ಹಬ್ಬಗಳ ಸರಣಿಗೆ ಸಿಗಲಿದೆ ಭಾರಿ ಡಿಸ್ಕೌಂಟ್

By Internet DeskFirst Published Sep 28, 2016, 10:57 AM IST
Highlights

ನವದೆಹಲಿ(ಸೆ.28): ಇನ್ನೇನು ಕೆಲವೇ ದಿನಗಳಲ್ಲಿ ದಸರಾ, ದೀಪಾವಳಿ ಹಬ್ಬ ಬರಲಿದೆ. ಅದಕ್ಕೆ ಪೂರಕವಾಗಿ ಆನ್‌ಲೈನ್‌ ಸ್ಟೋರ್‌ಗಳು ಮತ್ತು ಇ-ಕಾಮರ್ಸ್‌ ಕ್ಷೇತ್ರದಲ್ಲಿ ಭರಪೂರ ಪ್ರಮಾಣದಲ್ಲಿ ರಿಯಾಯಿತಿ, ಆಫರ್‌ಗಳು, ಇಎಂಐ ಆಯ್ಕೆಗಳು ಧಾಂಗುಡಿ ಇಡಲಿವೆ. ಗ್ರಾಹಕರಿಗೆ, ಮಾರಾಟಗಾರರಿಗೆ ಮತ್ತು ಸಾಲ ನೀಡುವವರಿಗೆ ಇದರಿಂದ ಹೇರಳ ಲಾಭವಾಗಲಿದೆ ಎಂದು ‘ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಕ್ರೆಡಿಟ್‌ ಕಾರ್ಡ್‌ನಲ್ಲಿ ಝೀರೋ ಪರ್ಸೆಂಟ್‌ ಇಎಂಐ ಆಯ್ಕೆ ಇಲ್ಲ ಎಂದು 2013ರಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್‌ ಈಗಾಗಲೇ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ನಿಯಮಗಳು ರೂಪಿತವಾಗಲಿವೆ. ಒಂದು ವೇಳೆ ಇಎಂಐ ಅನ್ನು ಬ್ಯಾಂಕ್‌ಗಳಿಗೆ ಪಾವತಿ ಮಾಡಲು ಬಾಕಿ ಇದ್ದರೆ ಅದನ್ನು ಗ್ರಾಹಕರಿಗೆ ಉಡುಗೊರೆ ಎಂದು ನೀಡಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಅದಕ್ಕಾಗಿ ಗ್ರಾಹಕರು ಸಂಸ್ಕರಣಾ ಶುಲ್ಕ ಮತ್ತಿತರ ಶುಲ್ಕಗಳನ್ನು ವಿಧಿಸಲಾಗುತ್ತಿಲ್ಲ.

ಫ್ಲಿಪ್‌ಕಾರ್ಟ್‌ ಮತ್ತು ಫ್ಯೂಚರ್‌ ಗ್ರೂಪ್‌ ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತು ಇತರ ಖಾಸಗಿ ಬ್ಯಾಂಕ್‌ಗಳ ಜತೆಗೂಡಿ ಝೀರೋ ಪರ್ಸೆಂಟ್‌ ಸ್ಕಿಮ್‌ ಅನ್ನು ಜಾರಿಗೊಳಿಸಿವೆ. ಆದರೆ ಅವುಗಳು ಹೊಸತಾಗಿ ಜಾರಿ ಮಾಡಿದ ಯೋಜನೆ ಈ ಹಿಂದೆ ಇದ್ದ ಮಾದರಿಯಲ್ಲಿಯೇ ಇವೆ ಎಂದು ಬ್ಯಾಂಕೊಂದರ ಅಧಿಕಾರಿಯೊಬ್ಬರು ಹೇಳುತ್ತಾರೆ. ಅದನ್ನೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳಾದ ಬಜಾಜ್‌ ಫೈನಾನ್ಸ್‌ ಮತ್ತಿತರ ಸಂಸ್ಥೆಗಳೂ ಇದೇ ಯೋಜನೆ ಅನುಸರಿಸುತ್ತಿವೆ.

ರಿಟೈಲ್‌ಗಳು, ಆನ್‌ಲೈನ್‌ ಸ್ಟೋರ್‌ಗಳು ಕ್ರೆಡಿಟ್‌ ಕಾರ್ಡ್‌ ಹೊಂದಿರುವ ಗ್ರಾಹಕರಿಗಾಗಿ ಶೇ.12-ಶೇ.15ರಷ್ಟು ಬಡ್ಡಿದರ ವಿಧಿಸುತ್ತವೆ. ಫ್ಯೂಚರ್‌‌ ಗ್ರೂಪ್‌ನ ಮೂರು ವಿಭಾಗಗಳಾಗಿರುವ ಬಿಗ್‌ ಬಜಾರ್‌, ಇ-ಜೋನ್‌ ಮತ್ತು ಸೆಂಟ್ರಲ್‌ಗಳು .5 ಸಾವಿರಕ್ಕಿಂತ ಹೆಚ್ಚಿನ ಖರೀದಿಗೆ ವಿನಾಯಿ ನೀಡುವುದಾಗಿ ಪ್ರಕಟಿಸಿವೆ. ಫ್ಲಿಪ್‌ಕಾರ್ಟ್‌ ಕೂಡ ಆಯ್ದ ಖರೀದಿದಾರರಿಗೆ . 4 ಸಾವಿರಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ಖರೀದಿಸಿದರೆ ಆರು, ಒಂಭತ್ತು ಮತ್ತು 12 ತಿಂಗಳಲ್ಲಿ ಅದನ್ನು ಪಾವತಿ ಮಾಡಲು ಅವಕಾಶ ನೀಡಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್‌ ಹೂಡಿಕೆ?

ದೇಶದ ಇ-ಕಾಮರ್ಸ್‌ ಕ್ಷೇತ್ರದ ದಿಗ್ಗಜ ಫ್ಲಿಪ್‌ಕಾರ್ಟ್‌ನಲ್ಲಿ ಬಂಡವಾಳ ಹೂಡುವ ಬಗ್ಗೆ ವಾಲ್‌ಮಾರ್ಟ್‌ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ ‘ಫೈನಾನ್ಶಿಯಲ್‌ ಟೈಮ್ಸ್‌’ ವರದಿ ಮಾಡಿದೆ. ಸದ್ಯ ಈ ಮಾತುಕತೆ ಕೇವಲ ಪ್ರಾಥಮಿಕ ಹಂತದಲ್ಲಿದೆ. ದೇಶದ ಇ-ಕಾಮರ್ಸ್‌ ಕ್ಷೇತ್ರದಲ್ಲಿ ಫ್ಲಿಪ್‌ಕಾರ್ಟ್‌ ಮುಂಚೂಣಿಯಲ್ಲಿದ್ದು, ಅಮೆರಿಕ ಮೂಲದ ಅಮೆಜಾನ್‌ ಅದರ ಹಿಂದೆ ಇದೆ. ಒಂದು ವೇಳೆ ಈ ಡೀಲ್‌ ಯಶಸ್ವಿಯಾದರೆ ಫ್ಲಿಪ್‌ಕಾರ್ಟ್‌ಗೆ ಮತ್ತು ವಾಲ್‌ಮಾರ್ಟ್‌ಗೆ ನೆರವಾಗಲಿದೆ. ವಾಲ್‌ಮಾರ್ಟ್‌ಗೆ ಭಾರತದಲ್ಲಿ ತನ್ನದೇ ದೇಶದ ಪ್ರತಿಸ್ಪರ್ಧಿ ಕಂಪನಿ ಅಮೆಜಾನ್‌ ವಿರುದ್ಧ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಲು ಅನುಕೂಲವಾಗಲಿದೆ. ಈಗಾಗಲೇ ಚಿಲ್ಲರೆ ಮಾರುಕಟ್ಟೆಕ್ಷೇತ್ರದಲ್ಲಿ ದೇಶದಲ್ಲಿ ಮಳಿಗೆಗಳನ್ನು ತೆರೆದಿರುವ ವಾಲ್‌ಮಾರ್ಟ್‌ ಫ್ಲಿಪ್‌ಕಾರ್ಟ್‌ನಲ್ಲಿ ಸಣ್ಣ ಪ್ರಮಾಣದ ಹೂಡಿಕೆ ಮಾಡುವ ಮೂಲಕ ಇ-ಕಾಮರ್ಸ್‌ ಕ್ಷೇತ್ರದಲ್ಲಿಯೂ ಪ್ರವೇಶ ಮಾಡಿದಂತಾಗುತ್ತದೆ. ಮೂರು ತಿಂಗಳ ಹಿಂದಷ್ಟೇ ಚೀನಾದಲ್ಲಿ ಇ-ಕಾಮರ್ಸ್‌ ವಿಭಾಗವನ್ನು ಜೆಡಿ.ಕಾಮ್‌ಗೆ ಮಾರಾಟ ಮಾಡಿತ್ತು. ಈ ಡೀಲ್‌ನ ಜತೆಗೆ ಅಮೆರಿಕದಲ್ಲಿ ಜೆಟ್‌.ಕಾಮ್‌ ಅನ್ನು 3 ಬಿಲಿಯನ್‌ ಡಾಲರ್‌ ಮೊತ್ತದಲ್ಲಿ ಖರೀದಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ‘ವಾಲ್‌ಮಾರ್ಟ್‌’ ಮತ್ತು ‘ಫ್ಲಿಪ್‌ಕಾರ್ಟ್‌’ ನಿರಾಕರಿಸಿವೆ.

click me!