
ಬೆಂಗಳೂರು : ಮುಂಗಾರು ಮಳೆಯ ಕೊರತೆಯಿಂದ ಅನೇಕ ಜಿಲ್ಲೆಗಳಲ್ಲಿ ಬರ ಸ್ಥಿತಿ, ಬೆಳೆ ಹಾನಿ, ಕುಡಿಯುವ ನೀರಿನ ಕೊರತೆ ಕಂಡುಬಂದಿರುವ ಬೆನ್ನ ಹಿಂದೆಯೇ ಅಕ್ಟೋಬರ್‌ನಿಂದ ಆರಂಭವಾಗುವ ಹಿಂಗಾರು ಮಳೆಯಲ್ಲೂ ಕೊರತೆ ಎದುರಾಗುವ ಲಕ್ಷಣ ಕಂಡುಬರುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳನ್ನು ಹೊರತುಪಡಿಸಿ ಉತ್ತರ ಹಾಗೂ ದಕ್ಷಿಣ ಒಳನಾಡಿನ 16 ಜಿಲ್ಲೆಗಳು ಮುಂಗಾರು ಮಳೆ ಕೊರತೆ ಎದುರಿಸುತ್ತಿದ್ದು, ಅಕ್ಟೋಬರ್‌ನಿಂದ ಆರಂಭವಾಗುವ ಹಿಂಗಾರು ಮಳೆಯಲ್ಲೂ ಕೊರತೆ ಎದುರಾಗುವ ಲಕ್ಷಣ ಕಂಡುಬರುತ್ತಿದೆ. ಹವಾಮಾನ ಇಲಾಖೆ ಅಂಕಿ ಅಂಶಗಳ ಪ್ರಕಾರ ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಕರಾವಳಿ ಜಿಲ್ಲೆಗಳು ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ.
ಬಿಟ್ಟರೆ ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ಉಂಟಾಗಿದೆ. ಇದೀಗ ಸೆಪ್ಟೆಂಬರ್‌ನಲ್ಲಿ ಮಳೆ ಪ್ರಮಾಣ ಸಂಪೂರ್ಣವಾಗಿ ಕ್ಷೀಣಿಸಿರುವುದರಿಂದ ಹಿಂಗಾರು ಮಳೆ ಕೊರತೆ ಉಂಟಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ರಾಜ್ಯದಲ್ಲಿ ಮುಂಗಾರು ಅವಧಿಯಲ್ಲಿ ಶೇ. 70 ರಿಂದ 80 ರಷ್ಟು ವಾಡಿಕೆ ಮಳೆ ಆಗುತ್ತದೆ. ಶೇ. 20ರಷ್ಟು ಮಳೆ ಮಾತ್ರ ಹಿಂಗಾರು ಅವಧಿಯಲ್ಲಿ ಆಗಲಿದೆ. ಸೆಪ್ಟೆಂಬರ್ ಆರಂಭದಿಂದ ಈ ವರೆಗೆ ರಾಜ್ಯದಲ್ಲಿ 34 ಮಿ.ಮೀ. ಮಳೆಯಾಗಬೇಕಾಗಿತ್ತು.
ಆದರೆ, ಕೇವಲ 9 ಮಿ.ಮೀ. ಮಾತ್ರ ಮಳೆಯಾಗಿದ್ದು ಶೇ. 77ರಷ್ಟು, ಮಳೆ ಕೊರತೆ ಉಂಟಾಗಿದೆ. ಇನ್ನು ಸೆ. 15 ವರೆಗೂ ರಾಜ್ಯದಲ್ಲಿ ಮಳೆಯಾಗುವ ಲಕ್ಷಣಗಳಿಲ್ಲ. ಸೆ. 16ರಿಂದ ಕೆಲವು ಭಾಗದಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ ಅಷ್ಟೆ. ಹಿಂಗಾರು ಮಳೆ ಸೆಪ್ಟೆಂಬರ್‌ನಲ್ಲಾಗುವ ಮುಂಗಾರು ಮಳೆಯನ್ನು ಅವಲಂಬಿಸಿರುತ್ತದೆ. ಆದರೆ, ಈ ವರ್ಷ ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ, ಇಡೀ ರಾಜ್ಯದಲ್ಲಿ ಹಿಂಗಾರು ಮಳೆಯ ಕೊರತೆ ಎದುರಾಗುವ ಸಾಧ್ಯತೆಗಳು ಕಂಡುಬರುತ್ತಿದೆ ಎಂದು ಹವಾಮಾನ ತಜ್ಞರು ಆಂತಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮಳೆ ಕೊರತೆಯಿಂದ ರಾಜ್ಯದ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಸಾಧ್ಯವಾಗಿಲ್ಲ. ಇನ್ನು ಹಲವು ಜಿಲ್ಲೆಗಳಲ್ಲಿ ಇಂದಿಗೂ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡುವ ಪರಿಸ್ಥಿತಿ ಇದೆ. ಹಿಂಗಾರು ಕೊರತೆ ಉಂಟಾದಲ್ಲಿ ಬೀಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.