
ಬೆಂಗಳೂರು(ಆ.08): ರಾಜ್ಯದಲ್ಲಿ ಮರಳು ಕೊರತೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದೇಶಿ ಮರಳು ಆಮದು ಮಾಡಿಕೊಳ್ಳಲು ಮುಂದಾಗಿದ್ದು, ಮಲೇಷ್ಯಾದಿಂದ ಪ್ರತಿ ಟನ್'ಗೆ 3500ರೂಪಾಯಿಯಂರೆ ಮರಳು ತರಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಮಲೇಷ್ಯಾದಿಂದ ‘ಭಾರೀ ಪ್ರಮಾಣದ ಮರಳು ತಂದು ಸಾರ್ವಜನಿಕ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಇದರ ಹೊಣೆಯನ್ನು ಎಂಎಸ್'ಐಎಲ್ ಸಂಸ್ಥೆಗೆ ವಹಿಸಲಾಗಿದೆಂದು ತಿಳಿಸಿದರು.
ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಒಂದು ಲೋಡ್ ಲಾರಿ ಮರಳಿಗೆ 1 ಲಕ್ಷದವರೆದೂ ದರವಿದೆ. ಈ ಮೂಲಕ ಮಾರಾಟಗಾರರು ಸಾರ್ವಜನಿಕರನ್ನು ಶೋಷಣೆ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಮಲೇಷ್ಯಾದಿಂದ ಪ್ರತಿ ಟನ್'ಗೆ 3500ರೂಪಾಯಿಯಂತೆ ಮರಳು ಆಮದು ಮಾಡಿಕೊಳ್ಳಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಆಮದು ಮಾಡಿಕೊಳ್ಳುವ ಮರಳನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಅಥವಾ ಬಿಲ್ಡರ್‌ಗಳಿಗೆ ಸಿಗದಂತೆ ನೋಡಿಕೊಳ್ಳಲಾಗುವುದು. ಬದಲಾಗಿ ಮನೆ ನಿರ್ಮಾಣ ಮಾಡುವ ಸಾರ್ವಜನಿಕರಿಗೆ ಪಡಿತರ ವಿತರಣಾ ವ್ಯವಸ್ಥೆ ರೀತಿಯಲ್ಲಿ ಮರಳು ಹಂಚಿಕೆ ಮಾಡಲಾಗುತ್ತದೆ. ಇದಕ್ಕೂ ನಿಯಮಗಳು ಇರುತ್ತವೆ. ಸಾರ್ವಜನಿಕರು ಕಟ್ಟಡಕ್ಕೆ ಸ್ಥಳೀಯ ಸಂಸ್ಥೆ ಗಳಿಂದ ಅನುಮತಿ ಪಡೆದಿರಬೇಕು. ಕಟ್ಟಡ ನಕ್ಷೆ, ಅಂದಾಜು ವೆಚ್ಚ, ಅಗತ್ಯವಿರುವ ಮರಳೆಷ್ಟು ಎನ್ನುವ ದಾಖಲೆಗಳನ್ನು ಸಲ್ಲಿಸಿ ಮರಳು ಪಡೆಯಬಹುದಾಗಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು
ಆಮದು ಮಾಡಿಕೊಳ್ಳುವ ಮರಳನ್ನು ಹಂಚಿಕೆ ಮಾಡುವ ವಿಧಾನ, ಜಿಲ್ಲಾ ಮಟ್ಟದಲ್ಲಿ ಹಂಚಿಕೆ ಹೇಗೆ ಮಾಡುವುದು ಮತ್ತು ದರ ನಿಗದಿ ಬಗ್ಗೆ ಇನ್ನೂ ವಿಸ್ತೃತ ಚರ್ಚೆಗಳು ನಡೆಯಬೇಕಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವನ್ಯಜೀವಿ ಸಂರಕ್ಷಣಾ ಪ್ರದೇಶದ ಅಕ್ಕಪಕ್ಕದಲ್ಲಿ 2.20 ಎಕರೆಗಿಂತ ಕಡಿಮೆ ವಿಸ್ತೀರ್ಣದ ಮರಳು ತೆಗೆಯಲು ಕ್ವಾರಿಗಳಿಗೆ ಅನುಮತಿ ನೀಡಲು ಜಿಲ್ಲಾ ಮಟದಲ್ಲಿ ಪರಿಸರ ಸಮಿತಿ ರಚಿಸಲಾಗಿದೆ. ಆದರೆ ರಾಜ್ಯಕ್ಕೆ ಸಂಬಂಧಿಸಿದಂತೆ ಈತನಕ ಸಮಿತಿಯೇ ಇಲ್ಲ. ಹೀಗಾಗಿ ರಾಜ್ಯ ಮಟ್ಟದಲ್ಲೂ ಸಮಿತಿ ರಚಿಸಬೇಕಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಯಚಂದ್ರ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.