ಇದೇನು ಜೈಲಾ? ಜೈಲುಗಳಲ್ಲಿ ಕೈದಿಗಳ ಬಿಂದಾಸ್ ಕೇಕ್ ಪಾರ್ಟಿ; ಜಲ್ಸಾ ಡ್ಯಾನ್ಸ್

By Suvarna Web DeskFirst Published Jul 17, 2017, 12:57 PM IST
Highlights

ಬೆಳಗಾವಿಯ ಹಿಂಡಲಗಾ ಜೈಲಿನಲ್ಲೂ ಕೈದಿಗಳು ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಮಂಡ್ಯ ಮೂಲದ ಕೈದಿ ಚೇತನ್'ಗೌಡ ಎಂಬಾತ ಬರೋಬ್ಬರಿ 50 ಸಾವಿರ ರೂಪಾಯಿ ವೆಚ್ಚ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಜೈಲಿನೊಳಗೆಯೇ ಕೈದಿಗಳಿಂದ ಪಾರ್ಟಿ ನಡೆದಿದ್ದರೂ ಏನೂ ಆಗಿಲ್ಲ ಎಂದು ಅಲ್ಲಿನ ಜೈಲು ಅಧೀಕ್ಷಕ ಟಿ.ಪಿ.ಶೇಷ ಹೇಳುತ್ತಾರೆ.

ಬೆಂಗಳೂರು(ಜುಲೈ 17): ರಾಜ್ಯದ ಜೈಲುಗಳಲ್ಲಿ ಸ್ವೇಚ್ಛಾಚಾರ ತಾಂಡವವಾಡುತ್ತಿರುವುದಕ್ಕೆ ಇನ್ನಷ್ಟು ನಿದರ್ಶನಗಳು ಸಿಕ್ಕಿವೆ. ಜೈಲಿನಲ್ಲೇ ಕೈದಿಗಳು ಹುಟ್ಟುಹಬ್ಬ ಆಚರಿಸಿಕೊಂಡ ಘಟನೆಗಳು ಬೆಳಕಿಗೆ ಬಂದಿವೆ. ಇದನ್ನು ನೋಡಿದರೆ ಶಶಿಕಲಾ ಮತ್ತು ಕರೀಂ ಲಾಲ್ ತೆಲಗಿಗೆ ಐಷಾರಾಮಿ ವಾಸದ ವ್ಯವಸ್ಥೆ ಒದಗಿಸಿರುವ ಸುದ್ದಿಯಲ್ಲಿ ಏನೂ ವಿಶೇಷತೆ ಇಲ್ಲವೆನಿಸುವುದು ಸಹಜ. ದುಡ್ಡಿರುವ ಕೈದಿಗಳ ಬಿಂದಾಸ್ ವರ್ತನೆಗಳು ಒಂದೆಡೆಯಾದರೆ, ಅವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಅಮಾಯಕ ಕೈದಿಗಳನ್ನು ಜೈಲು ಸಿಬ್ಬಂದಿ ಟಾರ್ಗೆಟ್ ಮಾಡುತ್ತಿರುವ ಘಟನೆಗಳೂ ವರದಿಯಾಗಿವೆ.

ಪಿಸ್ತೂಲ್ ಮಾದರಿಯಲ್ಲಿ ಕೇಕ್:
ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲೇ ಕೈದಿಗಳು ಭರ್ಜರಿ ಬರ್ತ್​ಡೇ ಮಾಡಿದ್ದಾರೆ. ಕೊಲೆ ಪ್ರಕರಣದ ಆರೋಪದ ಮೇಲೆ ವಿಚಾರಣಾಧೀನ ಕೈದಿಯಾಗಿರುವ ಶ್ರೀನಿವಾಸ್ ಎಂಬಾತ ಸೆಂಟ್ರಲ್ ಜೈಲು ಆವರಣದಲ್ಲೇ ಬಿಂದಾಸ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಅಧಿಕಾರಿಗಳಿಗೆ ದುಡ್ಡು ಕೊಟ್ಟು ಈ ಪಾರ್ಟಿ ಮಾಡಲಾಗಿದೆ. ಕೈದಿಗಳು ಕಾರಾಗೃಹದ ‘ಇ’ ಬ್ಲಾಕ್​ನಲ್ಲಿ ಬಂದೂಕು ಮಾದರಿಯ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ವಿಶೇಷವೆಂದರೆ, ಈ ಬರ್ತ್'​ಡೇ ಪಾರ್ಟಿಯಲ್ಲಿ ಶ್ರೀನಿವಾಸ್ ಕುಟುಂಬದ 10ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಜೊತೆಗೆ ಸಹ ಕೈದಿಗಳಿಗೂ ಪಾರ್ಟಿ ನೀಡಲಾಗಿದೆ. ಕೈದಿಗಳು ಕೇಕ್​ ಕತ್ತರಿಸಿ ಪಾರ್ಟಿ ಮಾಡುತ್ತಿರುವ ವಿಡಿಯೋ, ಫೋಟೋಗಳು ಬಹಿರಂಗವಾಗಿದ್ದು, ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲಿನಲ್ಲಿ ಮತ್ತೊಂದು ಕರ್ಮಕಾಂಡ ಬಯಲಾದಂತೆ ಅಗಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಜಲ್ಸಾ ಪಾರ್ಟಿ:
ಪರಪ್ಪನ ಅಗ್ರಹಾರ ಜೈಲಿನಲ್ಲೇ ಮತ್ತೊಂದು ಕೈದಿಗಳ ಗುಂಪು ಮಸ್ತ್ ಡ್ಯಾನ್ಸ್ ಮಾಡಿ ಪಾರ್ಟಿ ಮಾಡಿಕೊಂಡಿದೆ. ಆನೇಕಲ್'ನಲ್ಲಿ ಮೂರು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣದ ಆರೋಪಿಗಳಾದ ಮಂಜು, ಆನಂದ ಮತ್ತಿತರ ಕೈದಿಗಳು ಪಾರ್ಟಿ ಮಾಡಿದ್ದಾರೆ. ಹೊರಗಡೆಯಿಂದ ಕೇಕ್ ತರಿಸಿ ಕತ್ತರಿಸಿ, ಡ್ಯಾನ್ಸ್ ಮಾಡಿಕೊಂಡು ಎಂಜಾಯ್ ಮಾಡಿದ ಈ ಕೈದಿಗಳು ಕ್ಯಾಮೆರಾಗೂ ಪೋಸ್ ಕೊಟ್ಟಿದ್ದಾರೆ.

ಹಿಂಡಲಗಾ ಜೈಲಿನಲ್ಲಿ...
ಬೆಳಗಾವಿಯ ಹಿಂಡಲಗಾ ಜೈಲಿನಲ್ಲೂ ಕೈದಿಗಳು ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಮಂಡ್ಯ ಮೂಲದ ಕೈದಿ ಚೇತನ್'ಗೌಡ ಎಂಬಾತ ಬರೋಬ್ಬರಿ 50 ಸಾವಿರ ರೂಪಾಯಿ ವೆಚ್ಚ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಜೈಲಿನೊಳಗೆಯೇ ಕೈದಿಗಳಿಂದ ಪಾರ್ಟಿ ನಡೆದಿದ್ದರೂ ಏನೂ ಆಗಿಲ್ಲ ಎಂದು ಅಲ್ಲಿನ ಜೈಲು ಅಧೀಕ್ಷಕ ಟಿ.ಪಿ.ಶೇಷ ಹೇಳುತ್ತಾರೆ.

click me!