ಪಾಕ್ ಬಹುತೇಕ ಏಕಾಂಗಿ: ಸಾರ್ಕ್ ಸಭೆಗೆ ಭಾರತ ಸೇರಿ 4 ರಾಷ್ಟ್ರಗಳು ಗೈರು

By Internet DeskFirst Published Sep 28, 2016, 8:43 AM IST
Highlights

ನವದೆಹಲಿ(ಸೆ. 28): ಪಾಕಿಸ್ತಾನದಲ್ಲಿ ನಡೆಯಲಿರುವ 19ನೇ ಸಾರ್ಕ್ ಶೃಂಗಸಭೆಯಲ್ಲಿ ಭಾರತ ಸೇರಿದಂತೆ ನಾಲ್ಕು ರಾಷ್ಟ್ರಗಳು ಗೈರಾಗಲು ನಿರ್ಧರಿಸಿವೆ. ಪಾಕಿಸ್ತಾನದಿಂದಾಗಿ ಪ್ರದೇಶದ ವಾತಾವರಣ ಕಲುಷಿತಗೊಂಡಿರುವ ಕಾರಣವೊಡ್ಡಿ ಭಾರತ, ಆಫ್ಘಾನಿಸ್ತಾನ, ಭೂತಾನ್ ಮತ್ತು ಬಾಂಗ್ಲಾದೇಶಗಳು ಸಭೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿವೆ. ಮೇಲೆ ತಿಳಿಸಿದ ನಾಲ್ಕು ರಾಷ್ಟ್ರಗಳನ್ನೊಳಗೊಂಡಂತೆ ಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ನೇಪಾಳ ದೇಶಗಳು ಸಾರ್ಕ್ ಒಕ್ಕೂಟದಲ್ಲಿವೆ. ನವೆಂಬರ್'ನಲ್ಲಿ ಪಾಕ್ ರಾಜಧಾನಿ ಇಸ್ಲಾಮಾಬಾದ್'ನಲ್ಲಿ ಸಾರ್ಕ್ ಶೃಂಗ ಸಭೆ ನಡೆಯಲಿದೆ.

ಬಾಂಗ್ಲಾದೇಶವು ಸಾರ್ಕ್ ಸಭೆಗೆ ತಾನು ಗೈರಾಗಲು ಪಾಕಿಸ್ತಾನವನ್ನು ಪರೋಕ್ಷವಾಗಿ ದೂಷಿಸಿದೆ. ತನ್ನ ಆಂತರಿಕ ವಿಷಯದಲ್ಲಿ ಬೇರೊಂದು ರಾಷ್ಟ್ರದಿಂದ ಹಸ್ತಕ್ಷೇಪ ಹೆಚ್ಚಾಗುತ್ತಿದ್ದು, ಇದರಿಂದ ವಾತಾವರಣ ಕಲುಷಿತವಾಗಿದೆ. ಹೀಗಾಗಿ ತಾನು ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಾಂಗ್ಲಾದೇಶ ದೂರಿದೆ. ಅಚ್ಚರಿ ಎಂದರೆ, ಸಾರ್ಕ್ ಒಕ್ಕೂಟಕ್ಕೆ ಮೊದಲು ಚಾಲನೆ ಕೊಟ್ಟಿದ್ದೇ ಬಾಂಗ್ಲಾದೇಶ. ಹೀಗಾಗಿ, ಬಾಂಗ್ಲಾದೇಶದ ಈ ನಿರ್ಧಾರ ನಿಜಕ್ಕೂ ಗಮನಾರ್ಹ. ದಕ್ಷಿಣ ಏಷ್ಯಾದ ಸೌಹಾರ್ದ ಹಾಗೂ ಶಾಂತ ವಾತಾವರಣವು ಪಾಕಿಸ್ತಾನದಿಂದ ಹದಗೆಡುತ್ತಿರುವುದಕ್ಕೆ ಬಾಂಗ್ಲಾದೇಶದ ಈ ನಿರ್ಧಾರ ಸಾಕ್ಷಿಯಾಗಿದೆ.

Latest Videos

ಇನ್ನು, ಭೂತಾನ್ ಕೂಡ ತಾನು ಸಾರ್ಕ್ ಸಭೆಗೆ ಗೈರಾಗಲು ಭಯೋತ್ಪಾದನೆಯೇ ಕಾರಣ ಎಂದು ಹೇಳಿದೆ. ಪ್ರದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದ್ದು, ಸಾರ್ಕ್ ಸಭೆಗೆ ಪೂರಕವಾದ ವಾತಾವರಣವಿಲ್ಲದಿರುವುದರಿಂದ ತಾನು ಭಾಗವಹಿಸುತ್ತಿಲ್ಲ ಎಂದು ತಿಳಿಸಿದೆ. ಆಫ್ಘಾನಿಸ್ತಾನ ಕೂಡ ಇದೇ ಕಾರಣ ಕೊಟ್ಟು ಸಾರ್ಕ್ ಸಭೆಗೆ ಭಾಗಹಿಸಲು ಹಿಂದೇಟು ಹಾಕಿದೆ.

ಇನ್ನು, ಉರಿ ಸೆಕ್ಟರ್'ನ ಸೇನಾ ನೆಲೆಯ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ಘಟನೆಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸುತ್ತಿರುವ ಭಾರತ ಇದೇ ವಿಚಾರವಾಗಿ ಸಾರ್ಕ್ ಸಮ್ಮೇಳನದಿಂದ ಹಿಂದೆ ಸರಿಯುವುದಾಗಿ ಹೇಳಿದೆ.

click me!