
ಬಳ್ಳಾರಿ : ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಖಚಿತ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗಲಿದ್ದು, ಆಗ ರಾಜ್ಯದ್ದೂ ಸೇರಿ ದೇಶದ ರೈತರ ಎಲ್ಲ ರೈತರ ಸಾಲ ಮನ್ನಾ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ವಿ.ಎಸ್.ಉಗ್ರಪ್ಪ ಅವರ ಭಾರೀ ವಿಜಯದ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿ ಸಿದ್ದರಾಮಯ್ಯ ಈ ಘೋಷಣೆ ಮಾಡಿದರು.
ಕೇಂದ್ರದ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ರಾಜ್ಯದ ಬಿಜೆಪಿ ನಾಯಕರು ಹಾಗೂ ಸಂಸದರಿಗೂ ಸಹ ರೈತರ ಸಾಲ ಮನ್ನಾ ಮಾಡಿ ಎಂದು ಮೋದಿ ಬಳಿ ಹೇಳುವ ಧೈರ್ಯ ಇಲ್ಲ. ಲಕ್ಷಾಂತರ ಕೋಟಿ ಕೈಗಾರಿಕೆಗಳ ಸಾಲ ಮನ್ನಾ ಮಾಡಿರುವ ಪ್ರಧಾನಿ ಮೋದಿ ರೈತರ ವಿಚಾರದಲ್ಲಿ ಅಸಡ್ಡೆ ತೋರುತ್ತಿದ್ದಾರೆ ಎಂದು ಟೀಕಿಸಿದರು.
ರಾಹುಲ್ ಪ್ರಧಾನಿಯಾದಲ್ಲಿ ರೈತರ ಅಭ್ಯುದಯ ಆಗಲಿದೆ. ಅವರಿಗೆ ರೈತರ ಪರ ಕಾಳಜಿ ಇದ್ದು, ರೈತರ ಎಲ್ಲ ಸಾಲ ಮನ್ನಾ ಆಗಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಧಾನಸೌಧದ ಮೂರನೇ ಮಹಡಿ ಕನಸು ಇನ್ನೂ ಬೀಳುತ್ತಿದೆಯಂತೆ. ಸರ್ಕಾರ ಬೀಳುತ್ತದೆ. ನಾನು ಸಿಎಂ ಆಗುತ್ತೀನಿ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಯಡಿಯೂರಪ್ಪರ ಕನಸು ತಿರುಕನ ಕನಸಾಗಲಿದೆ. ಹಸಿರು ಟವೆಲ್ ಹಾಕಿದಾಕ್ಷಣ ಬಿಎಸ್‌ವೈ ಅವರೊಬ್ಬರೇ ರೈತನ ಮಗನೇ? ಹಾಗಾದರೆ ನಾವೆಲ್ಲ ಯಾರು? ನಾವೂ ರೈತರ ಮಕ್ಕಳಲ್ಲವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಆ ಪುಣ್ಯಾತ್ಮ (ಬಿಎಸ್‌ವೈ) ಇಬ್ಬರು ರೈತರನ್ನು ಗುಂಡಿಕ್ಕಿ ಕೊಲ್ಲಲು ಕಾರಣನಾದ ಎಂದು ಟೀಕಿಸಿದರು.
ಸಂಸ್ಕೃತಿ ಗೊತ್ತಿಲ್ಲ: ಶ್ರೀರಾಮುಲುಗೆ ರಾಜಕೀಯ ಸಂಸ್ಕೃತಿಯೇ ಗೊತ್ತಿಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಕಿಡಿಕಾರಿದರು. ಶ್ರೀರಾಮುಲು ಅವರಿಗೆ ಕೃತಜ್ಞತೆ ಹೇಳಿ ಅಭ್ಯಾಸವಿಲ್ಲ. ಮತದಾರರಿಗೆ ಕೃತಜ್ಞತೆ ಹೇಳುವುದು ನಮ್ಮ ಸಂಸ್ಕೃತಿ. ಆದರೆ, ಅವರ ಸಂಸ್ಕೃತಿಯೇ ಬೇರೆ ಎಂದರು.
ರಾಮುಲು ಬಗ್ಗೆ ಡಿಕೆಶಿ ವ್ಯಂಗ್ಯ: ಬಳ್ಳಾರಿ ಗೆಲುವು ನಮಗೆ ದೊಡ್ಡ ಶಕ್ತಿ ತಂದಿದೆ. ಶ್ರೀರಾಮುಲು ಅಣ್ಣನವರು ಚುನಾವಣೆ ಸಮಯದಲ್ಲಿ ‘ಶಾಂತಾ ಪಾರ್ಲಿಮೆಂಟ್‌ಗೆ ಡಿಕೆಶಿ ಜೈಲಿಗೆ’ ಎಂದು ಹೇಳುತ್ತಿದ್ದರು. ಶ್ರೀರಾಮುಲು ಅಣ್ಣನವರು ನ್ಯಾಯಾಧೀಶರಂತೆ ಅಂದು ತೀರ್ಪು ನೀಡಿದ್ದರು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
‘‘ಅಣ್ಣನವರು ಎಷ್ಟೇ ಕೆಣಕಿದರೂ ಅವರ ಗೆಳೆಯರು (ಜನಾರ್ದನ ರೆಡ್ಡಿ) ಅದೆಷ್ಟೇ ಮನುಷ್ಯತ್ವ ಮರೆತು ಮಾತನಾಡಿದರೂ ನಾವು ತಾಳ್ಮೆ ಕಳೆದುಕೊಳ್ಳಲಿಲ್ಲ. ಬಳ್ಳಾರಿ ಜಿಲ್ಲೆಯ ಮತದಾರರು ಸ್ವಾಭಿಮಾನಿಗಳು. ಅವರು ಕಾಂಗ್ರೆಸ್ ನಡೆಯನ್ನು ಗಮನಿಸಿ ನಮ್ಮನ್ನು ಆರಿಸಿದರು’’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ