ಗಂಗಾಜಲ ಬೇಡ; ಮಿನರಲ್ ವಾಟರ್ ಬಳಸಿ: ಮಹಾಕಾಳೇಶ್ವರದಲ್ಲಿ ಜಲಾಭಿಷೇಕಕ್ಕೆ ಸುಪ್ರೀಂ ಕಡಿವಾಣ

By Suvarna Web DeskFirst Published Oct 27, 2017, 5:34 PM IST
Highlights

* ಮಧ್ಯಪ್ರದೇಶದ ಭೋಪಾಲ್ ಸಮೀಪದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನ

* ವಿಶ್ವದ 12 ಜ್ಯೋತಿರ್ಲಿಂಗಗಳ ಪೈಕಿ ಮಹಾಕಾಳೇಶ್ವರದ ಶಿವಲಿಂಗವೂ ಒಂದು

* ಶಿವಲಿಂಗ ದಿನೇದಿನೇ ಕಿರಿದಾಗುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮಹತ್ವದ ಸೂಚನೆ

* ಶಿವಲಿಂಗದ ಜಲಾಭಿಷೇಕದಲ್ಲಿ ಗಂಗಾನದಿ ನೀರಿನ ಬದಲು ಮಿನರಲ್ ವಾಟರ್ ಬಳಸಲು ಸಲಹೆ

* ಕ್ಷೀರಾಭಿಷೇಕಕ್ಕೆ ಒಂದೂಕಾಲು ಲೀಟರ್'ಗಿಂತ ಹೆಚ್ಚು ಹಾಲು ಬಳಸಬಾರದು

ನವದೆಹಲಿ(ಅ. 27): ಉಜ್ಜಯಿನಿ ನಗರದ ಮಹಾಕಾಳೇಶ್ವರದ ಶಿವಲಿಂಗದ ಜಲಾಭಿಷೇಕಕ್ಕೆ ಸುಪ್ರೀಂಕೋರ್ಟ್ ಕಡಿವಾಣ ಹಾಕಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದಾದ ಉಜ್ಜಯಿನಿ ನಗರದ ಮಹಾಕಾಳೇಶ್ವರದ ಶಿವಲಿಂಗವು ದಿನೇ ದಿನೇ ಕಿರಿದಾಗುತ್ತಿರುವ ಆತಂಕಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಹೊಸ ಪೂಜಾ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ದೇಗುಲದ ಆಡಳಿತಗಾರರಿಗೆ ಸೂಚಿಸಿದೆ.

ಮಹಾಕಾಳೇಶ್ವರದ ಶಿವಲಿಂಗಕ್ಕೆ ಮಾಡಲಾಗುವ ಜಲಾಭಿಷೇಕದಲ್ಲಿ ಗಂಗಾಜಲ ಬದಲು ಆರ್'ಓ(ಮಿನರಲ್) ವಾಟರ್ ಬಳಸಿ ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಅಲ್ಲದೇ, ಹಾಲಿನ ಅಭಿಷೇಕದಲ್ಲಿ 1.25 ಲೀಟರ್'ಗಿಂತ ಹೆಚ್ಚು ಪ್ರಮಾಣದ ಹಾಲನ್ನು ಬಳಸುವಂತಿಲ್ಲ ಎಂದೂ ಕೋರ್ಟ್ ಆದೇಶಿಸಿದೆ.

ಶಿವಲಿಂಗಕ್ಕೇನು ಆಯಿತು..?
ಮಧ್ಯಪ್ರದೇಶ ರಾಜ್ಯದ ಉಜ್ಜಯಿನಿ ಪಟ್ಟಣದ ಮಹಾಕಾಳೇಶ್ವರದ ಶಿವಲಿಂಗ ದಿನೇದಿನೇ ಕುಸಿಯುತ್ತಿರುವ ಬಗ್ಗೆ ಹಲವು ಬಾರಿ ವಿವಿಧ ಸ್ತರಗಳಲ್ಲಿ ಆತಂಕಗಳು ವ್ಯಕ್ತವಾಗುತ್ತಾ ಬಂದಿವೆ. ಧಾರ್ಮಿಕ ವಿದ್ವಾಂಸರನ್ನೊಳಗೊಂಡ ಉಜ್ಜಯಿನಿ ವಿದ್ವತ್ ಪರಿಷತ್ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿತು. ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಹಾಲು, ಮೊಸರು, ಜೇನುತುಪ್ಪ, ಸಕ್ಕರೆ ಮತ್ತು ತುಪ್ಪವನ್ನೊಳಗೊಂಡ ಪಂಚಾಮೃತ ಅಭಿಷೇಕವನ್ನು ಮಾಡುವುದರಿಂದ ಇಷ್ಟೆಲ್ಲಾ ತೊಂದರೆ ಆಗುತ್ತಿದೆ. ಪಂಚಾಮೃತ ಅಭಿಷೇಕವನ್ನು ನಿಲ್ಲಿಸಬೇಕು ಎಂಬುದು ಅದರ ವಾದ.

ಜ್ಯೋತಿರ್ಲಿಂಗವು ಕಿರಿದಾಗುತ್ತಿರುವುದು ಶುಭಕರವಲ್ಲ. ಶೀಘ್ರದಲ್ಲೇ ಪ್ರಳದಂತಹ ದೊಡ್ಡ ಅನಾಹುತ ಸಂಭವಿಸಬಹುದು. ರಾಕ್ಷಸನೊಬ್ಬ ಶಿವಲಿಂಗ ಮುಟ್ಟಿದ್ದು, ಕಲಿಯುಗದ ಅಂತ್ಯ ಸಮೀಪಿಸುತ್ತಿರುವುದರ ಸೂಚನೆ ಇದಾಗಿರಬಹುದು ಎಂಬಂತಹ ವಾದಗಳೂ ಹಲವರಿಂದ ಬಂದವು..

ಈ ವಿಚಾರವು ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಭಾರತೀಯ ಭೂಸರ್ವೇಕ್ಷಣಾ ಇಲಾಖೆ, ಸುಪ್ರೀಂಕೋರ್ಟ್ ಸೂಚನೆಯಂತೆ ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆಯ ಅಧಿಕಾರಿಗಳನ್ನೊಳಗೊಂಡ ತಜ್ಞರ ಸಮಿತಿಯೊಂದನ್ನು ರಚಿಸಲಾಯಿತು. ವಿಸ್ತೃತ ತನಿಖೆ ನಡೆಸಿದ ಸಮಿತಿಯು ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.

ತಜ್ಞರ ಸಮಿತಿ ಏನನ್ನುತ್ತೆ?
* ಪಂಚಾಮೃತ ಅಭಿಷೇಕದಿಂದ ಶಿವಲಿಂಗಕ್ಕೆ ಹಾನಿ ಆಗುತ್ತಿಲ್ಲ; ಆದರೆ, ಭಾಂಗ್ ಶೃಂಗಾರ್(ವಿಶೇಷ ನೈವೇದ್ಯ) ಮತ್ತು ಅಭಿಷೇಕದ ಪ್ರಮಾಣ ಕಡಿಮೆ ಮಾಡಿದರೆ ಒಳ್ಳೆಯದು.
* ಶಿವಲಿಂಗಕ್ಕೆ ಗಂಗಾಜಲ ಅಭಿಷೇಕದಿಂದ ಧಕ್ಕೆಯಾಗುತ್ತಿದೆ. ಗಂಗಾಜಲದ ಪ್ರಮಾಣ ಕಡಿಮೆ ಮಾಡಬೇಕು.
* ದೇಗುಲದ ಗರ್ಭಗುಡಿಯ ಒಳಗೆ ಹೆಚ್ಚು ಭಕ್ತರಿಗೆ ಹೋಗಲು ಅವಕಾಶ ಕೊಡಬಾರದು
* ಶಿವಲಿಂಗಕ್ಕೆ ಭಕ್ತರು ನೀಡುವ ನೈವೇದ್ಯಕ್ಕೆ ಕಡಿವಾಣ ಹಾಕಬೇಕು. ಅರ್ಚಕರು ಮಾತ್ರ ನೈವೇದ್ಯ ಸಮರ್ಪಣೆ ಮಾಡಬೇಕು.

click me!