ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಸಬ್‌ಮರೀನ್‌ ಶೋಧಿಸಿದ್ದ ಭಾರತ

By Web DeskFirst Published Jun 24, 2019, 11:18 AM IST
Highlights

ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಸಬ್‌ಮರೀನ್‌ ಶೋಧಿಸಿದ್ದ ಭಾರತ| 21 ದಿನಗಳ ಕಾಲ ಸಮುದ್ರ ಜಾಲಾಡಿದ್ದ ನೌಕೆ, ವಿಮಾನಗಳು| ಬಾಲಾಕೋಟ್‌ ದಾಳಿ ಬೆನ್ನಲ್ಲೇ ಕಣ್ಮರೆಯಾಗಿದ್ದ ಸಬ್‌ಮರಿನ್‌|  ಭಾರತದ ಮೇಲೆ ದಾಳಿಗೆ ಬರಬಹುದೆಂದು ಮುನ್ನೆಚ್ಚರಿಕೆ

ನವದೆಹಲಿ[ಜೂ.24]: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್‌ ಮೇಲೆ ವಾಯು ದಾಳಿ ನಡೆಸಿ ಉಗ್ರಗಾಮಿ ಶಿಬಿರಗಳನ್ನು ಧ್ವಂಸಗೊಳಿಸಿದ್ದ ಭಾರತ, ಅದಾಗಿ 21 ದಿನಗಳ ಕಾಲ ಪಾಕಿಸ್ತಾನದ ಜಲಾಂತರ್ಗಾಮಿ ನೌಕೆ (ಸಬ್‌ಮರೀನ್‌ಗಾಗಿ)ಯೊಂದಕ್ಕಾಗಿ ಅರಬ್ಬೀ ಸಮುದ್ರವನ್ನು ಜಾಲಾಡಿದ್ದ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಪಾಕಿಸ್ತಾನ ಹೊಂದಿರುವ ಪಿಎನ್‌ಎಸ್‌ ಸಾದ್‌ ಎಂಬ ಜಲಾಂತರ್ಗಾಮಿ ನೌಕೆ ಬಾಲಾಕೋಟ್‌ ದಾಳಿ ಬೆನ್ನಲ್ಲೇ ಕಣ್ಮರೆಯಾಗಿತ್ತು. ಪಾಕಿಸ್ತಾನದ ಬಳಿ ಇರುವ ಎಲ್ಲ ನೌಕೆಗಳ ಮೇಲೆ ಹದ್ದಿನಗಣ್ಣಿಟ್ಟಿರುವ ಭಾರತೀಯ ನೌಕಾಪಡೆಗೆ ಈ ಬೆಳವಣಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಸಾಮಾನ್ಯ ಸಬ್‌ಮರೀನ್‌ಗಳಿಗಿಂತ ಹೆಚ್ಚು ಕಾಲ ನೀರಿನೊಳಗೆ ಇರುವ ತಂತ್ರಜ್ಞಾನ ಹೊಂದಿರುವ ಈ ನೌಕೆ ಭಾರತದ ಮೇಲೆ ದಾಳಿ ಮಾಡಬಹುದು ಎಂಬ ಭೀತಿ ಹುಟ್ಟಿತು.

ಹೀಗಾಗಿ ಸಾದ್‌ ನೌಕೆ ಹುಡುಕಲು ಯುದ್ಧ ನೌಕೆಗಳು, ಯುದ್ಧ ವಿಮಾನಗಳು, ಸರ್ವೇಕ್ಷಣಾ ವಿಮಾನಗಳು, ಪರಮಾಣು ಚಾಲಿತ ಸಬ್‌ಮರೀನ್‌ಗಳು ಸೇರಿದಂತೆ ತನ್ನಲ್ಲಿರುವ ಬಹುಪಾಲು ನೌಕೆಗಳನ್ನು ಪಾಕಿಸ್ತಾನಕ್ಕೆ ಸಮೀಪವಿರುವ ಸಾಗರದಲ್ಲಿ ಭಾರತ ನಿಯೋಜಿಸಿತು. ಉಪಗ್ರಹಗಳನ್ನೂ ಬಳಸಿಕೊಂಡಿತು. ಏಕಾಏಕಿ ಭಾರತೀಯ ನೌಕೆಗಳು ತನ್ನ ಜಲಸೀಮೆಗೆ ಸನಿಹದಲ್ಲಿ ಅಡ್ಡಾಡುತ್ತಿರುವುದನ್ನು ಕಂಡ ಪಾಕಿಸ್ತಾನ, ಪುಲ್ವಾಮಾ ದಾಳಿಗೆ ಭಾರತ ಮತ್ತೊಂದು ಪ್ರತೀಕಾರ ತೀರಿಸಿಕೊಳ್ಳಲು ಹೊಂಚು ಹಾಕುತ್ತಿರಬಹುದು ಎಂದು ಹೆದರಿ ಕಂಗಾಲಾಗಿ ಹೋಗಿತ್ತು.

21 ದಿನಗಳ ಕಾಲ ಸಬ್‌ಮರಿನ್‌ಗಾಗಿ ಶೋಧ ನಡೆಸಿದ ಬಳಿಕ, ಪಾಕಿಸ್ತಾನ ಪಶ್ಚಿಮ ದಿಕ್ಕಿನಲ್ಲಿ ಸಾದ್‌ ನೌಕೆ ಇರುವುದು ಪತ್ತೆಯಾಯಿತು. ಆ ನೌಕೆಯನ್ನು ಪಾಕಿಸ್ತಾನ ಅಡಗಿಸಿಡಲು ಕಳುಹಿಸಿತ್ತು ಎಂಬ ವಿಷಯ ತಿಳಿದು ನಿರಾಳವಾಯಿತು ಎಂದು ಮೂಲಗಳು ತಿಳಿಸಿವೆ.

click me!