ಅಲ್ಪಸಂಖ್ಯಾತರ ಮನಗೆಲ್ಲಲು ಪ್ರೊಗ್ರೆಸ್ ಪಂಚಾಯತ್

By Internet DeskFirst Published Sep 28, 2016, 11:22 AM IST
Highlights

ನವದೆಹಲಿ(ಸೆ.28): ದೇಶದ ಮುಸ್ಲಿಮರ ಮತ್ತು ಅಲ್ಪಸಂಖ್ಯಾತರ ಬಾಹುಳ್ಯವಿರುವ ಪ್ರದೇಶದಲ್ಲಿ ಆ ಸಮುದಾಯದ ಗಮನ ಸೆಳೆಯಲು ಕೇಂದ್ರ ಸರ್ಕಾರ ‘ಪ್ರಗತಿ ಪಂಚಾಯತ್‌’ ನಡೆಸಲು ಚಿಂತಿಸಿದೆ. ಕಲ್ಲಿಕೋಟೆಯಲ್ಲಿ ಕೆಲ ದಿನಗಳ ಹಿಂದೆ ಮುಕ್ತಾಯವಾದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ‘‘ಮುಸ್ಲಿಮರನ್ನು ವೋಟ್‌ ಮಾರುಕಟ್ಟೆಯ ಸರಕಿನಂತೆ ನೋಡಬೇಡಿ’’ ಎಂದು ಕರೆ ನೀಡಿದ ಬಳಿಕ ಈ ವಿಶೇಷ ಕಾರ್ಯಕ್ರಮದ ಘೋಷಣೆಯಾಗಿದೆ.

ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಹಾಯಕ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಗುರುವಾರ ಹರ್ಯಾಣದ ಮೇವಾತ್‌ನಲ್ಲಿ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಎನ್‌ಡಿಎ ಸರ್ಕಾರದ ಬಗ್ಗೆ ಇರುವ ತಪ್ಪು ತಿಳಿವಳಿಕೆ ತೊಡೆದು ಹಾಕಲು ಕೇಂದ್ರ ಇಂಥ ಕಾರ್ಯಕ್ರಮಕ್ಕೆ ಮುಂದಾಗಿದೆ. ಮುಸ್ಲಿಂ ವಿರೋಧಿ ಹಣೆಪಟ್ಟಿಕಳಚಿಕೊಳ್ಳಲು ಬಿಜೆಪಿ ಸರ್ಕಾರ ಇಂಥ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಮುಸ್ಲಿಮರು ಸರ್ಕಾರದಿಂದ ದೂರವುಳಿಯಲು ಯತ್ನಿಸಿದರೆ, ಸರ್ಕಾರವೇ ಅವರ ಬಳಿಯೇ ಸಾಗುತ್ತದೆ ಎಂಬ ಸಂದೇಶ ನೀಡಲು ಚಿಂತಿಸಿದೆ. ‘‘ಸರ್ಕಾರ ಇದನ್ನು ಮುಸ್ಲಿಂ ಪಂಚಾಯತ್‌ ಎಂದು ಹೇಳಲು ಬಯಸುತ್ತಿಲ್ಲ. ಸಮುದಾಯದ ಅಭಿವೃದ್ಧಿ ಇತ್ಯರ್ಥ ಮಾಡುವುದು ಮತ್ತು ಸಮಾಜದ ಮುಖ್ಯವಾಹಿನಿಗೆ ತರುವ ಗುರಿ ಇದರ ಉದ್ದೇಶವಾಗಿದೆ’’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶೀಘ್ರದಲ್ಲೇ ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಇದೇ ಮಾದರಿ ಕಾರ್ಯಕ್ರಮ ನಡೆಯಲಿದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಈ ಪ್ರಗತಿ ಪಂಚಾಯತ್‌ನ ಉಸ್ತುವಾರಿ ನಿರ್ವಹಿಸಲಿದ್ದಾರೆ. ‘‘ಈ ಯೋಜನೆ ಹಿಂದಿನ ಯಾವುದೇ ಯೋಜನೆಗಳಂತಲ್ಲ. ಇದು ಓಟಿಗಾಗಿ ಅಲ್ಲ. ಶಾಲೆ, ನರ್ಸಿಂಗ್‌ ಹೋಂಗಳು, ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳು ಮುಂತಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಯತ್ನ ಇದಾಗಿದೆ’’ ಎಂದು ನಖ್ವಿ ಹೇಳಿದ್ದಾರೆ.

click me!