ಜೆಡಿಎಸ್‌ ಅಂದ್ರೆ ಜನತಾ ದಳ ಸಂಘ ಪರಿವಾರ!

By Suvarna Web DeskFirst Published Mar 25, 2018, 7:55 AM IST
Highlights

ಮುಂದಿನ ವಿಧಾನಸಭೆ ಚುನಾವಣೆ ಎರಡು ವಿಚಾರಧಾರೆಗಳ ನಡುವಿನ ಹೋರಾಟವಾಗಿರಲಿದೆ. ಒಂದೆಡೆಗೆ ಬಿಜೆಪಿ, ಆರ್‌ಎಸ್‌ಎಸ್‌ ಇದ್ದರೆ ಇನ್ನೊಂದೆಡೆ ಕಾಂಗ್ರೆಸ್‌ ನಿಂತಿದೆ. ಇವೆರಡರ ಮಧ್ಯೆ ಇನ್ನೊಂದು ಬಿ ಟೀಂಇದೆ. ಅದು ಜೆಡಿಎಸ್‌. ಮೊದಲು ಜೆಡಿಎಸ್‌ನ ಎಸ್‌ಅಂದರೆ ಜಾತ್ಯತೀತ ಎಂಬುದಾಗಿತ್ತು.

ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ನಾಲ್ಕನೇ ಹಂತದ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಜೆಡಿಎಸ್‌ ಅನ್ನು ಗುರಿಯಾಗಿರಿಸಿಕೊಂಡು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್‌ ಅನ್ನು ಬಿಜೆಪಿಯ ‘ಬಿಟೀಂ’ ಎಂದು ಪುನರುಚ್ಚರಿಸಿದ ರಾಹುಲ್‌, ಜಾತ್ಯತೀತ ಜನತಾ ದಳ(ಜೆಡಿಎಸ್‌) ಎಂದರೆ ‘ಜನತಾ ದಳ ಸಂಘ ಪರಿವಾರ’ ಜರಿದಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಶನಿವಾರ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಅವರು ಜೆಡಿಎಸ್‌ನ ಭದ್ರಕೋಟೆಯಲ್ಲೇ ಆ ಪಕ್ಷದ ವಿರುದ್ಧ ಕಿಡಿಕಾರಿದರು. ಮುಂದಿನ ವಿಧಾನಸಭೆ ಚುನಾವಣೆ ಎರಡು ವಿಚಾರಧಾರೆಗಳ ನಡುವಿನ ಹೋರಾಟವಾಗಿರಲಿದೆ. ಒಂದೆಡೆಗೆ ಬಿಜೆಪಿ, ಆರ್‌ಎಸ್‌ಎಸ್‌ ಇದ್ದರೆ ಇನ್ನೊಂದೆಡೆ ಕಾಂಗ್ರೆಸ್‌ ನಿಂತಿದೆ. ಇವೆರಡರ ಮಧ್ಯೆ ಇನ್ನೊಂದು ‘ಬಿ ಟೀಂ’ ಇದೆ. ಅದು ಜೆಡಿಎಸ್‌. ಮೊದಲು ಜೆಡಿಎಸ್‌ನ ‘ಎಸ್‌’ ಅಂದರೆ ಜಾತ್ಯತೀತ ಎಂಬುದಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಆ ಪಕ್ಷಕ್ಕೆ ಹೊಸ ಹೆಸರು ಸಿಕ್ಕಿದೆ. ಅದು ‘ಜನತಾ ದಳ ಸಂಘ ಪರಿವಾರ’. ಈಗಾಗಲೇ ಜೆಡಿಎಸ್‌ ಮುಖಂಡರು ಬಿಜೆಪಿಗೆ ಸಹಾಯ ಮಾಡುವ ತೀರ್ಮಾನ ಮಾಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಲು ಹೊರಟಿರುವ ಜೆಡಿಎಸ್‌ಗೆ ಜನ ತಕ್ಕಪಾಠ ಕಲಿಸಬೇಕು ಎಂದರು.

ಬಸವಣ್ಣನವರ ತತ್ವ ಪಾಲಿಸುವ ಪಕ್ಷ: ಬಿಜೆಪಿಯು ಎ ಬಿ ಸಿ ಸೇರಿದಂತೆ ಯಾವುದೇ ಟೀಂನೊಂದಿಗೆ ಸೇರಿಕೊಂಡು ಹೋರಾಟ ನಡೆಸಿದರೂ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಕರ್ನಾಟಕದ ನೆಲದಲ್ಲಿ ಬಸವಣ್ಣ ಅವರು ‘ನಾವೆಲ್ಲಾ ಒಂದೇ’ ಎನ್ನುವ ಸಂದೇಶವನ್ನು ಇಡೀ ರಾಷ್ಟ್ರಕ್ಕೆ ನೀಡಿದರು. ಕಾಂಗ್ರೆಸ್‌ ಪಕ್ಷ ಬಸವಣ್ಣ ಸಂದೇಶ, ಚಿಂತನೆಗಳನ್ನು ಪಾಲಿಸುವ ಪಕ್ಷವಾಗಿದೆ ಎಂದರು.

ನುಡಿದಂತೆ ನಡೆಯದ ಜೆಡಿಎಸ್‌: ಒಂದು ಕಡೆ ಜೆಡಿಎಸ್‌ ತನ್ನನ್ನು ತಾನು ಜಾತ್ಯತೀತ ಎಂದು ಕರೆದುಕೊಳ್ಳುತ್ತದೆ. ಆದರೆ, ಅದೀಗ ಬಿಜೆಪಿಯ ಬಿ ಟೀಂ ಆಗಿ ಆ ಪಕ್ಷಕ್ಕೆ ಸಹಾಯ ಮಾಡಲು ಹೊರಟಿದೆ. ಜೆಡಿಎಸ್‌ನವರು ಹೇಳುವುದೇ ಒಂದು ಮಾಡುವುದೇ ಇನ್ನೊಂದು ಎಂಬಂತಾಗಿದೆ. ಜೆಡಿಎಸ್‌ ನಾಯಕರು ಬಸವಣ್ಣ ಹೇಳಿದಂತೆ ನುಡಿದಂತೆ ನಡೆಯುವ ಕುರಿತು ಚಿಂತನೆ ನಡೆಸಬೇಕು ಎಂದು ರಾಹುಲ್‌ ಕಿಡಿಕಾರಿದರು.

ಇದೇ ವೇಳೆ, ಬಿಜೆಪಿ ಮತ್ತು ಜೆಡಿಎಸ್‌ನವರು ಹೋದಲ್ಲೆಲ್ಲ ಸುಳ್ಳನ್ನೇ ಹೇಳುತ್ತಾರೆ ಎಂದ ರಾಹುಲ್‌, ಪ್ರಧಾನಿಯಾದರೆ ಕಪ್ಪು ಹಣ ತಂದು ಪ್ರತಿ ಖಾತೆಗೆ .15 ಲಕ್ಷ ಹಾಕುವುದಾಗಿ ಮೋದಿ ಹೇಳಿದ್ದರು. ಯಾರದ್ದಾದರೂ ಖಾತೆಗೆ ಹದಿನೈದು ರುಪಾಯಿಯನ್ನಾದರೂ ಹಾಕಿದ್ದಾರಾ? ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಚಾಮರಾಜನಗರದಲ್ಲಿ ಮಾತನಾಡಿದ ರಾಹುಲ್‌, ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ಮೋದಿ ಅವರು ಪ್ರಧಾನಿಯಾಗುವ ಮೊದಲು ವರ್ಷಕ್ಕೆ 2 ಕೋಟಿ ಹುದ್ದೆ ಸೃಷ್ಟಿಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಮಾಡಲಿಲ್ಲ. ಅದು ಪೊಳ್ಳು ಭರವಸೆಯಾಗಿದೆ. ಇದರ ಬಗ್ಗೆ ನಿಮ್ಮ ವಿಚಾರಧಾರೆ ಏನು? ನೀವು ಭರವಸೆ ಈಡೇರಿಸುತ್ತೀರಾ ಎಂದು ಪ್ರಶ್ನಿಸಿದಳು. ಇನ್ನೂ ಮತ್ತೊಬ್ಬ ವಿದ್ಯಾರ್ಥಿನಿ ಜಿಎಸ್‌ಟಿಯಿಂದ ಏನು ಪ್ರಯೋಜನ? ಬೇರೆ ಬೇರೆ ಟ್ಯಾಕ್ಸ್‌ ಹಾಕುತ್ತಾರೆ ಇದರಿಂದ ನಮಗೆ ಏನು ಅನುಕೂಲ ಎಂದು ಪ್ರಶ್ನಿಸಿದಳು. 18ರಿಂದ 20 ವರ್ಷದ ವಿದ್ಯಾರ್ಥಿನಿಗೆ ಅರ್ಥವಾಗುವುದು ಪ್ರಧಾನಿ ಅವರಿಗೇಕೆ ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಸಂವಿಧಾನ ಬದಲಾವಣೆಗೆ ಬಿಡಲ್ಲ: ನಮ್ಮ ದೇಶದ ಸಂವಿಧಾನ ಬದಲಾವಣೆಗೆ ಬಿಜೆಪಿ ಚಿಂತಿಸುತ್ತಿದೆ. ಕಾಂಗ್ರೆಸ್‌ ಪಕ್ಷ ಸಂವಿಧಾನವನ್ನು ರಕ್ಷಿಸುತ್ತದೆ. ಡಾ.ಬಿ.ಆರ್‌. ಅಂಬೇಡ್ಕರ್‌ ನೀಡಿದ ಸಂವಿಧಾನವನ್ನು ನಾವು ಬದಲಾವಣೆ ಮಾಡಲು ಬಿಡುವುದಿಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆಗೆ ಟಾಂಗ್‌ ನೀಡಿದರು.

click me!