
ವಿರಾಜಪೇಟೆ : ಕೊಡಗಿನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪಕ್ಕೆ ಮಿಡಿದಿರುವ ಚಿತ್ರನಟಿ ರಶ್ಮಿಕಾ ಮಂದಣ್ಣ 31 ಸಂತ್ರಸ್ತರಿಗೆ ತಲಾ 10 ಸಾವಿರ ರು. ಸಹಾಯಧನ ವಿತರಿಸಿದ್ದಾರೆ.
ಜಿಲ್ಲೆಯ ವಿರಾಜಪೇಟೆಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು, ಭಯಾನಕ ಪ್ರಕೃತಿ ವಿಕೋಪದಿಂದ ಅನೇಕ ಮಂದಿ ಆಸ್ತಿ- ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇದರಲ್ಲಿ ದೈವ ಪರೀಕ್ಷೆಯೂ ನಡೆದಿದ್ದು ಈಗ ಸಂತ್ರಸ್ತರೆಲ್ಲರೂ ದೈವಶಕ್ತಿ ಮತ್ತು ಧೈರ್ಯದಿಂದ ಬದುಕನ್ನು ಮುನ್ನಡೆಸಬೇಕಾಗಿದೆ ಎಂದು ಧೈರ್ಯದ ಮಾತುಗಳನ್ನು ಹೇಳಿದರು.
ಈ ವೇಳೆ ಪ್ರಕೃತಿ ವಿಕೋಪದ ದುರಂತದ ಅನುಭವವನ್ನು ಹೇಳಿಕೊಂಡು ಕಣ್ಣೀರು ಹಾಕಿದ ಕೆಲವರನ್ನು ರಶ್ಮಿಕಾ ಮಂದಣ್ಣ ವೇದಿಕೆಯಲ್ಲೇ ಆಲಂಗಿಸಿ ಕಣ್ಣೀರು ಹಾಕಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಮಾಧಾನಿಸಿದರು.
ಕೊಡಗು ಯೋಧರ ನಾಡು. ಯಾವುದೇ ಅನಾಹುತ, ದುರಂತ, ಸಂಭವಿಸಿದರೂ ಧೈರ್ಯದಿಂದ ಎದುರಿಸುವ ಶಕ್ತಿ ಕೊಡಗಿನವರಿಗೆ ಇದೆ. ಕೊಡಗಿನ ಮರು ನಿರ್ಮಾಣಕ್ಕೆ ಎಲ್ಲರೂ ಒಮ್ಮತದಿಂದ ಪಣ ತೊಡೋಣ. ರಾಜ್ಯದ ಫಿಲಂ ಉದ್ಯಮ ಸಂಸ್ಥೆ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು ಕೊಡಗಿನ ದುರಂತಕ್ಕೆ ಸಹಾಯಹಸ್ತ ನೀಡುತ್ತಿದ್ದಾರೆ ಎಂದು ಭರವಸೆ ತುಂಬಿದರು.
ಕರ್ನಾಟಕ ಹಾಗೂ ಕೇರಳದಲ್ಲಿ ನಡೆದ ದುರಂತಕ್ಕೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯಧನ ನೀಡಿದ್ದೇನೆ. ಕೊಡಗಿನ ಸಂತ್ರಸ್ತರನ್ನು ಖುದ್ದು ಭೇಟಿ ಮಾಡಿ ಸಾಂತ್ವನ ಹೇಳುವುದರೊಂದಿಗೆ ಸಹಾಯಹಸ್ತ ನೀಡುವ ನಿಟ್ಟಿನಲ್ಲಿ ಈ ಸಮಾರಂಭದಲ್ಲಿ ಭಾಗಿಯಾಗಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.