ಸರ್ಕಾರದಿಂದಲೇ ಧಾರ್ಮಿಕ ಪ್ರವಾಸ ಪ್ಯಾಕೇಜ್

By Suvarna Web DeskFirst Published Sep 28, 2017, 1:31 PM IST
Highlights

ಸರ್ವಧರ್ಮೀಯರ ಪುನೀತ ಯಾತ್ರೆಗೆ ಸಿಎಂ ಚಾಲನೆ | ಖಾಸಗಿ ಕಂಪನಿಗಳ ಪ್ಯಾಕೇಜ್‌ಗಿಂತ ಶೇ.25 ಅಗ್ಗ | ಪ್ರತಿ ಪ್ರಯಾಣಿಕರಿಗೆ ₹2844 ಸಬ್ಸಿಡಿ

ಬೆಂಗಳೂರು: ಅಗ್ಗದ ದರದಲ್ಲಿ ಸರ್ವಧರ್ಮೀಯರ ಧಾರ್ಮಿಕ, ಪಾರಂಪರಿಕ, ಐತಿಹಾಸಿಕ ಸ್ಥಳಗಳ ದರ್ಶನ ಮಾಡಿಸುವ ಪ್ರವಾಸೋದ್ಯಮ ಇಲಾಖೆಯ ವಿನೂತನ ಯೋಜನೆ ‘ಪುನೀತ ಯಾತ್ರೆ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.

ವಿಧಾನಸೌಧದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಚಾಲನೆ ನೀಡಿದ ಅವರು, ರಿಯಾಯಿತಿ ದರದ ಈ ಪ್ರವಾಸವು ಎಲ್ಲಾ ಧರ್ಮದವರಿಗೂ ಲಭ್ಯವಾಗಲಿದೆ.

Latest Videos

ಖಾಸಗಿ ಸಂಸ್ಥೆಗಳು ನಿಗದಿಪಡಿಸಿರುವ ಪ್ಯಾಕೇಜ್’ಗಳಿಗಿಂತ ಶೇ.25ರಷ್ಟು ರಿಯಾಯಿತಿ ದರದಲ್ಲಿ ‘ಪುನೀತ ಯಾತ್ರೆ’ಯ ಪ್ರವಾಸ ಪ್ಯಾಕೇಜ್ ಲಭ್ಯವಾಗಲಿದೆ. ದಕ್ಷಿಣ ಭಾರತದ ಪ್ರವಾಸಿ ತಾಣ, ಧಾರ್ಮಿಕ, ಐತಿಹಾಸಿಕ ಸ್ಥಳಗಳನ್ನು ಪ್ರವಾಸಿಗರು ವೀಕ್ಷಿಸಬಹುದು.

ಜತೆಗೆ ರಾಜ್ಯದ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸುವುದು ಸಹ ಈ ಯೋಜನೆಯ ಉದ್ದೇಶವಾಗಿದೆ ಎಂದರು.

ಎಲ್ಲಾ ಧರ್ಮದ ಪುಣ್ಯ ಕ್ಷೇತ್ರಗಳು ಸೇರಿದಂತೆ ದಕ್ಷಿಣ ಭಾರತದ 21 ಸ್ಥಳಗಳನ್ನು ಪ್ರವಾಸೋದ್ಯಮ ಇಲಾಖೆ ಈಗಾಗಲೇ ಗುರುತಿಸಿದೆ. ಯೋಜನೆಯನ್ನು ಎರಡು ಹಂತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮೊದಲ ಹಂತದ ಪ್ಯಾಕೇಜ್ ಯೋಜನೆ ಬುಧವಾರದಿಂದ ಆರಂಭಗೊಂಡಿದೆ. ಎರಡನೇ ಹಂತದ ಯೋಜನೆಯು ಅ.15ರಿಂದ ಆರಂಭಗೊಳ್ಳಲಿದೆ.

ಮೊದಲ ವರ್ಷ 1.38 ಲಕ್ಷ ಪ್ರವಾಸಿಗರನ್ನು ಪುನೀತ ಯಾತ್ರೆಗೆ ಕರೆದೊಯ್ಯುವ ಗುರಿಯನ್ನು ಹೊಂದಲಾಗಿದೆ. ಪ್ರವಾಸ ಕೈಗೊಳ್ಳಲಿರುವ ಪ್ರತಿಯೊಬ್ಬರಿಗೆ ₹2844 ನೆರವನ್ನು ಸರ್ಕಾರ ಒದಗಿಸಲಿದ್ದು, ಉಳಿದ ವೆಚ್ಚವನ್ನು ಪ್ರವಾಸಿಗರು ಭರಿಸಬೇಕಾಗುತ್ತದೆ ಎಂದು ವಿವರಿಸಿದರು.

ಕೆಎಸ್‌ಡಿಟಿಸಿ ಮತ್ತು ಕೆಎಸ್‌ಆರ್’ಟಿಸಿಯ 24 ಎಸಿ ಡಿಲಕ್ಸ್ ಬಸ್‌ಗಳನ್ನು ಈ ಪ್ರವಾಸಕ್ಕಾಗಿ ನಿಯೋಜಿಸಲಾಗಿದೆ.

ಹಿಂದು, ಮುಸ್ಲಿಂ, ಅಲ್ಪಸಂಖ್ಯಾತರು, ಸಿಖ್ಖರು, ಜೈನರು, ಬೌದ್ಧ ಧರ್ಮ ಸೇರಿದಂತೆ ಎಲ್ಲಾ ಧರ್ಮದವರು ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಇಡೀ ವರ್ಷದ ಕಾರ್ಯಕ್ರಮ ಇದಾಗಿದೆ. ಕರ್ನಾಟಕವು ವೈವಿಧ್ಯಮಯ ಸಂಸೃತಿಯ ತಾಣವಾಗಿದೆ.

ಸರ್ವಧರ್ಮೀಯರು ರಾಜ್ಯದ ಅತ್ಯಂತ ಪವಿತ್ರವಾದ ದೇವಸ್ಥಾನಗಳು, ಚರ್ಚ್‌ಗಳು, ಮಸೀದಿಗಳಿಗೆ ಭೇಟಿ ನೀಡಬಹುದು ಎಂದು ತಿಳಿಸಿದರು. ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಪುನೀತ ಯಾತ್ರೆ ಕೈಗೊಳ್ಳಲು ಯಾವುದೇ ವಯಸ್ಸಿನ ಮಿತಿ ಹಾಗೂ ಷರತ್ತುಗಳಿಲ್ಲ.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಉತ್ತಮ ಹೊಟೇಲ್‌ಗಳಲ್ಲಿ ಪ್ರವಾಸಿಗರಿಗೆ ವಾಸ್ತವ್ಯ

ವ್ಯವಸ್ಥೆ ಮಾಡಲಾಗುತ್ತದೆ. ಸಂಪೂರ್ಣ ಮಾರ್ಗದರ್ಶನದೊಂದಿಗೆ ಪ್ರವಾಸ ಆಯೋಜಿಸಲಾಗುತ್ತದೆ. ನಿಗಮದ ಹೊಟೇಲ್‌ಗಳು ಇಲ್ಲದ ಕಡೆಗಳಲ್ಲಿ ಖಾಸಗಿ ಹೊಟೇಲ್‌ಗಳನ್ನು ಒದಗಿಸಲಾಗುವುದು. ಸದ್ಯ ಊಟದ ವ್ಯವಸ್ಥೆಯು ಪ್ಯಾಕೇಜ್‌ನಲ್ಲಿಲ್ಲ. ಆದರೆ, ಪ್ಯಾಕೇಜ್‌ನಲ್ಲಿ ಊಟದ ವ್ಯವಸ್ಥೆ ಕಲ್ಪಿಸುವ ಸಂಬಂಧ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.

ಪ್ರವಾಸಿಗರನ್ನು ಬೆಂಗಳೂರು ಮತ್ತು ಕಲಬುರಗಿಯಿಂದ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಲ್ಲಿ 19 ಸ್ಥಳಗಳಿಂದ ಮತ್ತು ಕಲಬುರಗಿಯಿಂದ ಎರಡು ಸ್ಥಳಗಳಿಂದ ಕರೆದೊಯ್ಯಲಾಗುತ್ತದೆ. ತಿರುಪತಿ ದರ್ಶನಕ್ಕೆ ಪ್ರತಿ ನಿತ್ಯ 200 ಮಂದಿಯನ್ನು ಕರೆದೊಯ್ಯುವ ಅವಕಾಶ ಕಲ್ಪಿಸಲಾಗಿದೆ. ಬೇಡಿಕೆ ಹೆಚ್ಚಾದರೆ ತಿರುಪತಿ ಟ್ರಸ್ಟ್ ಅವರೊಂದಿಗೆ ಮಾತುಕತೆ ನಡೆಸಿ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚಳ ಮಾಡಲಾಗುವುದು ಎಂದರು.

click me!