ಪ್ರೇಮಿಗಳ ದಿನಕ್ಕೆ ಗುಲಾಬಿ ಶಾಕ್..!

By Suvarna Web DeskFirst Published Feb 12, 2018, 8:58 AM IST
Highlights

ಯುವ ಹೃದಯಗಳು ಕಾತರದಿಂದ ಕಾಯುವ ಪ್ರೇಮಿಗಳ ದಿನ (ಫೆ.14) ಸಮೀಪಿಸುತ್ತಿದ್ದಂತೆ ಪ್ರೇಮದ ಪ್ರತೀಕವಾಗಿ ಗುರುತಿಸಲ್ಪಟ್ಟಿರುವ ಗುಲಾಬಿ ಹೂವುಗಳ ಬೆಲೆ ಹೆಚ್ಚಳಗೊಂಡಿದೆ.

ಬೆಂಗಳೂರು : ಯುವ ಹೃದಯಗಳು ಕಾತರದಿಂದ ಕಾಯುವ ಪ್ರೇಮಿಗಳ ದಿನ (ಫೆ.14) ಸಮೀಪಿಸುತ್ತಿದ್ದಂತೆ ಪ್ರೇಮದ ಪ್ರತೀಕವಾಗಿ ಗುರುತಿಸಲ್ಪಟ್ಟಿರುವ ಗುಲಾಬಿ ಹೂವುಗಳ ಬೆಲೆ ಹೆಚ್ಚಳಗೊಂಡಿದೆ.

ನಗರದೆಡೆಲ್ಲೆ ಗುಲಾಬಿ ಹೂವುಗಳ ಲೋಕವೇ ಧರೆಗಿಳಿದಿದೆ. ಆದರೆ, ಎಲ್ಲರ ಮನಸನ್ನು ಸೂರೆಗೊಳ್ಳುವ ಗುಲಾಬಿ ಈ ಬಾರಿ ತುಸು ದುಬಾರಿಯಾಗಿದೆ. ಪ್ರೇಮ ಹಾಗೂ ಪ್ರೇಮಿಯೊಂದಿಗೆ ಅವಿನಾಭಾವ ಸಂಬಂಧವಿರುವ ಗುಲಾಬಿ ಹೂವಿನ ಬೆಲೆ ಸದ್ಯ 15ರಿಂದ 25 ಮೀರಿದೆ. ಪ್ರೇಮಿಗಳ ದಿನಕ್ಕೆ ಒಂದು ದಿನ ಬಾಕಿ ಉಳಿದಿದ್ದು, ಹೂವಿನ ಬೆಲೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಕಳೆದ 15 ದಿನಗಳ ಹಿಂದೆ ಒಂದೆರೆಡು ರೂಪಾಯಿಗೆ ಸಿಗುತ್ತಿದ್ದ ಕೆಂಗುಲಾಬಿ ಹೂವಿನ ಬೆಲೆ ಏರಿಕೆಯಾಗಿರುವುದು ಪ್ರೇಮಿಗಳಿಗೆ ಕೊಂಚ ಬಿಸಿ ತಾಗಿಸಿದರೂ ವ್ಯಾಪಾರಕ್ಕೆ ಯಾವುದೇ ರೀತಿಯಲ್ಲೂ ಪೆಟ್ಟು ನೀಡದಿರುವುದು ವ್ಯಾಪಾರಿಗಳಿಗೂ ಖುಷಿ ನೀಡಿದೆ.

ನಗರದ ರಸೇಲ್ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರಂ, ಮಡಿವಾಳ ಮಾರುಕಟ್ಟೆಗಳು ಸೇರಿದಂತೆ ಬೀದಿ ಬದಿಯ ವ್ಯಾಪಾರಿಗಳು ಪ್ರೇಮಿಗಳ ದಿನಕ್ಕೆ ನಾಲ್ಕೈದು ದಿನಗಳಿರುವಂತೆಯೇ ಹೂವಿನ ಭರ್ಜರಿ ವ್ಯಾಪಾರಿದಲ್ಲಿ ನಿರತರಾಗಿದ್ದಾರೆ.

ಇನ್ನು ಎಂ.ಜಿ.ರಸ್ತೆ, ರಿಚ್‌ಮಂಡ್ ಸರ್ಕಲ್, ಎಲೆಕ್ಟ್ರಾನಿಕ್ ಸಿಟಿ, ವಿಜಯನಗರ, ಜಯನಗರ ಒಳಗೊಂಡಂತೆ ಜನವಸತಿ ವ್ಯಾಪಾರ ಕೇಂದ್ರಗಳ ಮಾರುಕಟ್ಟೆಗಳಲ್ಲಿ ಸುಂದರ ಗುಲಾಬಿ ಹೂವುಗಳು ನೋಡುಗರ ಕಣ್ಸೆಳೆಯುತ್ತಿವೆ. ಈ ಪ್ರದೇಶಗಳಲ್ಲಿ ಒಂದು ಗುಲಾಬಿ 25-30 ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇನ್ನಿತರೆ ಪ್ರದೇಶಗಳಲ್ಲಿ ಸದ್ಯ ಒಂದು ಗುಲಾಬಿ 15ಕ್ಕೆ ಖರೀದಿಯಾಗುತ್ತಿದೆ. ಮೂಲದಲ್ಲಿ ಒಂದು ಕಟ್ಟು (20 ಗುಲಾಬಿ) ಹೂವಿಗೆ 150 -200 ಗೆ ಖರೀದಿಸಿ ಶೇ.10ರಷ್ಟು ಹೆಚ್ಚಿನ ಬೆಲೆಯಲ್ಲಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಹೂವು ಮಾರಾಟಗಾರರು ಫೆ.14ಕ್ಕೆಂದು ತಮ್ಮ ಎಂದಿನ ಬೇಡಿಕೆಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲೇ ಗುಲಾಬಿ ಹೂವು ಖರೀದಿ ಮಾಡಿರುವುದು ವಿಶೇಷ. ಇನ್ನೊಂದೆಡೆ ಗಿಫ್ಟ್ ಸೆಂಟರ್‌ಗಳು, ಸ್ವೀಟ್ ಅಂಗಡಿಗಳಲ್ಲೂ ವ್ಯಾಪಾರ ಚುರುಕುಗೊಂಡಿದೆ.

ಇನ್ನೊಂದೆಡೆ ಐಷಾರಾಮಿ ಹೋಟೆಲೆಗಳಲ್ಲೂ ಪ್ರೇಮಿಗಳ ದಿನಕ್ಕಾಗಿ ವಿಶೇಷ ಸಿದ್ಧತೆ ಪ್ರಾರಂಭಿಸಿವೆ. ಈ ಹಿಂದೆ ಪ್ರೇಮಿಗಳ ದಿನವೆಂದರೆ ಕೇವಲ ಪ್ರೇಮ ನಿವೇದನೆ ಮಾಡುವ ಯುವಕ-ಯುವತಿಯರು, ಹೊಸ ಸಂಗಾತಿ ಹುಡುಕಾಟದಲ್ಲಿ ತೊಡಗಿರುವವರು ಮಾತ್ರ ಆಚರಿಸುತ್ತಿದ್ದರು. ಆದರೆ, ಇಂದು ಈ ಮನೋಭಾವ ಬದಲಾಗಿದ್ದು, ಇತ್ತೀಚಿನ ದಿನಗಳಲ್ಲಿ ದಂಪತಿಗಳು ಕೂಡ ಪ್ರೇಮಿಗಳ ದಿನ ಆಚರಿಸುತ್ತಿದ್ದಾರೆ. 

click me!