
ಬೆಂಗಳೂರು(ಮಾ.25): ಹೈಕಮಾಂಡ್ ಆಣತಿಯಾಗಿದೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಮೇಲೆ ಸ್ಪರ್ಧಿಸಲಿರುವ ಸುಮಾರು 100ಕ್ಕೂ ಹೆಚ್ಚು (ಬಹುಶಃ ಸುಮಾರು 130) ಅಭ್ಯರ್ಥಿಗಳ ಹೆಸರನ್ನು ಒಳಗೊಂಡ ಕಾಂಗ್ರೆಸ್ ಪ್ರಥಮ ಪಟ್ಟಿಏಪ್ರಿಲ್ ಮೊದಲ ವಾರದಲ್ಲಿ ಪ್ರಕಟವಾಗುವುದು ಬಹುತೇಕ ಖಚಿತ.
ಮೈಸೂರು ಭಾಗದಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾ.30ರೊಳಗೆ ಪ್ರಥಮ ಪಟ್ಟಿಯನ್ನು ಆಖೈರುಗೊಳಿಸಿ ಹೈಕಮಾಂಡ್ ಅವಗಾಹನೆಗೆ ಕಳುಹಿಸುವಂತೆ ಶನಿವಾರ ರಾಜ್ಯ ಕಾಂಗ್ರೆಸ್ ನಾಯಕತ್ವಕ್ಕೆ ಕಟ್ಟಾಜ್ಞೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಮೊದಲ ಪಟ್ಟಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಆಖೈರುಗೊಳಿಸಲು ಸೋಮವಾರದಿಂದ ಮೂರು ದಿನಗಳವರೆಗೂ ದೇವನಹಳ್ಳಿ ಸಮೀಪದ ರೆಸಾರ್ಟ್ನಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹಾಲಿ ಶಾಸಕರಿರುವ ಕ್ಷೇತ್ರಗಳು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು (ಬಹುತೇಕ 130) ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಸಿವೆ.
ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿಯು ಇತ್ತೀಚೆಗೆ ದೇವನಹಳ್ಳಿಯಲ್ಲಿ ಸಭೆ ಸೇರಿ ಹಾಲಿ ಶಾಸಕರು ಇರದ ಕ್ಷೇತ್ರಗಳಿಗೆ ಪ್ಯಾನೆಲ್ ಸಿದ್ದಪಡಿಸುವ ಪ್ರಯತ್ನ ನಡೆಸಿತ್ತು. ಆದರೆ, ತಮ್ಮ ಹಿಂಬಾಲಕರಿಗೆ ಟಿಕೆಟ್ ಕೊಡಿಸಬೇಕು ಎಂಬ ಉಮೇದಿಗೆ ಬಿದ್ದ ಹಿರಿಯ ನಾಯಕರ ಧೋರಣೆಯಿಂದಾಗಿ ಹಲವು ಕ್ಷೇತ್ರಗಳ ಹೆಸರು ಅಂತಿಮಗೊಳಿಸುವಾಗ ತೀವ್ರ ಮಾತಿನ ಚಕಮಕಿಯೂ ನಡೆದಿತ್ತು. ವಿಶೇಷವಾಗಿ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ಹಿರಿಯ ನಾಯಕ ವೀರಪ್ಪ ಮೊಯ್ಲಿ ನಡುವೆ ವಾಕ್ಸಮರ ನಡೆದಿತ್ತು. ಅಲ್ಲದೆ, ಡಿ.ಕೆ. ಶಿವಕುಮಾರ್ ಹಾಗ ಮಹದೇವಪ್ಪ ನಡುವೆಯೂ ಮಾತಿನ ಚಕಮತಿ ನಡೆದಿತ್ತು.
ಇದರ ಪರಿಣಾಮವಾಗಿ ವೀರಪ್ಪ ಮೊಯ್ಲಿ ಅವರ ಅಕೌಂಟ್ನಿಂದ ಲೋಕೋಪಯೋಗಿ ಸಚಿವರನ್ನು ಗುರಿಯಾಗಿಸಿ ಮಾಡಲಾದ ಟ್ವೀಟ್ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟುಸುದ್ದಿಯೂ ಮಾಡಿ ಪಕ್ಷಕ್ಕೆ ಮುಜುಗರ ತಂದಿತ್ತು.
ಟಿಕೆಟ್ ತಪ್ಪುವ ಶಾಸಕರ ಕುಟುಂಬಸ್ಥರಿಗೆ ಟಿಕೆಟ್?
ಸೋಮವಾರದಿಂದ ಆರಂಭವಾಗುವ ಚುನಾವಣಾ ಸಮಿತಿ ಸಭೆಯಲ್ಲೂ ಹಿರಿಯ ಮುಖಂಡರ ನಡುವೆ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ, ಹಾಲಿ ಇರುವ ಎಲ್ಲಾ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಬೇಕು ಎಂದು ಇದುವರೆಗೂ ತೀರ್ಮಾನವಾಗಿಲ್ಲ. ಕೆಲ ಹಿರಿಯ ನಾಯಕರು ಹಾಲಿ ಶಾಸಕರ ತಂಟೆಗೆ ಹೋಗುವುದು ಬೇಡ. ಅವರಿಗೆ ಟಿಕೆಟ್ ನೀಡೋಣ ಎಂದು ವಾದಿಸುತ್ತಿದ್ದಾರೆ. ಆದರೆ, ಅನಾರೋಗ್ಯ ಪೀಡಿತರು ಹಾಗೂ ಕ್ಷೇತ್ರದಲ್ಲಿ ತೀವ್ರ ವಿರೋಧ ಹೊಂದಿರುವ ಕೆಲ ಶಾಸಕರ ಟಿಕೆಟ್ ನೀಡಬಾರದು ಎಂಬ ಒತ್ತಡವೂ ಇದೆ. ಮೂಲಗಳ ಪ್ರಕಾರ ಅನಾರೋಗ್ಯದಿಂದ ನರಳುತ್ತಿರುವ ಹಾಗೂ ತೀರಾ ವಯಸ್ಸಾದ ಸುಮಾರು 10 ರಿಂದ 15 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪುವ ಸಾಧ್ಯತೆಯಿದೆ.
ಹೀಗಾದಾಗ ಹಾಲಿ ಶಾಸಕರು ಪಕ್ಷದ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ ಇಂತಹ ಶಾಸಕರು ಯಾರಿಗೆ ಸೂಚಿಸುತ್ತಾರೋ ಅವರಿಗೆ ಟಿಕೆಟ್ ಕೊಡಬೇಕು ಎಂಬ ವಾದ ಹುಟ್ಟಿಕೊಂಡಿದೆ. ಹೀಗಾಗಿ ಟಿಕೆಟ್ ತಪ್ಪುವ ಶಾಸಕರ ಪತ್ನಿ, ಪುತ್ರ ಅಥವಾ ಸಹೋದರರಿಗೆ ಟಿಕೆಟ್ ನೀಡುವ ಮೂಲಕ ಬಂಡಾಯ ಹುಟ್ಟಿಕೊಳ್ಳದಂತೆ ತಡೆಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
5000 ಅಂತರದಲ್ಲಿ ಸೋಲುಂಡವರಿಗೂ ಟಿಕೆಟ್?
ಅದೇ ರೀತಿ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಅಂದರೆ ಸುಮಾರು 5 ಸಾವಿರ ಮತಗಳ ಅಂತರದಲ್ಲಿ ಸೋಲುಂಡವರಿಗೂ ಈ ಬಾರಿ ನೇರವಾಗಿ ಪಕ್ಷದ ಟಿಕೆಟ್ ನೀಡಬೇಕು ಎಂಬ ವಾದವಿದೆ. ಆದರೆ, ಇಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ಸಾಧ್ಯತೆ ಈ ಬಾರಿ ಹೆಚ್ಚಿದೆ ಎಂದು ಕಾಂಗ್ರೆಸ್ ನಾಯಕತ್ವ ನಡೆಸಿದ ಸಮೀಕ್ಷೆಯ ವರದಿ ಬಂದಿದೆ. ಹೀಗಾಗಿ ಇಂತಹ ಕ್ಷೇತ್ರಗಳಲ್ಲಿ ಹಿರಿಯ ನಾಯಕರ ಹಿಂಬಾಲಕರು ಟಿಕೆಟ್ಗಾಗಿ ಲಾಬಿ ನಡೆಸಿದ್ದಾರೆ. ಆದ್ದರಿಂದ ಈ ವಿಚಾರವೂ ಸೋಮವಾರದಿಂದ ಆರಂಭವಾಗುವ ಸಭೆಯಲ್ಲಿ ಕಿಚ್ಚು ಹಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ತಂದೆ-ಮಕ್ಕಳ ಬೇಡಿಕೆ ಹೈಕಮಾಂಡ್ ಹೊಣೆಗೆ
ಈ ಬಾರಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿರುವುದು ದೊಡ್ಡ ಸಂಖ್ಯೆಯಲ್ಲಿ ಹಿರಿಯ ನಾಯಕರು ಹಾಗೂ ಅವರ ಪುತ್ರರಿಗೆ ಟಿಕೆಟ್ ನೀಡುವ ವಿಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆರಂಭಗೊಂಡು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡ ಎಚ್.ವೈ. ಮೇಟಿಯವರ ವರೆಗೆ ಹಲವರು ತಮಗೂ ಹಾಗೂ ತಮ್ಮ ಕರುಳ ಕುಡಿಗಳಿಗೂ ಟಿಕೆಟ್ ಕೇಳುತ್ತಿದ್ದಾರೆ. ಹಾಗಂತ ಕೇಳಿದ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಒಬ್ಬರಿಗೆ ನೀಡಿ, ಮತ್ತೊಬ್ಬರಿಗೆ ಟಿಕೆಟ್ ತಪ್ಪಿಸಿದರೆ ಅವರು ಬಂಡೆಳುವ ಸಂಭವವೇ ಹೆಚ್ಚು. ಹೀಗಾಗಿ ಈ ವಿಚಾರವನ್ನು ಸಂಪೂರ್ಣವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬಿಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ.
ಒಟ್ಟಿನಲ್ಲಿ ಮೊದಲ ಹಂತದಲ್ಲಿ ತೀರಾ ಪೈಪೋಟಿಯಿರುವ ಕ್ಷೇತ್ರಗಳನ್ನು ಹೊರತುಪಡಿಸಿ ಯಾವುದೇ ಗೊಂದಲವಿಲ್ಲದ ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.