ಅಯೋಧ್ಯೆಯಿಂದ ಕರ್ನಾಟಕಕ್ಕೆ ಹೊರಟಿತು ರಾಮರಾಜ್ಯ ರಥ

By Suvarna Web DeskFirst Published Feb 14, 2018, 7:25 AM IST
Highlights

1990ರಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರು ರಥಯಾತ್ರೆ ನಡೆಸಿದ ರೀತಿಯಲ್ಲೇ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಿಜೆಪಿ ಮುಖಂಡರು, ಅರ್ಚಕರು ಸೇರಿದಂತೆ ಇತರರು ಜೈ ರಾಮ್‌ ಮಂತ್ರಘೋಷಗಳ ಮೂಲಕ ರಾಮರಾಜ್ಯ ರಥಯಾತ್ರೆಗೆ ಮಂಗಳವಾರ ಚಾಲನೆ ದೊರೆಯಿತು.

ಲಖನೌ: 1990ರಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರು ರಥಯಾತ್ರೆ ನಡೆಸಿದ ರೀತಿಯಲ್ಲೇ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಿಜೆಪಿ ಮುಖಂಡರು, ಅರ್ಚಕರು ಸೇರಿದಂತೆ ಇತರರು ಜೈ ರಾಮ್‌ ಮಂತ್ರಘೋಷಗಳ ಮೂಲಕ ರಾಮರಾಜ್ಯ ರಥಯಾತ್ರೆಗೆ ಮಂಗಳವಾರ ಚಾಲನೆ ದೊರೆಯಿತು. 41 ದಿನಗಳ ಈ ರಥಯಾತ್ರೆಯು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಲಿದೆ.

ಅಲ್ಲದೆ, ವರ್ಷ ವಿಧಾನಸಭೆ ಚುನಾವಣೆ ಎದುರಾಗಲಿರುವ ಕರ್ನಾಟಕ ಸೇರಿದಂತೆ ಒಟ್ಟು 6 ರಾಜ್ಯಗಳಲ್ಲಿ ಹಾದು ಹೋಗಿ, ಕೊನೆಗೆ ತಮಿಳುನಾಡಿನ ರಾಮೇಶ್ವರಂನಲ್ಲಿ ರಥಯಾತ್ರೆ ಅಂತ್ಯಗೊಳ್ಳಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಮತಗಳನ್ನು ಕ್ರೋಢೀಕರಿಸುವ ಹುನ್ನಾರವಿದು ಎಂದು ರಥಯಾತ್ರೆ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಈ ಆರೋಪವನ್ನು ಅಲ್ಲಗೆಳೆದಿರುವ ಬಿಜೆಪಿ, ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ರಾಮ ಮಂದಿರ ನಿರ್ಮಾಣದ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮತ್ತು ಜನ ಸಾಮಾನ್ಯರು ರಾಮ ಮಂದಿರ ನಿರ್ಮಿಸುವ ಪ್ರತಿಜ್ಞೆ ಕೈಗೊಳ್ಳಲಿದ್ದಾರೆ ಎಂದು ಹೇಳಿದೆ.

1990ರಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರು ರಥಯಾತ್ರೆ ಕೈಗೊಂಡಿದ್ದರು. ಆದರೆ, ಅದನ್ನು ಅಂದಿನ ಬಿಹಾರ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್‌ ಯಾದವ್‌ ಸರ್ಕಾರ ತಡೆದಿತ್ತು. ಅಲ್ಲದೆ, ಅಡ್ವಾಣಿ ಅವರನ್ನು ಬಂಧಿಸಲಾಗಿತ್ತು.

click me!