
ಬುಲ್ ಬುಲ್ ಮಾತಾಡಕಿಲ್ವ. ಹೋಗು ಹೇಗಿದ್ರೂ ಸಾಯಂಕಾಲ ಇತ್ತಕಡೆ ಬರ್ತೀಯಲ್ವಾ, ಈ ಜಲೀಲ ಬಲೆ ಬೀಸಿದ ಅಂದ್ರೆ ಸಿಕ್ಕದಿರಾ ಹಕ್ಕಿ ಇಲ್ಲಾ. ಮುಖಕ್ಕೆ ಬಣ್ಣ ಹಚ್ಚಿಕೊಂಡು ಚಿತ್ರರಂಗ ಪ್ರವೇಶಿಸಿದ ಅಂಬರೀಷ್ ಮೊದಲ ಬಾರಿಗೆ ಆಡಿದ ಮಾತುಗಳಿವು.
ತರಾಸು ಅವರ ಮೂರು ಕಾದಂಬರಿಗಳ ಆಧರಿಸಿ ಪುಟ್ಟಣ್ಣ ಕಣಗಾಲ್ 1972 ರಲ್ಲಿ ನಿರ್ಮಿಸಿದ ನಾಗರಹಾವು ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಅಂಬರೀಷ್ ಅವರನ್ನು ಆಯ್ಕೆ ಮಾಡಲಾಗಿತ್ತು. ದೊಡ್ಡ ಪೇಟೆ ಗರಡಿ ಪ್ರದೇಶದಿಂದ ಚಿತ್ರದುರ್ಗದ ವಿಜ್ಞಾನ ಕಾಲೇಜಿಗೆ ರಂಗಯ್ಯನ ಬಾಗಿಲು ಮೂಲಕ ಅಲುವೇಲು ಪಾತ್ರದ ಆರತಿ ನಡೆದುಕೊಂಡು ಹೋಗಬೇಕಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇದಕ್ಕಾಗಿ ರಂಗಯ್ಯನ ಬಾಗಿಲು ಬಳಿ ಮೊದಲ ದೃಶ್ಯದ ಚಿತ್ರೀಕರಣಕ್ಕೆ ಸಜ್ಜಾಗಿದ್ದರು.
ಇದನ್ನೂ ಓದಿ: ’ಅಂಬ್ರೀಶಣ್ಣ ಬೈದ್ರು’ ಎಂದು ಖುಷಿ ಪಡುತ್ತಿದ್ದ ಅಭಿಮಾನಿಗಳು!
ಕೆಂಪು ಚೆಕ್ಸ್ ಅಂಗಿ ಹಾಗೂ ಕಪ್ಪು ಬಣ್ಣದ ಮೂಲಂಗಿ ಪ್ಯಾಂಟ್ ತೊಟ್ಟು ಬಾಯಲ್ಲಿ ಛಾರ್ ಮಿನಾರ್ ಸಿಗರೇಟು ಇಟ್ಟುಕೊಂಡು ಸೈಕಲ್ ದಬ್ಬಿಕೊಂಡು ಬರುವ ಅಂಬರೀಶ್, ಆರತಿ(ಅಲುವೇಲು)ಯನ್ನು ಛೇಡಿಸುವ ಮೊದಲ ದೃಶ್ಯ ಅದಾಗಿತ್ತು. ಸೈಕಲ್ ಚಕ್ರದೊಳಗೆ ಆರತಿ ಅವರ ನಡಿಗೆ ದೃಶ್ಯವನ್ನು ಕಣಗಾಲ್ ತೂರಿಸಿದ್ದರು. ಅದೊಂದು ರೀತಿಯ ಸಾಂಕೇತಿಕ ದೃಶ್ಯವಾಗಿತ್ತು. ನಂತರ ಬುಲ್ ಬುಲ್ ಮಾತಾಡಕಿಲ್ವ ಎಂದು ಅಂಬರೀಷ್ ಅಲುವೇಲುನ ಛೇಡಿಸಿ ವಾಪಾಸ್ಸಾಗುತ್ತಾನೆ. ಹೋಗು ಹೇಗೂ ಹೆಂಗಿದ್ರೂ ಸಾಯಂಕಾಲ ಇತ್ತ ಕಡೆ ಬರ್ತೀಯಲ್ಲ. ಈ ಜಲೀಲ ಬಲೆ ಬೀಸಿದ ಆಂದ್ರೆ ಸಿಕ್ಕದಿರಾ ಹಕ್ಕಿ ಇಲ್ಲ ಎನ್ನುತ್ತಾನೆ. ಈ ದೃಶ್ಯ ಶೂಟ್ ಮಾಡಲು ಕಣಗಾಲ್ ದಿನವಿಡೀ ಶ್ರಮಿಸಿದ್ದರು. ಹೀರೋ ರಾಮಚಾರಿ ಪಾತ್ರದಷ್ಟೇ ಜಲೀಲಾ ಕೂಡಾ ವಿಜೃಂಭಿಸಿದ್ದ.
ಇದನ್ನೂ ಓದಿ: ಅನಾರೋಗ್ಯದೊಂದಿಗೆ 2 ದಶಕಗಳ ಹೋರಾಟ ನಡೆಸಿದ್ದ ’ರೆಬೆಲ್ ಸ್ಟಾರ್’!
ಅಂಬರೀಶ್ ದುರ್ಗದ ರಾಜಬೀದಿಯಲ್ಲಿ ಖಳನಾಯಕನ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಚಿತ್ರದುರ್ಗಕ್ಕೆ ಬಂದಾಗಲೆಲ್ಲ ಅಂಬರೀಶ್ ರಂಗಯ್ಯನ ಬಾಗಿಲು ಬಳಿ ಬಂದು ತಮ್ಮ ಗತಕಾಲವ ನೆನಪು ಮಾಡಿಕೊಳ್ಳುತ್ತಿದ್ದರು. ಇಲ್ಲಿಂದಲೇ ನಾನು ಚಿತ್ರರಂಗ ಪ್ರವೇಶಿಸಿದ್ದಾಗಿ ಹೇಳುತ್ತಿದ್ದರು. ಐದು ವರ್ಷಗಳ ಹಿಂದೆ ಅಂಬರೀಶ್ ಚಿತ್ರದುರ್ಗಕ್ಕೆ ಬಂದಾಗ ಜೋಗಿಮಟ್ಟಿ ಗೆಸ್ಟ್ ಹೌಸನಲ್ಲಿ ಉಳಿದುಕೊಂಡಿದ್ದರು. ಆವಾಗ ಸಂಗಾತಿಗೊಳ ಸಂಗಡ ಹಳೇ ಡೈಲಾಗ್ ನೆನಪಿಸಿಕೊಂಡಿದ್ದರು. ಬುಲ್ ಬುಲ್ ಮಾತಾಡಕಿಲ್ವ ಅಂತ ನುಡಿದಿದ್ದರು. ಇದಾದ ತರುವಾಯ ಇದೇ ಹೆಸರಿಲ್ಲಿ ಅವರ ಚಿತ್ರ ಬಿಡುಗಡೆಯಾಗಿತ್ತು. ಬುಲ್ ಬುಲ್ ಮಾತಾಡಕಿಲ್ವ ಎಂದ ಜಲೀಲ ದನಿ ಈಗ ಸ್ತಬ್ಧವಾಗಿದೆ. ದುರ್ಗದ ರಾಜಬೀದಿಯಲ್ಲಿ ನಡೆದಾಡಿದ ಅಂಬರೀಶ್ ಈಗ ನೆನಪಾಗಿ ಉಳಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.