ರಫೇಲ್‌ ವಿವರ ಕೇಳಿದ ಸುಪ್ರೀಂ ಕೋರ್ಟ್‌

By Web DeskFirst Published Oct 11, 2018, 8:31 AM IST
Highlights

ರಫೇಲ್‌ ನಿರ್ಧಾರದ ಬಗ್ಗೆ ವಿವರ ಕೇಳಿದ ಸುಪ್ರೀಂ ಕೋರ್ಟ್‌ | ಬೆಲೆ, ತಾಂತ್ರಿಕ ಅಂಶದ ಮಾಹಿತಿ ಬೇಡ ಎಂದ ನ್ಯಾಯಾಲಯ | 

ನವದೆಹಲಿ (ಅ. 11): ಫ್ರಾನ್ಸ್‌ ಕಂಪನಿಯಿಂದ ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿರುವಾಗಲೇ, ರಫೇಲ್‌ ಯುದ್ಧ ವಿಮಾನ ಖರೀದಿಸಲು ನಿರ್ಧಾರ ಕೈಗೊಂಡ ಪ್ರಕ್ರಿಯೆಯ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಅ.29ರೊಳಗೆ ಸಲ್ಲಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ.

ಆದರೆ ರಫೇಲ್‌ ಯುದ್ಧ ವಿಮಾನದ ಬೆಲೆ ಎಷ್ಟು, ಅದರ ತಾಂತ್ರಿಕ ಅಂಶಗಳ ಮಾಹಿತಿಯನ್ನು ಸಲ್ಲಿಸಬೇಕಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ಹೇಳಿದೆ.

ರಫೇಲ್‌ ಯುದ್ಧ ವಿಮಾನ ಖರೀದಿ ಕುರಿತು ಭ್ರಷ್ಟಾಚಾರ ಆರೋಪ ಮಾಡಿ ಸಲ್ಲಿಕೆ ಮಾಡಲಾಗಿರುವ ಅರ್ಜಿಯಲ್ಲಿರುವ ವಾದಗಳನ್ನು ಪರಿಗಣಿಸಿಲ್ಲ. ಕೇಂದ್ರ ಸರ್ಕಾರಕ್ಕೂ ಅಧಿಕೃತವಾಗಿ ನೋಟಿಸ್‌ ನೀಡುವುದಿಲ್ಲ. ತಾಂತ್ರಿಕ ಅಂಶ ಹಾಗೂ ಬೆಲೆ ಕುರಿತ ಮಾಹಿತಿ ಹೊರತಾಗಿ ರಫೇಲ್‌ ಯುದ್ಧ ವಿಮಾನ ಖರೀದಿ ಕುರಿತು ಕೈಗೊಂಡ ನಿರ್ಧಾರದ ಬಗ್ಗೆ ವಿವರ ನೀಡಿ. ಇದು ಖರೀದಿ ಪ್ರಕ್ರಿಯೆಯ ಕ್ರಮಬದ್ಧತೆ ಬಗ್ಗೆ ನಾವು ಖಚಿತಪಡಿಸಿಕೊಳ್ಳಲು ಎಂದು ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಹಾಗೂ ಕೆ.ಎಂ. ಜೋಸೆಫ್‌ ಅವರಿದ್ದ ಪೀಠ ಹೇಳಿದೆ.

ಈ ವೇಳೆ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ರಫೇಲ್‌ ಒಪ್ಪಂದ ಕುರಿತಾದ ವಿವರಗಳನ್ನು ರಾಷ್ಟ್ರೀಯ ಭದ್ರತೆ ಹಿನ್ನೆಲೆಯಲ್ಲಿ ಯಾರಿಗೂ ತೋರಿಸಲಾಗದು ಎಂದು ತಿಳಿಸಿದರು.

ರಫೇಲ್‌ ಯುದ್ಧ ವಿಮಾನಕ್ಕೆ ದುಬಾರಿ ಮೊತ್ತವನ್ನು ಕೇಂದ್ರ ಸರ್ಕಾರ ಪಾವತಿಸಿದೆ ಎಂದು ಆರೋಪಿಸುತ್ತಾ ಬಂದಿರುವ ಕಾಂಗ್ರೆಸ್‌, ವಿಮಾನದ ಬೆಲೆಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದೆ. ಈ ಒಪ್ಪಂದ ಕುರಿತು ಸುಪ್ರೀಂಕೋರ್ಟಿನಲ್ಲಿ ಸಾಕಷ್ಟುಅರ್ಜಿಗಳು ಕೂಡ ಸಲ್ಲಿಕೆಯಾಗಿವೆ.

ಜೆಪಿಸಿ ತನಿಖೆಗೆ ಕಾಂಗ್ರೆಸ್‌ ಆಗ್ರಹ:

ರಫೇಲ್‌ ಒಪ್ಪಂದ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿಯನ್ನು ದಂಡಿಸುವ ಮೂಲಕ ಕೇಂದ್ರ ಸರ್ಕಾರ ಇಡೀ ಪ್ರಕ್ರಿಯೆಯನ್ನೇ ತಿರುಚುತ್ತಿದೆ. ಈ ಒಪ್ಪಂದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯಾಗಬೇಕು ಎಂದು ಕಾಂಗ್ರೆಸ್ಸಿನ ವಕ್ತಾರ ಎಸ್‌. ಜೈಪಾಲ ರೆಡ್ಡಿ ಆಗ್ರಹಿಸಿದ್ದಾರೆ.

ಕೆಸರೆರಚಾಟ: ಈ ನಡುವೆ ಸುಪ್ರೀಂ ಸೂಚನೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಸುಪ್ರೀಂ ಆದೇಶವು, ಖರೀದಿಯಲ್ಲಿ ಹಗರಣ ನಡೆದಿದೆ ಎಂಬುದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್‌ ಹೇಳಿಕೊಂಡಿದ್ದರೆ, ಖರೀದಿ ಬೆಲೆ ಬಗ್ಗೆ ನಾವು ಪರಿಶೀಲನೆ ಮಾಡುವುದಿಲ್ಲ ಎಂಬ ಕೋರ್ಟ್‌ ಸ್ಪಷ್ಟನೆ, ಕಾಂಗ್ರೆಸ್‌ ಆರೋಪಕ್ಕೆ ಹಾಕಿದ ತಪರಾಕಿ ಎಂದು ಬಿಜೆಪಿ ತಿರುಗೇಟು ನೀಡಿದೆ.

click me!