
ಚೆನ್ನೈ(ಮಾ. 23): ಎಐಎಡಿಎಂಕೆ ಪಕ್ಷದ ಎರಡು ಎಲೆಗಳ ಚುನಾವಣಾ ಚಿಹ್ನೆ ಪಡೆಯಲು ಶಶಿಕಲಾ ಮತ್ತು ಪನ್ನೀರ್'ಸೆಲ್ವಂ ಬಣಗಳು ವಿಫಲವಾಗಿವೆ. ಚುನಾವಣಾ ಆಯೋಗವು ಎರಡೂ ಬಣಗಳಿಗೆ ಬೇರೆ ಬೇರೆ ಚಿಹ್ನೆಗಳನ್ನು ನೀಡಿದೆ. ಪನ್ನೀರ್ ಸೆಲ್ವಂ ಬಣಕ್ಕೆ ಲೈಟ್'ಕಂಬದ ಗುರುತು ಸಿಕ್ಕರೆ, ಶಶಿಕಲಾ ಪಾಳಯಕ್ಕೆ ಟೊಪ್ಪಿ ಸಿಕ್ಕಿದೆ. ಕುತೂಹಲವೆಂದರೆ ಪಕ್ಷದ ಹೆಸರಿನಲ್ಲಿ 'ಅಮ್ಮ' ಹೆಸರು ಉಳಿಸಿಕೊಳ್ಳಲು ಎರಡೂ ಬಣಗಳಿಗೆ ಅನುಮತಿ ನೀಡಲಾಗಿದೆ.
ಶಶಿಕಲಾ ಬಣದ ಪಕ್ಷದ ಹೆಸರು "ಎಐಎಡಿಎಂಕೆ ಅಮ್ಮಾ" ಎಂದಿದೆ. ಪನ್ನೀರ್'ಸೆಲ್ವಂ ಪಕ್ಷದ ಹೆಸರು "ಎಐಎಡಿಎಂಕೆ ಪುರಚ್ಚಿ ತಲೈವಿ ಅಮ್ಮಾ" ಎಂದಿದೆ.
ಇದಕ್ಕೂ ಮುನ್ನ, ಶಶಿಕಲಾ ಬಣದ ಎಐಎಡಿಎಂಕೆ ಪಕ್ಷಕ್ಕೆ ಆಟೋರಿಕ್ಷಾದ ಚಿಹ್ನೆ ನೀಡಲಾಗಿತ್ತು. ಆದರೆ, ಶಶಿಕಲಾ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಅವರಿಗೆ ಕ್ರಿಕೆಟ್ ಬ್ಯಾಟು, ಟೊಪ್ಪಿ ಮತ್ತು ಆಟೋರಿಕ್ಷಾ ಈ ಮೂರರಲ್ಲಿ ಒಂದನ್ನು ಆಯ್ದುಕೊಳ್ಳುವ ಅವಕಾಶ ನೀಡಲಾಯಿತು. ಕೊನೆಗೆ ಶಶಿಕಲಾ ಅಂಡ್ ಟೀಮು ಟೊಪ್ಪಿ ಚಿಹ್ನೆಯನ್ನೇ ಆಯ್ಕೆ ಮಾಡಿಕೊಂಡರೆನ್ನಲಾಗಿದೆ.
ಇದೇ ವೇಳೆ, ಎಐಎಡಿಎಂಕೆಯ ಮೂಲ ಚಿಹ್ನೆ "ಎರಡು ಎಲೆ" ಗುರುತನ್ನು ತಾವು ಬಿಡುವುದಿಲ್ಲ ಎಂದು ಎರಡೂ ಬಣಗಳು ಪಣ ತೊಟ್ಟಿವೆ.
ಇನ್ನು, ಜಯಲಲಿತಾ ನಿಧನದ ನಂತರ ತೆರವಾಗಿರುವ ಆರ್'ಕೆ ನಗರ್ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 12ರಂದು ಉಪಚುನಾವಣೆ ನಡೆಯುತ್ತಿದೆ. ಶಶಿಕಲಾ ಬಣದಿಂದ ಅವರ ನಿಕಟ ಸಂಬಂಧಿ ಟಿಟಿವಿ ದಿನಕರನ್ ಕಣಕ್ಕಿಳಿಯಲಿದ್ದಾರೆ. ಪನ್ನೀರ್'ಸೆಲ್ವಂ ಪಡೆಯು ಇ.ಮಧುಸೂದನನ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.