ಪೊಲೀಸ್‌ ಬೇಟೆ: ಬೆಳಗಾವಿಯಲ್ಲಿ 1.81 ಕೋಟಿ ಕಳ್ಳನೋಟು ವಶ

By Web DeskFirst Published Dec 26, 2018, 7:07 AM IST
Highlights

ಬೆಳಗಾವಿಯಲ್ಲಿ ಪೊಲೀಸರು ನಕಲಿ ನೋಟುಗಳ ಭಾರೀ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ. ನಕಲಿ ನೋಟುಗಳ ಚಲಾವಣೆಗೆ ಮುಂದಾಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. 

ಬೆಳಗಾವಿ :  ಬೆಳಗಾವಿಯಲ್ಲಿ ನಕಲಿ ನೋಟುಗಳ ಭಾರೀ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ. ನಕಲಿ ನೋಟುಗಳ ಚಲಾವಣೆಗೆ ಮುಂದಾಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ 2 ಸಾವಿರ ಹಾಗೂ 500 ರು. ಮುಖಬೆಲೆಯ 1.81 ಕೋಟಿ ಮೌಲ್ಯದ ಖೋಟಾ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ವಡಗಾವಿಯ ಆಸಿಫ್‌ ಶೇಖ್‌ ಮತ್ತು ಶ್ರೀನಗರದ ರಫೀಕ್‌ ದೇಸಾಯಿ ಬಂಧಿತ ಆರೋಪಿಗಳು. ಅಂತಾರಾಜ್ಯಮಟ್ಟದ ದಂಧೆಯ ಶಂಕೆ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲು ಹಿರಿಯ ಪೊಲೀಸ್‌ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ: ನಗರದ ಹೊರವಲಯದ ಚನ್ನಮ್ಮ ಸೊಸೈಟಿಯ ಬಳಿ ಆರೋಪಿ ಆಸಿಫ್‌ ಶೇಖ್‌ ರೀ ಪ್ರಮಾಣದ ಖೋಟಾ ನೋಟುಗಳನ್ನು ರಫೀಕ್‌ ದೇಸಾಯಿ ಎಂಬಾತನಿಗೆ ಹಸ್ತಾಂತರ ಮಾಡುವವನಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಸೋಮವಾರ ದಾಳಿ ನಡೆಸಿ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಡಿ.ಸಿ.ರಾಜಪ್ಪ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳಿಂದ 2000 ರು. ಹಾಗೂ .500 ರು. ಮುಖಬೆಲೆಯ ಎರಡು ಬಾಕ್ಸ್‌ಗಳಲ್ಲಿದ್ದ 50 ಬಂಡಲ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ನೋಟುಗಳನ್ನು ಪರಿಶೀಲಿಸಿದಾಗ ಅಸಲಿ ನೋಟಿನಂತೆಯೇ ಇದ್ದವು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಖೋಟಾ ನೋಟು ಎನ್ನುವುದು ಖಚಿತವಾಯಿತು. ಆರು ತಿಂಗಳಿಂದ ಆಸಿಫ್‌ ಶೇಖ್‌ ಖೋಟಾ ನೋಟುಗಳನ್ನು ಪ್ರಿಂಟ್‌ ಮಾಡಿ ಚಲಾವಣೆಗೆ ಯತ್ನಿಸುತ್ತಿದ್ದ. ಬಂಧಿತ ಆರೋಪಿಗಳಿಂದ ಖೋಟಾ ನೋಟು ಪ್ರಿಂಟ್‌ ಮಾಡಲು ಬಳಸುತ್ತಿದ್ದ ಲ್ಯಾಪ್‌ಟಾಪ್‌, ಪ್ರಿಂಟರ್‌ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜಪ್ಪ ಹೇಳಿದರು.  ಈ ಸಂಬಂಧ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!