
ನವದೆಹಲಿ: 2019ರ ಚುನಾವಣೆಯಲ್ಲಿ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ‘ಚೆನ್ನಾಗಿ’ ಬಳಸಿಕೊಳ್ಳಲು ತೀರ್ಮಾನಿಸಿದಂತಿರುವ ಬಿಜೆಪಿ, ‘ಅಜಯ ಭಾರತ, ಅಟಲ್ ಬಿಜೆಪಿ’ (ಕನ್ನಡದಲ್ಲಿ ‘ಅಜೇಯ ಭಾರತ, ಅಚಲ ಬಿಜೆಪಿ’) ಎಂಬ ಹೊಸ ಉದ್ಘೋಷವನ್ನು ಹುಟ್ಟುಹಾಕಿದೆ. ಭಾರತೀಯ ಜನತಾ ಪಕ್ಷದ 2 ನೇ ಹಾಗೂ ಕೊನೆಯ ದಿವಸದ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಅಟಲ್‌ಜಿಗೆ ಶ್ರದ್ಧಾಂಜಲಿ ಸಲ್ಲಿಸಿ ಈ ಉದ್ಘೋಷ ಮಾಡುವ ಮೂಲಕ 2019 ರ ಲೋಕಸಭೆ ಚುನಾವಣೆಯ ರಣಕಹಳೆ ಮೊಳಗಿಸಿದರು.
ಭಾರತ ಯಾವಾಗಲೂ ವಿಜಯಶಾಲಿಯಾಗಿರುತ್ತದೆ ಹಾಗೂ ಭಾರತವನ್ನು ಯಾರಿಂದಲೂ ಅಡಗಿಸಲಾಗದು ಎಂದು ಮೋದಿ ಹೇಳಿದರಲ್ಲದೇ, ವಿಪಕ್ಷಗಳ ಕೂಟವು ಅವಕಾಶವಾದಿತನ ಎಂದು ಟೀಕಿಸಿದರು. ಇದೇ ವೇಳೆ ಕಾರ್ಯಕಾರಿಣಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಮಾತನಾಡಿ, ‘ನಮ್ಮ ಬಳಿ 9 ಕೋಟಿ ಸಕ್ರಿಯ ಕಾರ್ಯಕರ್ತರ ಪಡೆ ಇದೆ. ಇದರರ್ಥ ನಾವು 36 - 40 ಕೋಟಿ ಜನರೊಂದಿಗೆ ಸಂಪರ್ಕ ಹೊಂದಿದ್ದೇವೆ.
ನಾವು ದೇಶದ 21 ಕೋಟಿ ಕುಟುಂಬಗಳನ್ನು ತಲುಪಬೇಕಾದ ಅವಶ್ಯಕತೆ ಇದೆ. ಆ ಮೂಲಕ ದೇಶದ 110 ಕೋಟಿಗೂ ಹೆಚ್ಚಿನ ಜನರನ್ನು ಮುಟ್ಟಬೇಕಿದೆ. ಒಂದರ್ಥದಲ್ಲಿ ಇಡೀ ದೇಶದ ಜನರನ್ನು ತಲುಪಬೇಕಿದೆ ಎಂದು ಕರೆ ಕೊಟ್ಟರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕಠಿಣ ಶ್ರಮವನ್ನು ಮೆಚ್ಚಿ ಜನರು 2019 ರಲ್ಲೂ ಅಧಿಕಾರ ನೀಡಲಿದ್ದಾರೆ. ಬಳಿಕ ಮುಂದಿನ ೫೦ ವರ್ಷವನ್ನು ಬಿಜೆಪಿಯೇ ಆಳಲಿದೆ. ದೇಶದ ರಾಜಕೀಯವು ಅಭಿವೃದ್ಧಿ ಮತ್ತು ಆಶಾವಾದದತ್ತ ಸಾಗುತ್ತಿದೆ’ ಎಂದು ಭಾರೀ ಕರತಾಡನದ ಮಧ್ಯೆ ಹೇಳಿದರು. ಇನ್ನು ಪಕ್ಷವು ಕೆಲವು ಗೊತ್ತುವಳಿಗಳನ್ನೂ ಪಾಸು ಮಾಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.