ನಡೆ​ದಾ​ಡಿದ ದೇವರು: ಸಿದ್ಧಗಂಗಾ ಶ್ರೀಗಳಿಂದ ಇಷ್ಟಲಿಂಗ ಪೂಜೆ

By Web DeskFirst Published Dec 13, 2018, 12:57 PM IST
Highlights

ಚೆನ್ನೈ ಆಸ್ಪತ್ರೆಯಲ್ಲಿ ಸಿದ್ಧಗಂಗಾ ಶ್ರೀಗಳಿಂದ ಇಷ್ಟಲಿಂಗ ಪೂಜೆ| ಖಾಲಿ ಹಣೆಯಲ್ಲಿ ಬಂದ ಶಿಷ್ಯನಿಗೆ ವಿಭೂತಿ ಹಚ್ಚಿದ ಸ್ವಾಮೀಜಿ

ತುಮಕೂರು[ಡಿ.13]: ಪಿತ್ತ​ಕೋಶ ಮತ್ತು ಯಕೃತ್‌ ಸಂಬಂಧಿ ಸೋಂಕಿನ ಹಿನ್ನೆ​ಲೆ​ಯಲ್ಲಿ ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಶಸ್ತ್ರ​ಚಿ​ಕಿ​ತ್ಸೆಗೆ ಒಳ​ಗಾಗಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಬುಧವಾರ ಸ್ವಲ್ಪಕಾಲ ನಡೆದಾಡಿದ್ದಾರೆ. ಅಲ್ಲದೇ ಶ್ರೀಗಳು ಇಷ್ಟಲಿಂಗ ಪೂಜೆ ಸಹ ನೆರವೇರಿಸಿದ್ದಾರೆ.

ಡಿ.8ರ ಶನಿ​ವಾರ ಬೈಪಾಸ್‌ ಮಾದ​ರಿಯ ಶಸ್ತ್ರ ಚಿಕಿ​ತ್ಸೆಗೆ ಒಳ​ಗಾ​ಗಿದ್ದ ಶ್ರೀಗಳು ಗಣ​ನೀ​ಯ​ವಾಗಿ ಚೇತ​ರಿ​ಸಿ​ಕೊಂಡಿದ್ದು, ದ್ರವ​ರೂ​ಪದ ಆಹಾರ ಸೇವಿ​ಸು​ತ್ತಿ​ದ್ದಾ​ರೆ. ಅಲ್ಲದೇ ಕಿರಿಯ ಶ್ರೀಗಳ ಜೊತೆ ಕೂಡಾ ಮಾತ​ನಾ​ಡಿ​ದ್ದಾರೆ. ಡಿ.7ರಂದು ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳಿಗೆ ಡಿ.8ರಂದು ಡಾ. ಮೊಹ​ಮದ್‌ ರೆಲಾ ನೇತೃತ್ವದಲ್ಲಿ ಯಶಸ್ವಿ ಪಿತ್ತಕೋಶದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ವೈದ್ಯರ ಬಳಿ ತಮ್ಮ ಬೇಡಿಕೆ ಮುಂದಿಟ್ಟ ಸಿದ್ಧಗಂಗಾ ಶ್ರೀ

ಚಿಕಿತ್ಸೆ ನಡೆದ ಒಂದೇ ಗಂಟೆಯಲ್ಲಿ ಅನಸ್ತೇಶಿಯಾದಿಂದ ಹೊರಬಂದ ಶ್ರೀಗಳು ವೈದ್ಯಲೋಕದ ಅಚ್ಚರಿಗೆ ಕಾರಣವಾಗಿದ್ದರು. ಅಂದಿನಿಂದ ಇಂದಿನವರೆಗೂ ಲಿವರ್‌ ಯುನಿಟ್‌ ಕೇರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಬುಧವಾರ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ​ಲಿಂಗ ಪೂಜೆ ಮಾಡುವ ವೇಳೆ ತಮ್ಮ ಶಿಷ್ಯ​ರೊ​ಬ್ಬರು ವಿಭೂತಿ ಧರಿ​ಸಿ​ರ​ಲಿಲ್ಲ. ಇದನ್ನು ಗಮ​ನಿ​ಸಿದ ಶ್ರೀಗಳು ಹಣೆಗೆ ವಿಭೂತಿಯನ್ನು ಧರಿಸಿದ್ದಾರೆ. ಆಸ್ಪ​ತ್ರೆಗೆ ಆಗಮಿಸಿದ ಬೆಳಗಾವಿಯ ಹುಕ್ಕೇರಿ ಮಠದ ಚಂದ್ರಶೇಖರ ಸ್ವಾಮೀಜಿ ಹಾಗೂ ಶಿವಗಂಗೆಯ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಶ್ರೀಗಳ ಯೋಗಕ್ಷೇಮವನ್ನು ಶ್ರೀಗಳು ವಿಚಾರಿಸಿದ್ದಾರೆ. ಬುಧವಾರ ಚೆನ್ನೈನ ರೆಲಾ ಆಸ್ಪತ್ರೆ ಸಿಬ್ಬಂದಿ​ ಸ್ವಲ್ಪ ಪ್ರಮಾ​ಣ​ದಲ್ಲಿ ಶ್ರೀಗ​ಳಿಗೆ ವಾಕಿಂಗ್‌ ಮಾಡಿ​ಸಿ​ದ್ದಾರೆ.

ಐಸಿಯುನಲ್ಲಿದ್ದರೂ ಶಿವಪೂಜೆ ಸಿದ್ಧತೆ ನಡೆಸಿ ಎಂದ ಸಿದ್ಧಗಂಗಾ ಶ್ರೀಗಳು

ಶ್ರೀಗಳ ಆರೋ​ಗ್ಯದ ಬಗ್ಗೆ ಮಾಹಿತಿ ನೀಡಿದ ಕಿರಿಯರಾದ ಸಿದ್ಧಲಿಂಗ ಶ್ರೀಗಳು, ಸ್ವಾಮೀಜಿ ಲವಲವಿ​ಕೆ​ಯಿಂದ ಇದ್ದಾರೆ. ಎಳನೀರು ಮತ್ತು ಹಣ್ಣಿನ ಜ್ಯೂಸ್‌ ಸೇವಿಸಿರುವ ಶ್ರೀಗಳಿಗೆ ಸ್ವಲ್ಪಪ್ರಮಾಣದ ವಾಕಿಂಗ್‌ ಮಾಡಿ​ಸ​ಲಾ​ಗಿದೆ. ಇನ್ನು ಎಂದಿನಂತೆ ಮಠ ಮತ್ತು ಮಕ್ಕಳ ಬಗ್ಗೆ ವಿಚಾರಿಸಿದ ಶ್ರೀಗಳು ಮಠದಲ್ಲಿ ರಾಗಿ ಕಣ ಆಯ್ತಾ, ಕೆಲಸ ಹೇಗಿದೆ ಅಂತ ಕೇಳಿದರು ಎಂದು ಮಾಹಿತಿ ನೀಡಿದರು.

ಬುಧವಾರ ತಡರಾತ್ರಿ ಅಥವಾ ಗುರುವಾರ ಮುಂಜಾನೆ ವೇಳೆಗೆ ಶ್ರೀಗಳನ್ನು ವಿಶೇಷ ವಾರ್ಡ್‌ಗೆ ಸ್ಥಳಾಂತರ ಮಾಡಲಾಗುವುದು ಎಂದು ಮಠದ ಮೂಲಗಳು ಹೇಳಿವೆ.

click me!