ಹುಟ್ಟೋ ಮಗು ಆಜಾನ್ ಕೇಳಿದರೇನು? ಗೀತೆ ಕೇಳಿದರೇನು? ಭಾರತೀಯನಾಗಲಿ ಮೊದಲು

By nikhil vkFirst Published May 15, 2019, 5:45 PM IST
Highlights

ರಾಜಸ್ಥಾನದ ಆಸ್ಪತ್ರೆಗಳಲ್ಲಿ ಹೆರಿಗೆ ನೋವು ಶಮನಕ್ಕೆ ಗಾಯತ್ರಿ ಮಂತ್ರ| ತೀವ್ರ ವಿವಾದಕ್ಕೆ ಕಾರಣವಾದ ಆರೋಗ್ಯಾಧಿಕಾರಿಗಳ ನಿರ್ಧಾರ| ಗಾಯತ್ರಿ ಮಂತ್ರ ಪಠಣಕ್ಕೆ ಮುಸ್ಲಿಂ ಹೋರಾಟಗಾರರ ಆಕ್ರೋಶ| ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾಗೆ ಮುಸ್ಲಿಮರ ದೂರು| ಸಿರೋಹಿ ಜಿಲ್ಲಾಸ್ಪತ್ರೆ ಹೆರಿಗೆ ಕೋಣೆಯಲ್ಲಿ ಗಾಯತ್ರಿ ಮಂತ್ರ ಪ್ರಸಾರ| ನಿನ್ನ ಧರ್ಮ ನನ್ನದು, ನನ್ನ ಧರ್ಮ ನಿನ್ನದು ಎಂಬ ಒಳಗೊಳ್ಳುವಿಕೆ ಮರೆಯಾಗುತ್ತಿದೆ|

ಬೆಂಗಳೂರು(ಮೇ.15): ಹೊಸದೊಂದು ಜೀವವನ್ನು ಧರೆಗೆ ಎರವಲಾಗಿ ಕೊಡುವ ತಾಯಿ, ತನ್ನ ಹೆರಿಗೆಯ ನೋವನ್ನು ಆ ಮುಗ್ಧ ಕಂದಮ್ಮನ ಮೊಗ ನೋಡಿದಾಕ್ಷಣ ಮರೆಯುತ್ತಾಳೆ. ಹೆರಿಗೆ ಸಮಯದಲ್ಲಿ ಆಕೆಯ ಸಹಾಯಕ್ಕೆ ಬಾರಲಾಗದಿದ್ದರೂ, ಆಕೆಗೆ ಆತ್ಮಸ್ಥೈರ್ಯ ತುಂಬುವ ಸಣ್ಣದೊಂದು ಕೆಲಸವನ್ನಾದರೂ ಮಾಡಲು ಸಾಧ್ಯವಾದರೆ ನಮ್ಮ ಜನ್ಮ ಸಾರ್ಥಕ.

ಆದರೆ ನಮ್ಮ ಸ್ವಯಂಘೋಷಿತ ನಾಗರಿಕ ಸಮಾಜ ಹೆರಿಗೆಯಲ್ಲೂ, ತಾಯ್ತನದಲ್ಲೂ ಧರ್ಮವನ್ನು ಕಂಡುಕೊಂಡು ಬಿಡುತ್ತದೆ. ಧರೆಗೆ ಬಂದೊಡೆ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಬೇಕಾದ ಮಗುವಿಗೆ, ಧರ್ಮ ಲೇಪನ ಮಾಡುವ ಕಾತರದ ಮನಸ್ಸುಗಳಿಗೆ ಏನು ಹೇಳಬೇಕೋ ಕಾಣೆ.

ರಾಜಸ್ಥಾನದ ಸರ್ಕಾರಿ ಆಸ್ಪತ್ರೆಗಳ ಹೆರಿಗೆ ಕೋಣೆಯಲ್ಲಿ ಗರ್ಭವತಿಯರ ಮಾನಸಿಕ ಒತ್ತಡ ಕಡಿಮೆ ಮಾಡಲು ಗಾಯತ್ರಿ ಮಂತ್ರ ಕೇಳಿಸುವ ಪರಿಪಾಠಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ. ಅದೇ ಆಸ್ಪತ್ರೆಗೆ ದಾಖಲಾಗುವ ಮುಸ್ಲಿಂ ಗರ್ಭವತಿಯರು ಗಾಯತ್ರಿ ಮಂತ್ರ ಕೇಳುವುದರಿಂದ ಹುಟ್ಟಲಿರುವ ಮಗು ಕೂಡ ಭೂಮಿಗೆ ಬರುವುದಕ್ಕೂ ಮೊದಲೇ ಧರ್ಮ ನಿಂದನೆ ಮಾಡಿದಂತಾಗುತ್ತದೆ ಎಂಬ ಭಯವಂತೆ.

ಹೌದು, ಸರ್ಕಾರಿ ವ್ಯವಸ್ಥೆಯಲ್ಲಿ ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಕಾಣುವುದು ಪ್ರಜಾಪ್ರಭುತ್ವ ಸರ್ಕಾರವೊಂದರ ಕರ್ತವ್ಯ. ಅಲ್ಲಿ ಧರ್ಮಕ್ಕೆ, ನಂಬಿಕೆ ಜಾಗವಿಲ್ಲ. ಆದರೆ ಸಮಾಜ ಬೆಸೆಯಬೇಕಾದ ಮಹತ್ತರ ಜವಾಬ್ದಾರಿ ಹೊತ್ತಿರುವ ಈ ದೇಶದ ನಾಗರಿಕ, ಕೆಲವೊಮ್ಮೆ ಸರ್ಕಾರಕ್ಕೂ ಮಿಗಿಲಾಗಿ ಯೋಚಿಸಬೇಕಾದ ಅನಿವಾರ್ಯತೆ ಇದೆ. ಸಾಮಾಜಿಕ ಜವಾಬ್ದಾರಿ ಎಂಬುದು ನಿನ್ನ ಧರ್ಮ ನಿನ್ನದು, ನನ್ನ ಧರ್ಮ ನನ್ನದು ಎಂಬ ಬೇರ್ಪಡುವಿಕೆಯಲ್ಲಿ ಇಲ್ಲ. ನಿನ್ನ ಧರ್ಮ ನನ್ನದು, ನನ್ನ ಧರ್ಮ ನಿನ್ನದು ಎಂಬ ಒಳಗೊಳ್ಳುವಿಕೆಯಲ್ಲಿದೆ.

ಅಷ್ಟಕ್ಕೂ ಜಗತ್ತಿನ ಯಾವ ಭಾಗದ ಸರ್ಕಾರ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದಿದೆ ಹೇಳಿ? ಅದಕ್ಕೂ ಮಿಗಿಲಾಗಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದೇ ಆದರೆ ಸರ್ಕಾರದ ಅವಶ್ಯಕತೆಯಾದರೂ ಏನಿದೆ ಹೇಳಿ? ಸಮಾಜದಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಸಮಾಜವೇ(ನಾವು, ನೀವು) ಮದ್ದು ನೀಡಬೇಕಾಗುತ್ತದೆ. 

ಸರ್ಕಾರಿ ಆಸ್ಪತ್ರೆಯ ಹೆರಿಗೆ ಕೋಣೆಯಲ್ಲಿ ಗಾಯತ್ರಿ ಮಂತ್ರವಷ್ಟೇ ಏಕೆ ಅಜಾನ್ ಕೂಡ ಕೇಳಿಸಲಿ. ಅಥವಾ ಮತ್ತಿನ್ಯಾವುದೋ ಧರ್ಮದ ಮತ್ತಿನ್ಯಾವುದೋ ನಂಬಿಕೆಯ ಸಾಲುಗಳನ್ನೂ ಕೇಳಿಸಲಿ. ಹುಟ್ಟುವ ಮಗು, ಜನ್ಮ ನೀಡುವ ತಾಯಿ ಇಬ್ಬರಿಗೂ ಒಳಿತಾಗುವುದಾದರೆ ಬಾಲಿವುಡ್ ಗೀತೆಗಳನ್ನೇ ಕೇಳಿಸಲಿ. ಆರೋಗ್ಯವಂತ ಸಮಾಜಕ್ಕೆ ಆರೋಗ್ಯವಂತ ಪೀಳಿಗೆಯನ್ನು ಸೃಷ್ಟಿ ಮಾಡುವುದಷ್ಟೇ ಮುಖ್ಯ.

ಇಸ್ಲಾಂ ಪ್ರಕಾರ ಹುಟ್ಟುವ ಮಗುವಿನ ಕಿವಿಗೆ ಮೊದಲು ಅಜಾನ್ ಕೇಳಿಸಬೇಕು. ಅದನ್ನು ಬಿಟ್ಟು ಇನ್ಯಾವುದೇ ವಾಕ್ಯ ಆ ಮಗುವಿನ ಕಿವಿಗೆ ಬೀಳಬಾರದು ಎಂದಾದರೆ, ಈ ದೇಶದ ಅಸಂಖ್ಯ ಹಿಂದೂ ಗರ್ಭವತಿಯರು ಬೆಳಗಿನ ಸುಂದರ ಅಜಾನ್ ಕೇಳಿ ಏಳುತ್ತಾರಲ್ಲ ಅದಕ್ಕೇನು ಸಮಜಾಯಿಷಿ ಕೊಡಲಾದೀತು?.

ಕೇವಲ ಮಂತ್ರವೊಂದರ ನಾಲ್ಕು ಸಾಲುಗಳಿಂದ ಅಥವಾ ಅಜಾನ್‌ನ ವಾಕ್ಯಗಳಿಂದ ಅಥವಾ ಇನ್ಯಾವುದೋ ಧಾರ್ಮಿಕ ಸಾಲುಗಳಿಂದ ದುರ್ಬಲಗೊಳ್ಳುವ ಯಾವುದೇ ಧರ್ಮ ಈ ಭೂಮಿಯ ಮೇಲಿಲ್ಲ.

‘ತು ಹಿಂದೂ ಬನೆಗಾ ನಾ ಮುಸಲ್ಮಾನ್ ಬನೆಗಾ..ಇನ್ಸಾನ್ ಕಿ ಔಲಾದ್ ಹೇ ಇನ್ಸಾನ್ ಬನೇಗಾ..’ ಎಂಬ ಉದಾತ್ತ ಚಿಂತನೆಗಳೊಂದಿಗೆ ಕಟ್ಟಿದ ಸಮಾಜ ನಮ್ಮದು. ಈಗಷ್ಟೇ ತಾಯಿಯ ಗರ್ಭದಿಂದ ವಸುಧೆಯ ಮಡಿಲಿಗೆ ಬಿದ್ದ ಮಗು ಗಾಯತ್ರಿ ಮಂತ್ರ ಕೇಳಿಸಿಕೊಂಡರೇನು?, ಅಜಾನ್ ಕೇಳಿಸಿಕೊಂಡರೇನು, ಗಿರಿಜೆಯ ಗಂಟೆ ಕೇಳಿಸಿಕೊಂಡರೇನು?. ಭಾರತೀಯನಾ/ಳಾಗಿ ಬದುಕಿದರೆ ಸಾಕು.

click me!