
ನವದೆಹಲಿ(ಎ.29): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹಾಗೂ ಪುತ್ರ ರಾಹುಲ್ ಗಾಂಧಿ ಅವರು 2008ರಲ್ಲಿ ಹರಾರಯಣದಲ್ಲಿ ಭೂ ವ್ಯವಹಾರ ನಡೆಸಿ ನಯಾಪೈಸೆ ಖರ್ಚು ಮಾಡದೇ ಬರೋಬ್ಬರಿ 50.5 ಕೋಟಿ ರು.ನಷ್ಟು ಅಕ್ರಮ ಲಾಭ ಮಾಡಿ ಕೊಂಡಿದ್ದಾರೆ ಎಂದು ಈ ಕುರಿತು ತನಿಖೆ ನಡೆಸಿದ್ದ ನ್ಯಾ| ಎಸ್.ಎನ್. ಧಿಂಗ್ರಾ ಆಯೋಗ ಹೇಳಿದೆ ಎನ್ನಲಾಗಿದೆ.
ನ್ಯಾ| ಧಿಂಗ್ರಾ ಆಯೋಗದ ವರದಿ ಕಳೆದ ವರ್ಷ ಆ.31ರಂದೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಕಳೆದ ವಾರವಷ್ಟೇ ಹರಾರಯಣ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಈ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ. ಆದರೆ ಆ ವರದಿಯನ್ನು ನೋಡಿದ ಕೆಲವರು, ವಾದ್ರಾ ಹಾಗೂ ರಾಹುಲ್ ಅವರು ಅಕ್ರಮವಾಗಿ ಲಾಭ ಮಾಡಿಕೊಂಡಿರುವ ವಿಚಾರವನ್ನು ತಿಳಿಸಿದ್ದಾರೆ ಎಂದು ವಾಣಿಜ್ಯ ದೈನಿಕವೊಂದು ವರದಿ ಮಾಡಿದೆ.
ವಾದ್ರಾ ಕಂಪನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಅಕ್ರಮ ಕೂಟ ಏರ್ಪಟ್ಟಿದೆ ಎಂದು ಆಯೋಗ ಹೇಳಿದ್ದು, ವಾದ್ರಾ ಹಾಗೂ ಅವರ ಸಂಸ್ಥೆಗಳು ಖರೀದಿಸಿದ ಆಸ್ತಿ ಕುರಿತು ವಿಚಾರಣೆ ನಡೆಸಬೇಕು ಎಂದು ಶಿಫಾರಸು ಮಾಡಿದೆ ಎನ್ನಲಾಗಿದೆ.
ಈ ಕುರಿತು ಪತ್ರಿಕೆ ವಾದ್ರಾ ಅವರ ವಕೀಲ ಸುಮನ್ ಖೇತಾನ್ ಅವರನ್ನು ಇ-ಮೇಲ್ ಮೂಲಕ ಸಂಪರ್ಕಿಸಿದೆ. ‘ವಾದ್ರಾ ಹಾಗೂ ಅವರ ಒಡೆತನದ ಸ್ಕೈಲೈಟ್ ಕಂಪನಿ ಯಾವುದೇ ತಪ್ಪು ಮಾಡಿಲ್ಲ. ಕಾನೂನನ್ನು ಉಲ್ಲಂಘಿಸಿಲ್ಲ. ಮಾರುಕಟ್ಟೆದರ ಪಾವತಿಸಿಯೇ ಭೂಮಿ ಖರೀದಿಸಲಾಗಿದೆ. ಆದಾಯ ತೆರಿಗೆ ಯನ್ನೂ ಪಾವತಿ ಮಾಡಲಾಗಿದೆ' ಎಂದು ಅವರು ಹೇಳಿದ್ದಾರೆ.
ಜಾಗ ಖರೀದಿ ಮಾಡಿದ್ದು ಅಜ್ಜಿ ಆಸ್ತಿಯಿಂದ: ಪ್ರಿಯಾಂಕಾ
ಹರ್ಯಾಣದ ಫರೀದಾಬಾದ್'ನಲ್ಲಿ ತಾವು ನಡೆಸಿದ್ದ ಭೂಮಿ ಖರೀದಿ ವ್ಯವಹಾರಕ್ಕೂ, ಪತಿ ರಾಬರ್ಟ್ ವಾದ್ರಾ ಅವರ ಹಣಕಾಸು ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಅಜ್ಜಿ ಇಂದಿರಾ ಗಾಂಧಿ ಅವರು ನೀಡಿದ್ದ ಆಸ್ತಿಯಿಂದ ಲಭಿಸಿದ ಬಾಡಿಗೆ ಹಣ ಬಳಸಿ ಭೂಮಿ ಖರೀದಿ ಮಾಡಿದ್ದಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಸ್ಪಷ್ಟಪಡಿಸಿದ್ದಾರೆ.
ಡಿಎಲ್‌ಎಫ್ ಒಪ್ಪಂದದಿಂದ ವಾದ್ರಾ ಅವರಿಗೆ ಲಭಿಸಿದ ಹಣದಲ್ಲಿ ಒಂದಷ್ಟುಭಾಗವನ್ನು ಬಳಸಿಕೊಂಡು ಹರಾರಯಣದ ಫರೀದಾಬಾದ್‌ನಲ್ಲಿ ಭೂಮಿ ಖರೀದಿಸಿದ್ದೀರಾ ಎಂದು ಮಾಧ್ಯಮ ಸಂಸ್ಥೆಯೊಂದು ಕೇಳಿದ್ದ ಪ್ರಶ್ನೆಗೆ ಸುದೀರ್ಘ ಉತ್ತರವನ್ನು ಪ್ರಿಯಾಂಕಾ ನೀಡಿದ್ದಾರೆ. 2006ರ ಏ.28ರಂದು 15 ಲಕ್ಷ ರು. ನೀಡಿ ಫರೀದಾಬಾದ್‌ನ ಅಮಿಪುರದಲ್ಲಿ 5 ಎಕರೆ ಜಮೀನು ಖರೀದಿಸಿದ್ದೆ. ಇದು ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆ ಡಿಎಲ್‌ಎಫ್ ನಡೆಸಿದ್ದ ಭೂವ್ಯವಹಾರಕ್ಕೆ ಆರು ವರ್ಷ ಮುನ್ನ ನಡೆದ ಖರೀದಿ ಪ್ರಕ್ರಿಯೆ. 2010ರ ಫೆ.17ರಂದು ಜಮೀನಿನ ಮೂಲ ಮಾಲೀಕರಿಗೆ ಅದೇ ಭೂಮಿಯನ್ನು ಅಂದಿನ ಮಾರುಕಟ್ಟೆಮೌಲ್ಯವಾದ 80 ಲಕ್ಷ ರು.ಗೆ ಮಾರಾಟ ಮಾಡಿದ್ದೇನೆ. ಈ ಹಣವನ್ನು ಚೆಕ್ ಮೂಲಕ ಪಡೆದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವರದಿ: ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.