಯಲು ಪಾಸ್ ಕೌಂಟರ್‌ಗೆ ಬರುವ ಅಗತ್ಯವಿಲ್ಲ. ಆಯಾಯ ಶಾಲೆಗಳಲ್ಲೇ ಪಾಸ್ ವಿತರಿಸುವುದಾಗಿ ನಿಗಮ ತಿಳಿಸಿದೆ.
ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡುವುದಾಗಿ ಹಿಂದಿನ ಸರ್ಕಾರ ಬಜೆಟ್ ಘೋಷಿಸಿತ್ತಾದರೂ ಅನುಷ್ಠಾನಕ್ಕೆ ತಂದಿಲ್ಲ. ಇದೀಗ ಮುಂದಿನ ಬಜೆಟ್‌ನಲ್ಲಿ ಅನುಷ್ಠಾನಕ್ಕೆ ತರುವ ಸಾಧ್ಯತೆಯಿದೆ. ಈಗಾಗಲೇ ಶಾಲೆಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರಯಾಣಕ್ಕೆ ಅನುಕೂಲವಾಗುವಂತೆ ಬಸ್ ಪಾಸ್ ವಿತರಿಸಲಾಗುತ್ತಿದೆ. ಪರಿಶಿಷ್ಟಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುವುದು. ಉಳಿದ ವರ್ಗಗಳ ವಿದ್ಯಾರ್ಥಿಗಳು ನಿಗದಿತ ಮೊತ್ತ ಪಾವತಿಸಿ ರಿಯಾಯಿತಿ ದರದ ಬಸ್ ಪಾಸ್ ಪಡೆಯಬೇಕು ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪಿಯುಸಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಪಾಸ್: ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 3-4 ದಿನಗಳಲ್ಲಿ ಬಸ್ ಪಾಸ್ ವಿತರಿಸಲು ಸಿದ್ಧತೆ ನಡೆಸಲಾಗಿದೆ. ಈ ಬಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಯು ಒಂದು ತಿಂಗಳು ಮುಂಚಿತವಾಗಿ ತರಗತಿ ಆರಂಭಿಸಿತು. ಈ ಹಿನ್ನೆಲೆಯಲ್ಲಿ ಹೊಸ ಪಾಸ್ ನೀಡುವವರೆಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿಯಲ್ಲಿ ಪಡೆದಿದ್ದ ಬಸ್ ಪಾಸ್ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾದ ದಾಖಲೆಗಳನ್ನು ತೋರಿಸಿ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.