ಸಿದ್ಧಗಂಗಾ ಶ್ರೀಗಳಿಗೆ ಸಿಗದ ಭಾರತರತ್ನ: ಇಲ್ಲಿದೆ ಹಿಂದಿನ ಕಾರಣ

By Web DeskFirst Published Jan 29, 2019, 11:22 AM IST
Highlights

ನಿಷ್ಕಾಮಯೋಗಿ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡದೇ ಇರುವುದು ಸಮಂಜಸವಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರದ ಈ ನಡೆಗೆ ಉದ್ದೇಶವೇನು? ಇಲ್ಲಿದೆ ಕಾರಣ. 

ಬೆಂಗಳೂರು (ಜ. 29): ಸರ್ಕಾರಗಳು, ಅರ್ಥಾತ್‌ ರಾಜಕಾರಣಿಗಳು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯ ಕೂಡ ವೋಟ್‌ಬ್ಯಾಂಕ್‌ ಮೇಲೆ ಕಣ್ಣಿಟ್ಟಿರುವುದು ಭಾರತದಲ್ಲಿ ಮಾತ್ರ ಇರಬೇಕು. ಭಾರತ ರತ್ನ ವಿವಾದವನ್ನೇ ನೋಡಿ. ನಾನಾಜಿ ದೇಶಮುಖ್‌ರಿಗೆ ಸಂಘವನ್ನು ಖುಷಿಪಡಿಸಲು, ಭೂಪೇನ್‌ ಹಜಾರಿಕಾ ಅವರಿಗೆ ಅಸ್ಸಾಂನಲ್ಲಿ ಸಿಟಿಜನ್‌ಶಿಪ್‌ ಮಸೂದೆ ಬಗ್ಗೆ ಎದ್ದಿರುವ ಆಂದೋಲನವನ್ನು ತಣ್ಣಗಾಗಿಸಲು ಮರಣೋತ್ತರ ಭಾರತ ರತ್ನ ನೀಡಲಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ.

ಇನ್ನು, ಈಗಷ್ಟೇ ರಾಷ್ಟ್ರಪತಿ ಸ್ಥಾನದಿಂದ ಕೆಳಗೆ ಇಳಿದಿರುವ ಪ್ರಣಬ್‌ ಮುಖರ್ಜಿ ಅವರಿಗೆ ಭಾರತರತ್ನ ನೀಡಿದ್ದು ಏಕೆ ಎಂಬ ಪ್ರಶ್ನೆ ಕೂಡ ಎದ್ದಿದೆ. ಪಶ್ಚಿಮ ಬಂಗಾಳದಲ್ಲಿ ಸೀಟು ಗೆಲ್ಲಲು ಹರಸಾಹಸಪಡುತ್ತಿರುವ ಬಿಜೆಪಿ, ಬಂಗಾಳಿ ಬಾಬು ಪ್ರಣಬ್‌ರನ್ನು ಬಳಸಿಕೊಂಡು ಒಳಗೆ ಪ್ರವೇಶಿಸಲು ಯತ್ನಿಸಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

ನಿಯಮಗಳ ಪ್ರಕಾರ ಒಂದು ವರ್ಷದಲ್ಲಿ ಗರಿಷ್ಠ ಮೂವರಿಗೆ ಮಾತ್ರ ಭಾರತ ರತ್ನ ನೀಡಲು ಅವಕಾಶವಿದೆ. ಇಲ್ಲವಾದರೆ ಚುನಾವಣಾ ರಾಜಕೀಯದ ಅನಿವಾರ್ಯತೆಯಿಂದ ರಾಜ್ಯಕ್ಕೊಂದು ಭಾರತರತ್ನ ಘೋಷಣೆಯಾದರೂ ಅಚ್ಚರಿಯಿರಲಿಲ್ಲ ಎಂಬ ಚಟಾಕಿ ದೆಹಲಿಯ ಅಧಿಕಾರ ವಲಯದಲ್ಲಿ ಹಾರಾಡುತ್ತಿದೆ.

ಭಾರತರತ್ನ ಹಾಗೂ ಪದ್ಮ ಪ್ರಶಸ್ತಿಗಳಿಗೆ ಆಯಾ ರಾಜ್ಯಗಳು ಹೆಸರುಗಳನ್ನು ಶಿಫಾರಸು ಮಾಡಿದ ನಂತರ ಕೇಂದ್ರ ಗೃಹ ಸಚಿವರು, ಗೃಹ ಕಾರ್ಯದರ್ಶಿ, ಕ್ಯಾಬಿನೆಟ್‌ ಸೆಕ್ರೆಟರಿ ಮತ್ತು ಪ್ರಧಾನಿಗಳ ಆಪ್ತ ಕಾರ್ಯದರ್ಶಿಯನ್ನು ಒಳಗೊಂಡ ಸಮಿತಿ ಅದಕ್ಕೆ ಜರಡಿ ಹಿಡಿಯುತ್ತದೆ. ನಂತರ ತಾನೇ ಕೆಲ ಹೆಸರುಗಳನ್ನು ಸೇರಿಸಬಹುದು. ಆದರೆ, ಅಂತಿಮವಾಗಿ ರಾಷ್ಟ್ರಪತಿಗಳಿಗೆ ಹೆಸರು ಕಳಿಸುವುದು ಸ್ವಯಂ ಪ್ರಧಾನಿಯೇ. 2015ರಲ್ಲಿಯೇ ಅಟಲ…ಜಿ ಮತ್ತು ಮಾಳವೀಯರಿಗೆ ಭಾರತರತ್ನ ಕೊಟ್ಟಾಗ ಸಿದ್ಧಗಂಗಾ ಶ್ರೀಗಳ ಹೆಸರಿನ ಬಗ್ಗೆ ಗಂಭೀರ ಚರ್ಚೆ ಆಗಿತ್ತು.

ನಂತರ ಕರ್ನಾಟಕದ ಚುನಾವಣೆಗೂ ಮುಂಚಿನ ವರ್ಷ 2017ರಲ್ಲಿ ಶ್ರೀಗಳ ಹೆಸರನ್ನು ರಾಜ್ಯ ಬಿಜೆಪಿ ನಾಯಕರು ನೇರವಾಗಿಯೇ ಪ್ರಧಾನಿ ಬಳಿ ಒಯ್ದಿದ್ದರು. ಆದರೆ ಗೃಹ ಇಲಾಖೆ ಅಧಿಕಾರಿಗಳು ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ಯಾವುದೇ ಸಮುದಾಯದ ಸ್ವಾಮೀಜಿಗಳಿಗೆ ಭಾರತ ರತ್ನ ಕೊಡುವ ಬಗ್ಗೆ ಒಲವು ಇರಲಿಲ್ಲ. ಇದರಿಂದ ಪ್ಯಾಂಡೋರಾ ಬಾಕ್ಸ್‌ ತೆರೆದಂತೆ ಆಗುತ್ತದೆ. ಎಲ್ಲ ರಾಜ್ಯದ, ಎಲ್ಲ ಸಮುದಾಯಗಳಿಗೆ ತಮ್ಮ ತಮ್ಮ ಸ್ವಾಮೀಜಿಗಳು ಪೂಜ್ಯರೇ ಇರುತ್ತಾರೆ.

ಒಬ್ಬರಿಗೆ ನೀಡಿದರೆ ಮುಂದೆ ಪ್ರತಿ ವರ್ಷ ಬೇರೆ ಬೇರೆ ರಾಜ್ಯಗಳಲ್ಲಿ ಇದೇ ಕೂಗು ಏಳುತ್ತದೆ. ಆಗ ಸಮಾಧಾನಿಸುವುದು ಕಷ್ಟಎಂಬ ಸಲಹೆಗೆ ಪ್ರಧಾನಿ ಕೂಡ ಒಪ್ಪಬೇಕಾಯಿತಂತೆ. ಕರ್ನಾಟಕದಲ್ಲಿ ಶ್ರೀಗಳಿಗೆ ಭಾರತ ರತ್ನ ನೀಡಿ ಎಂಬ ಕೂಗು ಎದ್ದಂತೆಯೇ ಗುಜರಾತ್‌ನಲ್ಲಿ ಸ್ವಾಮಿ ನಾರಾಯಣ್‌ ಪಂಥದ ಸ್ವಾಮಿ ಮಹಾರಾಜ್‌ರಿಗೂ ಕೊಡಿ ಎಂದು ಕೆಲವರು ಕೂಗು ಎಬ್ಬಿಸುತ್ತಾರೆ. ಇದನ್ನು ನಿಭಾಯಿಸುವುದು ಕಷ್ಟವಾಗಬಹುದು ಎಂಬ ಅಭಿಪ್ರಾಯ ಸರ್ಕಾರದ ಉನ್ನತ ವಲಯದಲ್ಲಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

click me!