
ನವದೆಹಲಿ : ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ(ಡಿಪಿಆರ್) ರಚನೆಗೆ ಕರ್ನಾಟಕಕ್ಕೆ ಅನುಮತಿ ನೀಡಿರುವ ಕೇಂದ್ರ ಜಲ ಆಯೋಗದ ತೀರ್ಮಾನವನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳಿಗೆ ನೊಟೀಸ್ ನೀಡಿದೆ.
ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಸಮಯಾವಕಾಶ ನೀಡಿದೆ. ಆದರೆ ಡಿಪಿಆರ್ ರಚನೆಗೆ ತಕ್ಷಣವೇ ತಡೆ ನೀಡಬೇಕು ಎಂಬ ತಮಿಳುನಾಡಿನ ಬೇಡಿಕೆ ಪುರಸ್ಕರಿಸಿಲ್ಲ.
ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಂ.ಖಾನ್ವೀಳ್ಕರ್ ನೇತೃತ್ವದ ನ್ಯಾಯಪೀಠ, ಜಲ ಆಯೋಗ ಕೇಳಿರುವುದು ಪರಿಷ್ಕೃತ ಡಿಪಿಆರ್ ಅನ್ನು ಮಾತ್ರ. ರಾಜ್ಯಸರ್ಕಾರ ರಚಿಸಿರುವ ಪ್ರಾಥಮಿಕ ಕಾರ್ಯ ಸಾಧ್ಯತಾ ವರದಿಗೆ ಮಂಡಳಿ ಒಪ್ಪಿರುವುದು ಅಂತಿಮವಲ್ಲ. ಈಗ ನಾವು ಮೇಕೆದಾಟು ಯೋಜನೆಯನ್ನು ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸುತ್ತೇವೆ ಎಂದು ಹೇಳಿತು.
ಈ ಮಧ್ಯೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ವಕೀಲ ವಸೀಂ ಖಾದ್ರಿ, ಸುಪ್ರೀಂ ಕೋರ್ಟ್ ತೀರ್ಪಿಗೆ ಒಳಪಟ್ಟು ಮೇಕೆದಾಟು ಯೋಜನೆಯ ತೀರ್ಮಾನವಾಗಲಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಬೇಕು ಎಂದು ಕೋರಿದರು. ಈ ಮೂಲಕ ಮೇಕೆದಾಟು ಯೋಜನೆಯ ಭವಿಷ್ಯವನ್ನು ನ್ಯಾಯಾಲಯವೇ ನಿರ್ಧರಿಸಲಿ ಎಂಬ ಇರಾದೆಯನ್ನು ಕೇಂದ್ರ ಸರ್ಕಾರ ಹೊಂದಿರುವುದು ಸ್ಪಷ್ಟವಾಗಿದೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸ್ವತಂತ್ರ ಅಧ್ಯಕ್ಷರನ್ನು ನೇಮಿಸಬೇಕು ಎಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ಬಗ್ಗೆಯೂ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೇಳಿದೆ.
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹಾನಿಯಾಗದು ಎಂದು ರಾಜ್ಯದ ಪರ ವಾದಿಸಿದ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಸಮರ್ಥಿಸಿಕೊಂಡರು. ತಮಿಳುನಾಡು ಪರ ಹಿರಿಯ ವಕೀಲ ಶೇಖರ್ ನಾಫ್ಡೆ, ಮೇಕೆದಾಟು ಯೋಜನೆಯು ಸುಪ್ರೀಂ ಕೋರ್ಟ್‌ನ ಕಾವೇರಿ ಅಂತಿಮ ತೀರ್ಪಿನ ಉಲ್ಲಂಘನೆ ಎಂದು ವಾದಿಸಿದರು.
ಕಾವೇರಿಗೆ ಡ್ಯಾಂ ಆದ್ರೆ ತಮಿಳುನಾಡು ಪ್ರತ್ಯೇಕ ರಾಷ್ಟ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.