ಸಾವಿನ ಬಗ್ಗೆ ಮಾತಾಡಿದ್ದ ಅಂಬಿಗೆ ನಾನವತ್ತು ಬೈದಿದ್ದೆ : ಆಪ್ತ ಬಿಚ್ಚಿಟ್ಟ ನೆನಪು

By Web Desk  |  First Published Nov 25, 2018, 1:45 PM IST

ಕೆಲ ದಿನಗಳ ಹಿಂದಷ್ಟೇ ಸಾವಿನ ಬಗ್ಗೆ ಅಂಬಿ ಹೇಳಿದ್ದರು. ನಾನ್ಯಾವಾಗ ಹೀಗೆ ಹೋಗುತ್ತೇನೋ ಎಂದಿದ್ದರು. ಆಗ ನಾನವರಿಗೆ ಬೈದಿದ್ದೆ ಎಂದು ಅವರ ಅತ್ಯಾಪ್ತರಾಗಿದ್ದ ಉದಯ್ ಗರುಡಾಚಾರ್ ಅಂಬಿ ನೆನೆದು ಭಾವುಕರಾಗಿದ್ದಾರೆ. 


ಬೆಂಗಳೂರು : ಕರುನಾಡು ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಕಳೆದುಕೊಂಡಿದೆ. ಹಿರಿಯಣ್ಣನನ್ನು ಕಳೆದುಕೊಂಡು ಸ್ಯಾಂಡಲ್ ವುಡ್ ಅನಾಥವಾಗಿದೆ.  ಅಂಬರೀಶ್ ಅವರ ಅತ್ಯಾಪ್ತರಾಗಿದ್ದ ಉದಯ್ ಗರುಡಾಚಾರ್ ಅಂಬರೀಶ್ ಅಗಲಿಕೆಯ ನೋವನ್ನು  ಸುವರ್ಣ ನ್ಯೂಸ್.ಕಾಂ ಜೊತೆ ಹಂಚಿಕೊಂಡಿದ್ದಾರೆ.  

ಅಣ್ಣಾ.. ನನ್ನ ಅಣ್ಣನನ್ನು ಇನ್ನೂ ಕೇವಲ ಭಾವಚಿತ್ರದಲ್ಲಿ ನೋಡಬೇಕು ಎಂದು ಭಾವುಕರಾದ ಅವರು, ವಾರದಲ್ಲಿ ಮೂರು ದಿನ ನಾವು ಭೇಟಿ ಆಗುತ್ತಿದ್ದೆವು,  ನನ್ನನ್ನು ಏ.... ಗರುಡಾ ಎಂದೇ ಸಂಭೋದಿಸುತ್ತಿದ್ದರು ಎಂದು ಭಾವುಕ ನುಡಿಗಳನ್ನಾಡಿದ್ದಾರೆ.

Latest Videos

undefined

ನೀನಲ್ಲ ಕಣೊ ನನ್ನ ಫ್ರೆಂಡು. ನಿಮ್ಮ ಅಪ್ಪಾನೂ ನನ್ನ ಫ್ರೆಂಡ್ ಆಗಿದ್ದವರು ಎಂದು ಅವರ ಶೈಲಿಯಲ್ಲಿ ಹೇಳುತ್ತಿದ್ದರು.  ಕೇಂದ್ರ ಮಂತ್ರಿ ಅನಂತ್ ಕುಮಾರ್ ನಿಧನದ ದಿನ ಅಂತಿಮ ದರ್ಶನ ಮಾಡಿ ಹೊರ ಬಂದ ಅಂಬರೀಶ್, ಲೋ ಗರುಡಾ ಇಷ್ಟು ಬೇಗ ಅನಂತ್ ಕುಮಾರ್ ಹೋದ್ರಲ್ಲೊ, ನಾ  ಯಾವಾಗ ಈ ರೀತಿ ಹೋಗ್ತಿನೊ ಏನೊ ಎಂದಿದ್ದರು. ಈ ಮಾತು ಹೇಳಿದ್ದಾಗ ಅಂಬಿಗೆ ಬೈದಿದ್ದೆ ಎಂದು  ಉದಯ್ ಗುರಡಾಚಾರ್ ಹೇಳಿದ್ದಾರೆ. 

ಕೊಡುಗೈ ದಾನಿ ಅಂಬಿರೀಶ್ : ಇನ್ನು ಅಂಬರೀಶ್ ಅವರು ತನಗೆ ಬೇಕಾಗಿರುವುದನ್ನು ಬೇರೆಯವರ ಬಳಿ ಕೇಳಲು ಮುಜುಗರ ಪಡುತ್ತಿದ್ದರು. ಆದರೆ  ಕೊಡುಗೈ ದಾನಿಯಾಗಿದ್ದರು. ಒಮ್ಮೆ ಅವರ ಮನೆ ರಿನೋವೇಶನ್ ಕೆಲಸ ನಡೆಯುತ್ತಿತ್ತು. ಈ ವೇಳೆ ಏ ಗರುಡಾ ನಿಂದು ಎರಡು ಮನೆ ಇದೆ ಸ್ವಲ್ಪ ದಿನದ ಮಟ್ಟಿಗೆ ನನಗೆ ನಿಮ್ಮ ಜೆಪಿ ನಗರ ಮನೆ ಬಾಡಿಗೆಗೆ ಕೊಡ್ತಿಯಾ ಅಂತ ಕೇಳಿದ್ದರು. ಅಯ್ಯೋ ಅಣ್ಣ ನಿಮ್ಮ ಹತ್ರ ಬಾಡಿಗೆ  ಪಡೆಯೋದಾ, ನಿಮ್ಮಿಂದ ನಾನು ಸಾಕಷ್ಟು ಸಹಾಯ ಪಡೆದಿದ್ದೇನೆ ಎಂದು ಹೇಳಿದ್ದೆ ಎಂದಿದ್ದಾರೆ. 

ನನ್ನ ಜೆಪಿ ನಗರ ಮನೆಯಲ್ಲಿ ನೀವು ಇರಿ ಎಂದು ಹೇಳಿದಾಗ ಅವರು ಪಟ್ಟ ಖುಷಿ ಅಷ್ಟಿಷ್ಟಲ್ಲ.  ನನ್ನ ಸ್ವಂತ ಅಣ್ಣನೇ ಆಗಿದ್ದವರು  ಅಂಬಿ ಎಂದು ನೆನಪು ಮಾಡಿಕೊಂಡಿದ್ದಾರೆ.  ಏ ಇವತ್ತು ನಾನು ಬ್ರಾಹ್ಮಣರ ಮನೆ ಮಸಾಲ ದೋಸೆ ತಿನ್ನಬೇಕು ಅಂತ ಮನೆಗೆ ಬರ್ತಾ ಇದ್ದರು. ಜೀವನವನ್ನು ರಾಜನಂತೆ ಕಳೆದ ಮನುಷ್ಯ ಅವರು.  ಸಚಿವ ಸ್ಥಾನ ಕಳೆದುಕೊಂಡಿದ್ದಾಗ ಮಾತ್ರ ಬಹಳ ಬೇಸರ ಪಟ್ಟಿದ್ದರು. 

ಅವರ ನನ್ನ ನಡುವಿನ ಆಪ್ತತೆ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಅಂಬಿ ಬಗ್ಗೆ ಉದಯ್ ಗರುಡಾಚಾರ್ ನೆನದು ಕಣ್ಣೀರಾಗಿದ್ದಾರೆ. 

click me!