ಬರದ ಸಮಸ್ಯೆಯನ್ನೂ ಮೋದಿ ಆಲಿಸಲಿಲ್ಲ: ಪಿಎಂ ಬಗ್ಗೆ ಸಿಎಂ ಸಿದ್ದರಾಮಯ್ಯ ಬೇಸರ

Published : Dec 11, 2016, 06:11 AM ISTUpdated : Apr 11, 2018, 12:59 PM IST
ಬರದ ಸಮಸ್ಯೆಯನ್ನೂ ಮೋದಿ ಆಲಿಸಲಿಲ್ಲ: ಪಿಎಂ ಬಗ್ಗೆ ಸಿಎಂ ಸಿದ್ದರಾಮಯ್ಯ ಬೇಸರ

ಸಾರಾಂಶ

"ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ಶುಕ್ರ​ವಾರ ಸಮಯ ಕೋರಿದ್ದೆ. ಅದರಂತೆ ಗುರು​ವಾರವೇ ದೆಹಲಿಗೆ ತೆರಳಿದ್ದೆ. ಆದರೆ ಕೊನೆವ​ರೆಗೂ ಪ್ರಧಾನಿ ಸಮಯಾವಕಾಶವನ್ನೇ ನೀಡಲಿಲ್ಲ"

ಬೆಂಗಳೂರು: ದೇಶದ ಪ್ರಧಾನಿಯೊಬ್ಬರು ಒಂದು ರಾಜ್ಯದ ಸಿಎಂ ಜತೆ ಚರ್ಚಿಸಲು ಸಮಯಾ ವ​ಕಾಶವನ್ನೇ ನೀಡದಿರುವುದು ಒಕ್ಕೂಟ ವ್ಯವ​ಸ್ಥೆಗೆ ಗೌರವ ತರುವುದಿಲ್ಲ ಎಂದು ಸಿದ್ದರಾಮಯ್ಯ ಮೋದಿ ವರ್ತನೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.​ನಿಜಲಿಂಗಪ್ಪನವರ ಜನ್ಮದಿನದ ಅಂಗವಾಗಿ ಶನಿವಾರ ವಿಧಾನಸೌಧದ ಆವರಣದಲ್ಲಿರುವ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ಶುಕ್ರ​ವಾರ ಸಮಯ ಕೋರಿದ್ದೆ. ಅದರಂತೆ ಗುರು​ವಾರವೇ ದೆಹಲಿಗೆ ತೆರಳಿದ್ದೆ. ಆದರೆ ಕೊನೆವ​ರೆಗೂ ಪ್ರಧಾನಿ ಸಮಯಾವಕಾಶವನ್ನೇ ನೀಡಲಿಲ್ಲ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದ​ರು. 

ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಪರಿಹಾರ ಕಾಮಗಾರಿಗಳಿಗೆ ಕೇಂದ್ರದ ನೆರವು ಅಗತ್ಯವಿದೆ. ಇದನ್ನು ಹೇಳಿಕೊಳ್ಳಲು ಒಂದು ರಾಜ್ಯದ ಮುಖ್ಯಮಂತ್ರಿ ಭೇಟಿಗೆ ಸಮಯ ಕೇಳಿದರೆ ಕೊಟ್ಟಿಲ್ಲ. ಇದರ ಜೊತೆಗೆ ಮಹದಾಯಿ ನದಿ ನೀರು ವಿವಾದ ಕುರಿತು ವಿಧಾನ ಮಂಡಲದ ಉಭಯ ಸದನಗಳಲ್ಲಿ ಚರ್ಚೆ​ಯಾಗಿದೆ. ಸದನದ ಅಭಿಪ್ರಾಯವನ್ನು ಪ್ರಧಾನಿಯವರಿಗೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಧಾನಿಯವರ ಭೇಟಿಗೆ ಸಮಯ ಕೋರಲಾಗಿತ್ತು ಎಂದು ವಿವರಿಸಿದರು.

ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಬಿಡುಗಡೆ ಮಾಡಿರುವ ಅನುದಾನವನ್ನು ರಾಜ್ಯ ಬಳಕೆ ಮಾಡಿರುವ ಕುರಿತು ವಿವರ ನೀಡುವಂತೆ ಬಿಜೆಪಿ ಸಂಸದರು ಕೇಳಿದ್ದಾರೆ. ಯಡಿಯೂರಪ್ಪ ಮತ್ತು ಕರಂದ್ಲಾಜೆ ಅವರಿಗೆ ವ್ಯವಸ್ಥೆ ಕುರಿತು ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚನೆಯಾಗುತ್ತದೆ. ಪ್ರಕೃತಿ ವಿಕೋಪ ನಿರ್ವಹಣೆಗೆ ಎಷ್ಟುಹಣ ನಿಗದಿ ಮಾಡಬೇಕು ಎಂಬುದನ್ನು ಆಯೋಗ ಶಿಫಾರಸು ಮಾಡುತ್ತದೆ. ನೆರೆ ಮತ್ತು ಬರ ಬಂದಾಗ ನಿಯಮಗಳ ಅನ್ವಯ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿಯಾಗಿದ್ದ ಮನ​ಮೋಹನ್‌ ಸಿಂಗ್‌ ರಾಜ್ಯಕ್ಕೆ ಒಂದೂವರೆ ಸಾವಿರ ಕೋಟಿ ರು. ನೆರವು ಘೋಷಿಸಿದ್ದರು ಎಂದರು. 

ನೆರೆ ಮತ್ತು ಬರ ಪರಿಹಾರ ಕಾಮಗಾರಿಗಳಿಗೆ ನೆರವಾಗು ವಂತೆ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಲ್ಲಿ ರೂ.17ರಿಂದ ರೂ.18 ಸಾವಿರ ಕೋಟಿ ಬೆಳೆ ನಷ್ಟಸಂಭವಿಸಿದೆ. ನಿಯಮಗಳನ್ವಯ ಬರ ಪರಿಹಾರ ಕಾಮಗಾರಿಗೆ ರೂ.4,702 ಕೋಟಿ ನೀಡಬೇಕು ಎಂದೂ ಕೋರಿದ್ದೇವೆ. ಪ್ರವಾಹದಿಂದ ಆಗಿರುವ ಬೆಳೆ ಹಾನಿಗೆ ಪರಿಹಾರವಾಗಿ ರೂ.376 ಕೋಟಿಗೆ ಬೇಡಿಕೆ ಇಟ್ಟಿದ್ದೇವೆ. ನಷ್ಟದ ಮೊತ್ತವನ್ನು ಪೂರ್ಣವಾಗಿ ಭರಿ ಸುವಂತೆ ಕೇಳಿಲ್ಲ. ಎನ್‌ಡಿಆರ್‌ಎಫ್‌ ಮತ್ತು ಎಸ್‌ಟಿಆರ್‌ಎಫ್‌ ನಿಯಮಗಳ ಅನ್ವಯ ಬರಬೇಕಿರುವ ಅನುದಾನ ಬಿಡುಗಡೆ ಮಾಡುವಂತೆ ಕೇಳಲಾಗಿದೆ ಎಂದು ವಿವರಿಸಿದರು.

ನಿಜಲಿಂಗಪ್ಪ ಸ್ಮರಣೆ: ಎಸ್‌.ನಿಜಲಿಂಗಪ್ಪ ಈ ದೇಶ ಕಂಡ ಮುತ್ಸದ್ದಿ ರಾಜಕಾರಣಿ. ಮುಖ್ಯ ಮಂತ್ರಿಯಾಗಿ ಆರ್ಥಿಕ, ಸಾಮಾಜಿಕ ಮತ್ತು ವಿಶೇಷವಾಗಿ ನೀರಾವರಿ, ವಿದ್ಯುತ್‌ ಉತ್ಪಾದನೆಗೆ ಆದ್ಯತೆ ಕೊಟ್ಟಿದ್ದರು. ನಿಜಲಿಂಗಪ್ಪ ಸೇವೆ ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

(epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ