ಬೆಚ್ಚಿ ಬೀಳಿಸಿದ ಅಂಡಮಾನಲ್ಲಿ ಆದಿವಾಸಿಗಳಿಗೆ ಬಲಿಯಾದ ಅಮೆರಿಕನ್ ಕಥೆ

By Web DeskFirst Published Nov 23, 2018, 7:16 AM IST
Highlights

ನಿಗೂಢವಾಗಿ ಜೀವನ ದೂಡುತ್ತಿರುವ ಅಂಡಮಾನ್‌- ನಿಕೋಬಾರ್‌ನ ಸೆಂಟಿನೆಲ್‌ ದ್ವೀಪದ ಆದಿವಾಸಿಗಳು ಅಮೆರಿಕದ ಕ್ರೈಸ್ತ ಮತ ಪ್ರಚಾರಕನೊಬ್ಬನನ್ನು ಬಾಣಗಳಿಂದ ಕೊಂದ ಘಟನೆ ಕುರಿತು ಬೆಚ್ಚಿ ಬೀಳಿಸುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. 

ಪೋರ್ಟ್‌ಬ್ಲೇರ್‌: ಬಾಹ್ಯ ಜಗತ್ತಿನ ಸಂಪರ್ಕದಿಂದ ದೂರವೇ ಉಳಿದು ನಿಗೂಢವಾಗಿ ಜೀವನ ದೂಡುತ್ತಿರುವ ಅಂಡಮಾನ್‌- ನಿಕೋಬಾರ್‌ನ ಸೆಂಟಿನೆಲ್‌ ದ್ವೀಪದ ಆದಿವಾಸಿಗಳು ಅಮೆರಿಕದ ಕ್ರೈಸ್ತ ಮತ ಪ್ರಚಾರಕನೊಬ್ಬನನ್ನು ಬಾಣಗಳಿಂದ ಕೊಂದ ಘಟನೆ ಕುರಿತು ರೋಚಕ ಮಾಹಿತಿ ಬೆಳಕಿಗೆ ಬಂದಿದೆ.

ಆದಿವಾಸಿಗಳು ಸುರಿಸಿದ ಬಾಣದ ಮಳೆಗೆ ಬಲಿಯಾದ ಅಮೆರಿಕದ ಮತ ಪ್ರಚಾರಕ ಜಾನ್‌ ಅಲ್ಲೆನ್‌ ಚಾವು (27) ಸಾವನ್ನಪ್ಪುವ ಮುನ್ನ ಬರೆದಿದ್ದ ಪತ್ರವೊಂದು ಈಗ ಪತ್ತೆಯಾಗಿದೆ.

ಸಾಯುವ ಒಂದು ದಿನ ಮೊದಲೇ ಸೆಂಟಿನೆಲ್‌ ದ್ವೀಪಕ್ಕೆ ಹೋಗಿ, ಆದಿವಾಸಿಗಳ ಬಾಣದ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿ ಜೀವ ಉಳಿಸಿಕೊಂಡು ಬಂದಿದ್ದ ಜಾನ್‌, ಅದೇ ರಾತ್ರಿ ದೋಣಿಯಲ್ಲಿ ಕುಳಿತು ಆದಿವಾಸಿಗಳ ಜತೆ ನಡೆದ ಭಯಾನಕ ಮುಖಾಮುಖಿಯನ್ನು ಬರೆದಿದ್ದ. ಅದನ್ನು ಮೀನುಗಾರರ ಕೈಗಿತ್ತು, ಮರುದಿನ ಮತ್ತದೇ ದ್ವೀಪಕ್ಕೆ ಹುಂಬತನದೊಂದಿಗೆ ಹೋಗಿದ್ದ ಎಂಬ ವಿಷಯ ಈಗ ಬಹಿರಂಗವಾಗಿದೆ.

ಅಂದು ಆಗಿದ್ದೇನು?:

ಸ್ಥಳೀಯ ಮೀನುಗಾರರಿಗೆ ಹಣದ ಆಮಿಷವೊಡ್ಡಿ ಸೆಂಟಿನೆಲ್‌ ದ್ವೀಪದ ಸನಿಹಕ್ಕೆ ದೋಣಿ ಮೂಲಕ ಜಾನ್‌ ಹೋಗಿದ್ದ. ಅಲ್ಲಿಂದ ಕಿರು ದೋಣಿಯಲ್ಲಿ ಸೆಂಟಿನೆಲ್‌ ದ್ವೀಪ ತಲುಪಿದ್ದ. ಭಾರತೀಯ ವಾಯುಪಡೆ, ಕರಾವಳಿ ಕಾವಲು ಪಡೆ ಕಣ್ತಪ್ಪಿಸಲು ರಾತ್ರಿ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದ. ದ್ವೀಪದಲ್ಲಿ ತನಗಾದ ಅನುಭವವನ್ನು ಜಾನ್‌ ಹೀಗೆ ಬರೆದುಕೊಂಡಿದ್ದಾನೆ.

‘ಆದಿವಾಸಿಗಳಿಗಾಗಿ ಮೀನು, ಫುಟ್‌ಬಾಲ್‌ನಂತಹ ಉಡುಗೊರೆ ಹೊತ್ತು ಸೆಂಟಿನೆಲ್‌ ದ್ವೀಪದಲ್ಲಿ ಇಳಿಯುತ್ತಿದ್ದಂತೆ ಆದಿವಾಸಿಗಳು ಎದುರಾದರು. ನನ್ನನ್ನು ಅವರು ಸ್ವಾಗತಿಸಲಿಲ್ಲ. ಅವರ ಕೆಲವೇ ಇಂಚು ಸಮೀಪಕ್ಕೆ ಹೋಗಿದ್ದೆ. ಅವರ ಮುಖ ದುಂಡಗಿದ್ದು, ಹಳದಿ ಬಣ್ಣ ಮೆತ್ತಿಕೊಂಡಿದ್ದರು. ವಯಸ್ಕರು 5ರಿಂದ 5.5 ಅಡಿ ಎತ್ತರವಿದ್ದರು. ಅವರಿಗೆ ಗಿಫ್ಟ್‌ ನೀಡಲು ಹೋದಾಗ ಅಂದಾಜು 10 ವರ್ಷ ಪ್ರಾಯದ ಒಬ್ಬ ಹುಡುಗ ಏಕಾಏಕಿ ಬಾಣ ಬಿಟ್ಟ. ಅದು ನನ್ನ ಎದೆಯತ್ತ ನುಗ್ಗಿಬಂತು. ಎದೆ ಮುಂಭಾಗ ಬೈಬಲ್‌ ಹಿಡಿದಿದ್ದೆ. ಬೈಬಲ್‌ಗೆ ಚುಚ್ಚಿಕೊಂಡಿತು. ಆ ಬಾಣ ತೀರಾ ಸಣ್ಣದಿತ್ತು. ಭಾರಿ ಹರಿತವಾಗಿತ್ತು. ಲೋಹದಿಂದ ತಯಾರಿಸಲಾಗಿತ್ತು.’

‘ಇದೇ ವೇಳೆ ಇಬ್ಬರು ಶಸ್ತ್ರಸಜ್ಜಿತ ಆದಿವಾಸಿಗಳು ಓಡುತ್ತಾ ಬಂದರು. ಅವರ ಬಳಿಯೂ ಬಿಲ್ಲು-ಬಾಣಗಳಿದ್ದವು. ನನ್ನ ಹೆಸರು ಜಾನ್‌, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ಯೇಸು ಕೂಡ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಕೂಗಿ ಹೇಳಿದೆ. ಅವರ ಬಳಿ ಇದ್ದ ಬಾಣಗಳನ್ನು ಕಂಡು ಗಾಬರಿಗೆ ಒಳಗಾದ ನಾನು ನನ್ನ ಬಳಿ ಇದ್ದ ಮೀನನ್ನು ಅವರತ್ತ ಎಸೆದೆ. 

ಆದರೂ ಅವರು ನನ್ನತ್ತ ಮುನ್ನುಗ್ಗಿ ಬರುತ್ತಿದ್ದರು. ಭಯಭೀತನಾಗಿ ಕಾಲಿಗೆ ಬುದ್ಧಿ ಹೇಳಿದೆ. ಕಿರುದೋಣಿಯ ಸಮೀಪಕ್ಕೆ ಬಂದರೆ ಅದು ಹಾಳಾಗಿತ್ತು. ಬಹುಶಃ ಆದಿವಾಸಿಗಳ ಮತ್ತೊಂದು ಗುಂಪು ಅದನ್ನು ಹಾನಿ ಮಾಡಿರಬಹುದು. ಹೀಗಾಗಿ ಈಜಿಕೊಂಡು ಮೊದಲೇ ನಿಲ್ಲಿಸಲಾಗಿದ್ದ ಮೀನುಗಾರರ ದೋಣಿ ತಲುಪಿದೆ’ ಎಂದು ಜಾನ್‌ ಬರೆದಿಟ್ಟಿದ್ದಾನೆ. ಇದನ್ನು ಆತ ಮೀನುಗಾರರ ಕೈಗೆ ನೀಡಿದ್ದ.

ಆದಿವಾಸಿಗಳಿಂದ ಜೀವ ಉಳಿಸಿಕೊಂಡು ಬಂದರೂ ಆತ ಅಲ್ಲಿಂದ ಮರಳಲಿಲ್ಲ. ಮರುದಿನವೇ ಮತ್ತೆ ಸೆಂಟಿನೆಲ್‌ ದ್ವೀಪಕ್ಕೆ ಹೋದ. ಅಲ್ಲಿ ಆದಿವಾಸಿಗಳ ಬಾಣದ ದಾಳಿಗೆ ಬಲಿಯಾದ ಎಂದು ಹೇಳಲಾಗುತ್ತಿದೆ.

ಆದರೆ ಜಾನ್‌ ಸಾವಿನ ಕುರಿತು ಬಗೆಬಗೆಯ ವಾದಗಳು ಕೇಳಿಬರುತ್ತಿವೆ. ಅಂಡಮಾನ್‌- ನಿಕೋಬಾರ್‌ ದ್ವೀಪದ ಡಿಜಿಪಿ ಅವರ ಪ್ರಕಾರ, ಫುಟ್‌ಬಾಲ್‌, ಬಲೆ, ಕತ್ತರಿ, ಔಷಧ ಕಿಟ್‌ನಂತಹ ಉಡುಗೊರೆಗಳನ್ನು ಹಿಡಿದು ಸೆಂಟಿನೆಲ್‌ ದ್ವೀಪಕ್ಕೆ ಜಾನ್‌ ಹೋಗುತ್ತಿದ್ದಂತೆ ಬಾಣಗಳಿಂದ ಆತನ ಮೇಲೆ ದಾಳಿ ನಡೆಯಿತು. ಜೀವ ಇದ್ದಾಗಲೇ ಆತನನ್ನು ಆದಿವಾಸಿಗಳು ಎಳೆದೊಯ್ದರು. ಇನ್ನೂ ಕೆಲವು ವರದಿಗಳ ಪ್ರಕಾರ, ಕೊಲ್ಲುವ ಮುನ್ನ ಜಾನ್‌ನನ್ನು ಎರಡು ದಿನ ಆದಿವಾಸಿಗಳು ಒತ್ತೆ ಇಟ್ಟುಕೊಂಡಿದ್ದರು.

click me!