
ಬೆಂಗಳೂರು : ಸಚಿವ ಸಂಪುಟ ಪುನಾರಚನೆ ನಂತರ ತೀವ್ರ ಅತೃಪ್ತಿ ಹೊಂದಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರನ್ನು ಸಮಾಧಾನ ಪಡಿಸುವಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಆದರೆ, ಮತ್ತೊಬ್ಬ ಅತೃಪ್ತ ರಮೇಶ್ ಜಾರಕಿಹೊಳಿ ಹಾಗೂ ಅವರ ತಂಡ ಮಾತ್ರ ತಮ್ಮ ಮುಂದಿನ ನಡೆಯ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದೆ ಮುಗುಂ ಆಗಿ ಉಳಿದಿದೆ.
ಪಕ್ಷದ ಕೆಲ ನಾಯಕರು ಉದ್ದೇಶಪೂರ್ವಕವಾಗಿ ಹೈಕಮಾಂಡ್ಗೆ ತಪ್ಪು ಮಾಹಿತಿ ನೀಡಿ ತಮಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದ ಸಿದ್ದರಾಮಯ್ಯ ಅವರು, ಕೆಲ ಅನಿವಾರ್ಯ ಕಾರಣಗಳಿಂದ ಹಿರಿಯರಾಗಿದ್ದರೂ ನಿಮಗೆ ಸಚಿವ ಸ್ಥಾನ ತಪ್ಪಿದೆ. ಆದರೆ, ಒಳ್ಳೆಯ ಕಾಲ ಬರುತ್ತದೆ. ಸ್ವಲ್ಪ ತಾಳೆ ವಹಿಸಿ. ಈಗ ನಾನು ಅಧಿಕಾರ ಇಲ್ಲದೇ ಕಾಯುತ್ತಿಲ್ಲವೇ? ಅದೇ ರೀತಿ ನೀವು ತಾಳ್ಮೆ ವಹಿಸಿ. ಖಂಡಿತವಾಗಿಯೂ ಉತ್ತಮ ಅವಕಾಶ ಬರುತ್ತದೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿ ತಾಳ್ಮೆ ವಹಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಮಾತುಕತೆಯ ವೇಳೆ ರಾಮಲಿಂಗಾರೆಡ್ಡಿ ಅವರು, ತಮ್ಮ ವಿರುದ್ಧ ಷಡ್ಯಂತ್ರ ನಡೆಸಿದ ಇಬ್ಬರು ನಾಯಕರ ವಿರುದ್ಧ ಹರಿಹಾಯ್ದರು ಎನ್ನಲಾಗಿದೆ. ಅಲ್ಲದೆ, ನಾಲ್ಕು ಬಾರಿ ಸಚಿವರಾದವರಿಗೆ ಹುದ್ದೆ ಬೇಡ ಎಂಬ ಮಾನದಂಡ ಅನುಸರಿಸಿರುವುದಾಗಿ ಹೇಳುತ್ತಾರೆ. ಆದರೆ, ನಾಲ್ಕು ಬಾರಿ ಸಚಿವರಾಗಿದ್ದ ಡಾ.ಜಿ. ಪರಮೇಶ್ವರ್, ದೇಶಪಾಂಡೆ, ಡಿ.ಕೆ. ಶಿವಕುಮಾರ್ ಮೊದಲಾದವರೆಲ್ಲ ಸಚಿವರಾಗಿದ್ದಾರೆ. ಈ ಮಾನದಂಡ ಅನುಸರಿಸಿದ್ದೇ ನಿಜವಾಗಿದ್ದರೆ ಅವರೆಲ್ಲ ಸಚಿವರಾಗಿದ್ದು ಏಕೆ? ಇದು ತಾರತಮ್ಯವಲ್ಲವೇ ಎಂದು ನೇರವಾಗಿ ಪ್ರಶ್ನಿಸಿದರು ಎನ್ನಲಾಗಿದೆ.
ಅಲ್ಲದೆ, ನಾನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲಿಲ್ಲ. ನೀವು ಸೇರಿದಂತೆ ಯಾರ ಬಳಿಯೂ ಸಚಿವ ಸ್ಥಾನಕ್ಕಾಗಿ ಬೇಡಿಕೆಯಿಟ್ಟಿರಲಿಲ್ಲ. ಆದರೆ, ತಾರತಮ್ಯ ನಡೆದಾಗ ಕ್ಷೇತ್ರದ ಜನರು ಹೀಗೇಕೆ ಎಂದು ಕೇಳುತ್ತಾರೆ. ಆಗ ನಾನು ಜನರಿಗೆ ಹೇಗೆ ಮುಖ ತೋರಿಸುವುದು? ನಾನೆಂದೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡವನಲ್ಲ. ಬಿಬಿಎಂಪಿಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ್ದೇನೆ. ನನ್ನ ಕ್ಷೇತ್ರವಲ್ಲದೆ, ಇತರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೀಗಿದ್ದರೂ, ತಾರತಮ್ಯ ಮಾಡಿರುವುದು ನೋವು ತಂದಿದೆ ಎಂದು ತಮ್ಮ ಬೇಸರವನ್ನು ತೋಡಿಕೊಂಡರು ಎನ್ನಲಾಗಿದೆ.
ಈ ಮಾತುಕತೆ ವೇಳೆ ಸಿದ್ದರಾಮಯ್ಯ, ನೀವು ಹಿರಿಯರು, ರಾಜಕಾರಣದಲ್ಲಿ ಒಮ್ಮೊಮ್ಮೆ ಇಂತಹ ಪರಿಸ್ಥಿತಿ ಬರುತ್ತದೆ. ಹಾಗಂತ ಇದು ಶಾಶ್ವತವಲ್ಲ. ಒಳ್ಳೆ ಕಾಲ ಬರುತ್ತದೆ. ಈಗ ನನಗೂ ಅಧಿಕಾರವಿಲ್ಲ. ನಾನು ಕಾಯುತ್ತಿಲ್ಲವೇ? ನಿಮಗೂ ಒಳ್ಳೆ ಕಾಲ ಬರುತ್ತದೆ. ಲೋಕಸಭೆ ಚುನಾವಣೆವರೆಗೂ ತಾಳ್ಮೆವಹಿಸಿ ಅನಂತರ ಉತ್ತಮ ಅವಕಾಶಗಳು ಬರುತ್ತವೆ ಎಂದು ಸಮಾಧಾನ ಪಡಿಸಿದರು ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಪಕ್ಷದಲ್ಲಿ ಕೆಲವೊಂದು ನ್ಯೂನತೆಗಳಿದ್ದವು. ಅವುಗಳನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸಮಾಧಾನ ಆಗಿದೆ. ಮೈತ್ರಿ ಸರ್ಕಾರ ಇರುವುದರಿಂದ ಇಂತಹ ಸಮಸ್ಯೆಗಳು ಇರುತ್ತವೆ. ಕಾಂಗ್ರೆಸ್ ಸರ್ಕಾರ ಬಂದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ತೊರೆಯುವ ಬಗ್ಗೆ ತಾವು ಎಂದಿಗೂ ಯೋಚಿಸಿಲ್ಲ. ಬಿಜೆಪಿಯ ಯಾವ ನಾಯಕರೂ ಈ ಬಗ್ಗೆ ನನ್ನನ್ನು ಸಂಪರ್ಕಿಸಿಲ್ಲ. ವಿಶ್ವನಾಥ್ ಅವರು ಆಮಂತ್ರಣ ಪತ್ರಿಕೆ ನೀಡಲು ಭೇಟಿಯಾಗಿದ್ದರೇ ಹೊರತು ರಾಜಕೀಯ ಚರ್ಚೆಗಲ್ಲ. ನಾನು ಪಕ್ಷ ಬಿಡುವುದಿಲ್ಲ. ನನಗೆ ಸಚಿವ ಸ್ಥಾನ ದೊರಕಲಿಲ್ಲ ಎಂದು ಯಾವುದೇ ಕಾರ್ಪೊರೇಟರ್ ಹಾಗೂ ಪದಾಧಿಕಾರಿಗಳು ರಾಜೀನಾಮೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸೋಮವಾರವೇ ಕರೆ ಮಾಡಿದ್ದ ಸಿದ್ದು:
ಸಚಿವ ಸ್ಥಾನಕ್ಕೆ ತಮ್ಮನ್ನು ಪರಿಗಣಿಸದೇ ಇರುವುದು ಹಾಗೂ ಪಕ್ಷದ ಕೆಲ ನಾಯಕರು ಷಡ್ಯಂತ್ರ ನಡೆಸಿ ತಮ್ಮನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿರುವುದರ ವಿರುದ್ಧ ಸಿಡಿದೆದ್ದಿದ್ದ ರಾಮಲಿಂಗಾರೆಡ್ಡಿ ಅವರು ಬಂಡಾಯದ ಕಹಳೆ ಊದಿದ್ದರು. ಇದೇ ವೇಳೆ ಅವರ ಬೆಂಬಲಿಗ ಕಾರ್ಪೊರೇಟರ್ಗಳು ಹಾಗೂ ಪಕ್ಷದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಯ ಬೆದರಿಕೆಯನ್ನು ಒಡ್ಡಿದ್ದರು. ಇದೇ ವೇಳೆ ಕೆಲ ಬಿಜೆಪಿ ನಾಯಕರು ರಾಮಲಿಂಗಾರೆಡ್ಡಿ ಅವರನ್ನು ಸಂಪರ್ಕಿಸಲು ಮುಂದಾಗಿದ್ದು ಸುದ್ದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಸೋಮವಾರವೇ ದೂರವಾಣಿ ಮೂಲಕ ರಾಮಲಿಂಗಾರೆಡ್ಡಿ ಅವರನ್ನು ಸಂಪರ್ಕಿಸಿದ್ದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಮಾಧಾನಪಡಿಸಲು ಯತ್ನಿಸಿದ್ದರು. ಅಲ್ಲದೆ, ಬುಧವಾರ ತಮ್ಮನ್ನು ಭೇಟಿಯಾಗುವಂತೆಯೂ ಸೂಚಿಸಿದ್ದರು. ಅದರಂತೆ ಬುಧವಾರ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ರಾಮಲಿಂಗಾರೆಡ್ಡಿ ಸುಮಾರು ಒಂದು ತಾಸು ಮಾತುಕತೆ ನಡೆಸಿದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ರಾಮಲಿಂಗಾರೆಡ್ಡಿ ಅವರೊಂದಿಗಿನ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.