
ಬೆಂಗಳೂರು(ಎ.29): ಬಿಜೆಪಿಯ ಅತೃಪ್ತ ನಾಯಕರ ಸಮಾವೇಶ ಹಾಗೂ ವಿಪಕ್ಷ ನಾಯಕ ಈಶ್ವರಪ್ಪನವರ ಬೆನ್ನ ಹಿಂದೆ ಸಂತೋಷ್ ಇದ್ದಾರೆ ಅಂತ ಯಡಿಯೂರಪ್ಪ ನೇರ ಆರೋಪ ಮಾಡಿದ್ದಾರೆ. ಹಾಗಾದರೆ ಯಾರು ಈ ಸಂತೋಷ್? ಅವರ ಹಿನ್ನಲೆ ಏನು? ಈ ಬಿಜೆಪಿ ಭಿನ್ನರಾಗದಲ್ಲಿ ಅವರ ಹೆಸರ್ಯಾಕೆ ಕೇಳಿ ಬರ್ತಿದೆ? ಇಲ್ಲಿದೆ ಸಂಪೂರ್ಣ ವಿವರ.
ಬಹುತೇಕರಿಗೆ ಸಂತೋಷ್ ಯಾರು ಅಂತ ಗೊತ್ತಿಲ್ಲ. ಅವರೆಂದೂ ಮಾದ್ಯಮಗಳ ಮುಂದೆ ಬರುವವರಲ್ಲ. ಇಷ್ಟಕ್ಕೂ ಈ ಸಂತೋಷ್ ಎಲ್ಲಿಯವರು ಅಂದರೆ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರು. ಆರ್.ಎಸ್.ಎಸ್. ಪ್ರಚಾರಕರಾಗಿ ಕೆಲ ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸಂತೋಷ್ಗೆ ರಾಜ್ಯ ಬಿಜೆಪಿಯಲ್ಲಿ ಯಾವುದೇ ಹುದ್ದೆ ಇಲ್ಲ.
2005ರಲ್ಲಿ ನಡೆದ ಲೋಕಸಭಾ ಚುನಾವಣೆಯ ವೇಳೆ ಎಂ.ಬಿ. ಭಾನುಪ್ರಕಾಶ್ ಅಭ್ಯರ್ಥಿಯಾಗಿದ್ದ ಶಿವಮೊಗ್ಗ ಕ್ಷೇತ್ರಕ್ಕೆ ಕಾಲಿಟ್ರು. ಅಲ್ಲಿಂದಲೇ ಯಡಿಯೂರಪ್ಪ ಜತೆ ನಿರಂತರ ಸಂಪರ್ಕ ಆರಂಭವಾಯಿತು. ಆದರೆ ಈಗ ಕೆಲ ವರ್ಷಗಳಿಂದ ಯಡಿಯೂರಪ್ಪ ಹಾಗೂ ಸಂತೋಷ್ ನಡುವಣ ಸಂಬಂಧ ಹಳಸಿದೆ. ಲೋಕಾಯುಕ್ತ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವರದಿ ಆಧರಿಸಿ ಗಣಿಕಪ್ಪ ಪ್ರಕರಣದಲ್ಲಿ ಯಡಿಯೂರಪ್ಪ ರಾಜೀನಾಮೆ ಹಿಂದೆ ಸಂತೋಷ್ ಪಾತ್ರವೂ ಇತ್ತು ಎಂಬ ಆರೋಪ ಕೇಳಿಬಂದಿತ್ತು.
ಇಂತಹ ಸಂತೋಷ್ ಅವರಿಗೆ, ಯಡಿಯೂರಪ್ಪನವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಸಂತೋಷ್'ಗೆ ಸುತಾರಾಂ ಇಷ್ಟವಿರಲಿಲ್ಲವಂತೆ, ಆದರೂ ಅಮಿತ್ ಷಾ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದು ಸಂತೋಷ್ ಅವರ ಪಾಲಿಗೆ ಅರಗಿಸಿಕೊಳ್ಳಲಾಗಲಿಲ್ಲ.
ಹೀಗಾಗಿ ಅವರೊಳಗಿನ ಅಸಮಾಧಾನ ಯಡಿಯೂರಪ್ಪ ಪಕ್ಷದ ಪದಾಧಿಕಾರಿಗಳ ನೇಮಕ ಸೇರಿದಂತೆ ನಾನಾ ವಿಚಾರಗಳಲ್ಲಾದ ಲೋಪಗಳೊಂದಿಗೆ ಈಶ್ವರಪ್ಪ ಮೂಲಕ ಹೊರಹಾಕಿಸುತ್ತಿದ್ದಾರೆ ಎಂಬ ಮಾತಿದೆ. ಸಂತೋಷ್ ಮಹಾತ್ವಾಕಾಂಕ್ಷಿಯಾಗಿದ್ದು, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳೂ ಕಮಲ ಪಾಳೆಯದ ಪಡಸಾಲೆಯಲ್ಲೇ ಕೇಳಿಬರುತ್ತಿರುತ್ತೆ. ಈಗ ಯಡಿಯೂರಪ್ಪ ಮೊಟ್ಟಮೊದಲ ಬಾರಿಗೆ ಸಂತೋಷ್ ಹೆಸರು ಬಹಿರಂಗವಾಗಿ ಹೇಳುವ ಮೂಲಕ ಹೈಕಮಾಂಡ್ವರೆಗೂ ಈ ಚರ್ಚೆ ತಲುಪಿದೆ. ಮುಂದೆನಾಗಲಿದೆ ಅನ್ನೋದು ಸದ್ಯ ಎಲ್ಲರೂ ಕೇಳುತ್ತಿರುವ ಏಕೈಕ ಪ್ರಶ್ನೆ.
ವರದಿ: ವೀರೇಂದ್ರ ಉಪ್ಪುಂದ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.